Advertisement

Government Decision; ದಲಿತ ವಿದ್ಯಾರ್ಥಿಗಳಿಗೆ ಬಂಪರ್‌: 15,000 ಸ್ಟೈ ಫಂಡ್‌

12:42 AM Jul 06, 2024 | Team Udayavani |

ಬೆಂಗಳೂರು: ಐಎಎಸ್‌, ಐಪಿಎಸ್‌, ಐಆರ್‌ಎಸ್‌ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಳಿಗಾಗಿ ದಿಲ್ಲಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಉತ್ತಮ ಹಾಸ್ಟೆಲ್‌ ಕಟ್ಟಿಸುವ ಜತೆಗೆ ತಿಂಗಳಿಗೆ 15 ಸಾವಿರ ರೂಪಾಯಿ ಸಹಾಯ ಧನ ನೀಡಲು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಅಭಿವೃದ್ಧಿ ಪರಿಷತ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

Advertisement

ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸದ್ಯ 10 ಸಾವಿರ ಸಹಾಯಧನ ಕೊಡಲಾಗುತ್ತಿದ್ದು, ಈ ವರ್ಷದಿಂದ 5 ಸಾವಿರ ರೂ. ಹೆಚ್ಚಿಸಲಾಗುವುದು. ಈ ಸಂಬಂಧ ತತ್‌ಕ್ಷಣ ಆದೇಶ ಹೊರಡಿಸಲಾಗುವುದು. ದಿಲ್ಲಿ ಹಾಸ್ಟೆಲ್‌ನಲ್ಲಿ ಹೈಟೆಕ್‌ ಲೈಬ್ರರಿ ಮಾಡಲಾಗುವುದು. ಅಲ್ಲಿ ಎಲ್ಲ ರೀತಿಯ ಪುಸ್ತಕಗಳು ಸಿಗುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಕಾರ್ಯಕ್ರಮಗಳಿಗಾಗಿ ಈ ವರ್ಷ 39,121.46 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಅನುಮತಿ ನೀಡಲಾಗಿದೆ. ಈ ಪೈಕಿ ಪರಿಶಿಷ್ಟ ಜಾತಿಗೆ 27,673.93 ಕೋಟಿ ರೂ. ಪರಿಶಿಷ್ಟ ಜಾತಿಗೆ 11,445.51 ಕೋಟಿ ರೂ. ಮೀಸಲಿಡಲಾಗಿದೆ. ಹಿಂದಿನ ವರ್ಷ 97.81 ಕೋಟಿ ಉಳಿತಾಯವಾಗಿದೆ. ಈ ಹಣವೂ ಸೇರಿದೆ. ಕಳೆದ ವರ್ಷಕ್ಕಿಂತ ಈ ವರ್ಷ 3,900 ಕೋಟಿ ರೂ. ಹೆಚ್ಚಾಗಿದೆ. ಈ ಹಣ ಇಲಾಖೆಗಳಿಗೆ ಹಂಚಿಕೆಯಾಗಿದ್ದು ಇದರ ಸದುಪಯೋಗ ಆಗಬೇಕು. ಸಮಾಜ ಕಲ್ಯಾಣ ಇಲಾಖೆ, ನಿಗಮಗಳು ಕಾಯ್ದೆಯ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ಶೇ. 100 ಸಾಧನೆ ಆಗಬೇಕು
ಈ ವರ್ಷ ಶೇ. 100 ಸಾಧನೆ ಆಗಬೇಕು. ಇದರಲ್ಲಿ ನಿರ್ಲಕ್ಷ್ಯ ಮಾಡಿದವರ ಮೇಲೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಕಾಯ್ದೆಯಲ್ಲಿದ್ದ 7ಇ ರದ್ದು ಮಾಡಿದ ರೀತಿಯಲ್ಲಿ 7ಡಿ ಕೂಡ ರದ್ದು ಮಾಡಬೇಕು ಎಂದು ಶಾಸಕ ನರೇಂದ್ರಸ್ವಾಮಿ ಸಲಹೆ ನೀಡಿದ್ದಾರೆ. ಈ ಸಲಹೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುವುದು ಎಂದರು.

