Advertisement

ವಿದ್ಯುತ್‌ ಸಬ್ಸಿಡಿಗೆ ಸರಕಾರದ ಕಡಿವಾಣ? ವಾರ್ಷಿಕ 15 ಸಾ.ಕೋ.ರೂ. ವಿದ್ಯುತ್‌ ಸಬ್ಸಿಡಿ ಸವಾಲು

12:49 AM Jul 03, 2022 | Team Udayavani |

ಬೆಂಗಳೂರು: ರೈತರ ಕೃಷಿ ಪಂಪ್‌ಸೆಟ್‌ ಸೇರಿದಂತೆ ಹೆಚ್ಚುತ್ತಿರುವ ವಿದ್ಯುತ್‌ ಸಬ್ಸಿಡಿ ಮೊತ್ತಕ್ಕೆ ಕಡಿವಾಣ ಹಾಕುವತ್ತ ರಾಜ್ಯ ಸರಕಾರ ಹೆಜ್ಜೆ ಇರಿಸಿದೆ. ಕೃಷಿ ಪಂಪ್‌ಸೆಟ್‌ ಸಬ್ಸಿಡಿಗೆ ಮಾನದಂಡ, ಸೋಲಾರ್‌ ಪಂಪ್‌ಸೆಟ್‌ಗೆ ಪ್ರೋತ್ಸಾಹ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ.

Advertisement

ವಿದ್ಯುತ್‌ ಸಬ್ಸಿಡಿ ಹೊರೆ ತಗ್ಗಿಸುವ ಸಂಬಂಧ ಯಾವೆಲ್ಲ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಮತ್ತು ಅದರ ಸಾಧಕ-ಬಾಧಕಗಳ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿದ್ಯುತ್‌ ಸಬ್ಸಿಡಿ ಮೊತ್ತ ವಾರ್ಷಿಕ 15 ಸಾವಿರ ಕೋಟಿ ರೂ. ತಲುಪಿರುವುದು ಸರಕಾರಕ್ಕೆ ಅತೀ ದೊಡ್ಡ ಹೊರೆಯಾಗಿದೆ. ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ. 40ರಿಂದ 52ರಷ್ಟು ಕೃಷಿ ಪಂಪ್‌ಸೆಟ್‌ಗಳಿಗೆ ಬಳಕೆಯಾಗುತ್ತಿದ್ದು, ಈ ಪ್ರಮಾಣ ಕಡಿಮೆಗೊಳಿಸಲು ತೀರ್ಮಾನಿಸಲಾಗಿದೆ.

ರಾಜ್ಯದ ಬಜೆಟ್‌ ಗಾತ್ರ 2.65 ಲಕ್ಷ ಕೋಟಿ. ಇದರಲ್ಲಿ 1.31 ಲಕ್ಷ ಕೋಟಿ ರೂ. ಬದ್ಧತಾ ವೆಚ್ಚ, ಸಬ್ಸಿಡಿ, ಸಾಲದ ಕಂತು ಮತ್ತು ಬಡ್ಡಿಗೆ ಹೋಗುತ್ತಿದೆ. ಇದರ ಜತೆಗೆ ಅನಗತ್ಯ ವೆಚ್ಚಗಳ ಪರಿಣಾಮ ಅಭಿವೃದ್ಧಿ ಯೋಜನೆಗಳಿಗೆ ಹಣದ ಕೊರತೆ ಎದುರಾಗಿದೆ. ಹೀಗಾಗಿ ಸಬ್ಸಿಡಿ ಹೊರೆ ತಗ್ಗಿಸುವ ಬಗ್ಗೆ ಸರಕಾರ ಚಿಂತನೆ ನಡೆಸಿದ್ದು, ಮುಖ್ಯವಾಗಿ ವಿದ್ಯುತ್‌ ಸಬ್ಸಿಡಿಗೆ ನಿಯಂತ್ರಣ ಹೇರಲು ಮುಂದಾಗಿದೆ.

ಸೋಲಾರ್‌ಗೆ ಮೊರೆ
ಮೊದಲ ಹೆಜ್ಜೆಯಾಗಿ ಪ್ರತೀ ವರ್ಷ 10 ಸಾವಿರ ಸೋಲಾರ್‌ ಕೃಷಿ ಪಂಪ್‌ಸೆಟ್‌ ಅಳವಡಿಕೆಗೆ ನಿರ್ಧ ರಿಸಿದೆ. ಪ್ರಸ್ತುತ ರಾಜ್ಯದಲ್ಲಿ 34 ಲಕ್ಷ ವಿದ್ಯುತ್‌ ಚಾಲಿತ ಕೃಷಿ ಪಂಪ್‌ಸೆಟ್‌ಗಳಿದ್ದು, 8 ಲಕ್ಷ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಇವುಗಳನ್ನು ವಿಲೇವಾರಿ ಮಾಡಿದರೆ ವಿದ್ಯುತ್‌ ಸಬ್ಸಿಡಿ ಮೊತ್ತ ಇನ್ನೂ ಹೆಚ್ಚಲಿದೆ. ಹೀಗಾಗಿ ಹೊಸದಾಗಿ ಪಂಪ್‌ಸೆಟ್‌ ಬಯಸುವವರಿಗೆ ಏಳು ಎಚ್‌ಪಿಗಳ ವರೆಗೆ ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆಗೆ ಉತ್ತೇಜನ ನೀಡಲು ಇಂಧನ ಇಲಾಖೆ ಕಾರ್ಯಕ್ರಮ ರೂಪಿ ಸಿದೆ. ಸಾಮಾನ್ಯ ವರ್ಗದ ರೈತರಿಂದ 1.50 ಲಕ್ಷ ರೂ. ಎಸ್‌ಸಿ-ಎಸ್‌ಟಿ ವರ್ಗದ

Advertisement

ರೈತರಿಂದ 80 ಸಾವಿರ
ರೂ. ಪಡೆದು ಉಳಿದ 3.50 ಲಕ್ಷ ರೂ.ಗಳನ್ನು ಸರಕಾರ ಭರಿಸಿ ಸೋಲಾರ್‌ ಪಂಪ್‌ಸೆಟ್‌ ಅಳವಡಿಸ ಲಾಗುತ್ತಿದೆ. ಮುಂದಿನ ಪ್ರತಿಕ್ರಿಯೆ ನೋಡಿಕೊಂಡು ವಾರ್ಷಿಕ ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರ್ಷಿಕ 15 ಸಾವಿರ ಕೋಟಿ ರೂ. ವಿದ್ಯುತ್‌ ಸಬ್ಸಿಡಿ ಹೊರೆಯಾಗಿದೆ ನಿಜ. ಹಾಗೆಂದು ರೈತರಿಗೆ ನಾವು ಸಹಾಯ ಮಾಡಲೇಬೇಕಿದೆ. ಹೀಗಾಗಿ ಹೊಸ ಮಾರ್ಗೋಪಾಯ ಹುಡುಕಿ ಹೊರೆ ಕಡಿಮೆ ಮಾಡಿ ಕೊಳ್ಳಲು ನಿರ್ಧರಿಸಲಾಗಿದೆ. ಅದರಲ್ಲಿ ಸೋಲಾರ್‌ ಪಂಪ್‌ಸೆಟ್‌ ಅಳವಡಿಕೆಯೂ ಒಂದು.
-ವಿ. ಸುನಿಲ್‌ ಕುಮಾರ್‌, ಇಂಧನ ಸಚಿವ

-  ಎಸ್‌. ಲಕ್ಷ್ಮೀನಾರಾಯಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next