ಖಾಲಿ ಇರುವ ಎಲ್ಲ ಹೋಬಳಿಗಳಲ್ಲೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಆರಂಭಿಸಲೇಬೇಕು. ಆಯಾ ಹೋಬಳಿಯ ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಸೀಟು, ಉಳಿದ ಶೇ. 25ರಷ್ಟು ಸೀಟುಗಳನ್ನು ಇತರ ಪ್ರದೇಶದ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ ನೀಡಬೇಕು. ಬಜೆಟ್‌ನಲ್ಲಿ ನಾವು ಘೋಷಿಸಿರುವ ಎಲ್ಲ ಕಾರ್ಯಕ್ರಮಗಳನ್ನೂ ನೀವು ಜಾರಿ ಮಾಡಲೇಬೇಕು. ಹಿಂದಿನ ಬಿಜೆಪಿ ಸರಕಾರ ಮೂರು ವರ್ಷ ಕ್ರೈಸ್‌ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಮಕ್ಕಳಿಗೆ ಬಾತ್‌ ರೂಮ್‌ ಕಿಟ್‌ ಕೊಟ್ಟಿರಲಿಲ್ಲ. ಈಗ ನಾವು ಸರಿಯಾಗಿ ವಿತರಿಸುತ್ತಿದ್ದೇವೆ. 3 ತಿಂಗಳ ಬಳಿಕ ಮತ್ತೂಮ್ಮೆ ಪರಿಷತ್‌ ಸಭೆ ಕರೆಯುತ್ತೇವೆ. ಯಾರಿಂದ ಲೋಪ ಆಗಿದೆ ಎಂದು ಗೊತ್ತಾದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಯೋಜನೆಯ ಮೌಲ್ಯಮಾಪನ
ಕಳೆದ 10 ವರ್ಷದಲ್ಲಿ ಈ ಯೋಜನೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಈ ವರ್ಷ ಮನೆ-ಮನೆಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗುವುದು. ಸಮುದಾಯದ ಮೇಲೆ ಬೀರಿರುವ ಪರಿಣಾಮ, ಸಮುದಾಯಕ್ಕೆ ಯೋಜನೆ ತಲುಪಿರುವ ಪ್ರಮಾಣದ ಬಗ್ಗೆ, ಹಾಗೂ ಅವರ ಆರ್ಥಿಕ ಸ್ಥಿತಿ ಪ್ರಗತಿ ಆಗಿರುವ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು. ಕಳೆದ ವರ್ಷ ಯಾದ್ರಚ್ಛಿಕವಾಗಿ ಅಧ್ಯಯನ ನಡೆಸಿದ್ದು ಶೇ. 65ರಷ್ಟು ಯಶಸ್ಸು ಕಂಡು ಬಂದಿದೆ. ಈ ವರ್ಷ ಸಂಪೂರ್ಣ ಅಧ್ಯಯನ ಹಾಗೂ ಮೌಲ್ಯಮಾಪನ ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಲ್ಯಾಪ್‌ಟಾಪ್‌ಗೆ 300 ಕೋಟಿ ರೂ?
ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವಂತೆ ಶಾಸಕ ನರೇಂದ್ರಸ್ವಾಮಿ ಸಲಹೆ ನೀಡಿದ್ದು, ಇದಕ್ಕೆ ಸುಮಾರು 300 ಕೋಟಿ ರೂ. ವೆಚ್ಚವಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಪಿಜಿ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ನೀಡಬೇಕೆಂಬ ಪ್ರಸ್ತಾವ ಇದೆ. ಇದಕ್ಕೆ ಹೆಚ್ಚುವರಿಯಾಗಿ 90 ಕೋಟಿ ರೂ. ಬೇಕು. ಈ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next