Advertisement

ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧ

01:46 PM Feb 09, 2020 | Team Udayavani |

ಬೆಂಗಳೂರು: ರಾಜ್ಯದ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, “ಕರ್ನಾಟಕ ನೀತಿ 2019-23ರ ಕರಡು’ನ್ನು ರೂಪಿಸಿದೆ. ಶೀಘ್ರದಲ್ಲೇ ಇದನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Advertisement

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ “ನೆಲಮಂಗಲ ಹಾಗೂ ಹರಿಹರ ವಸಾಹತುಗಳ ಫ‌ಲಾನುಭವಿಗಳಿಗೆ (ಸಣ್ಣ ಕೈಗಾರಿಕಾ ಉದ್ದಿಮೆದಾರರಿಗೆ) ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು. ನೂತನ ಕೈಗಾರಿಕಾ ನೀತಿಯಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ನವೆಂಬರ್‌ನಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನ :  ಇತ್ತೀಚೆಗೆ ದಾವೋಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿ ನವೆಂಬರ್‌ 4, 5 ಮತ್ತು 6ರಂದು ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಣ್ಣ ಕೈಗಾರಿಕೆಗಳು ಕಳೆದ ಸಾಲಿನಲ್ಲಿ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ ಮೇಲಿನ ಬಡ್ಡಿದರವನ್ನು ಮನ್ನಾ ಮಾಡುವುದಾಗಿ ಸರ್ಕಾರ ಈಗಾಗಲೇ ಘೋಷಿಸಿದೆ. ಆದರೆ, ಕಾನೂನಿನ ತೊಡಕು ಉಂಟಾಗಿರುವುದರಿಂದ ಸಾಲಮನ್ನಾ ಪ್ರಸ್ತಾವನೆಗೆ ಕ್ಯಾಬಿನೆಟ್‌ ಮೂಲಕ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಏಳು ಲಕ್ಷ ಸಣ್ಣ ಕೈಗಾರಿಕೆಗಳಿದ್ದು, ಕೃಷಿಯ ನಂತರ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕ್ಷೇತ್ರವಾಗಿದೆ. ಹೀಗಾಗಿ, ಕೈಗಾರಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ. ಸಣ್ಣ ಕೈಗಾರಿಕೋದ್ಯಮಿಗಳು ಹೊಸ ವಿದ್ಯುತ್‌ ಸಂಪರ್ಕ ಅಥವಾ ಹೆಚ್ಚುವರಿ ವಿದ್ಯುತ್‌ ಸಂಪರ್ಕ ತೆಗೆದುಕೊಳ್ಳಬೇಕಾದರೆ ಸ್ವಾಧೀನ ಪತ್ರದ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು, ಕೈಗಾರಿಕೆಗಳಿಗೆ ಜಮೀನು ಖರೀದಿ ಪ್ರಕ್ರಿಯೆಯನ್ನು ಸರಳ ಮತ್ತು ಪಾರದರ್ಶಕ ಮಾಡಲಾಗುವುದು ಎಂದು ಭರವಸೆ ನೀಡಿದರು.

Advertisement

20-25 ಲಕ್ಷ ಉದ್ಯೋಗ ಸೃಷ್ಟಿ ಗುರಿ: ಕಾಸಿಯಾ ಅಧ್ಯಕ್ಷ ಆರ್‌.ರಾಜು ಮಾತನಾಡಿ, ಕಳೆದ 15ರಿಂದ 20 ವರ್ಷಗಳಿಂದ ನೆಲಮಂಗಲ ಹಾಗೂ ಹರಿಹರ ವಸಾಹತುಗಳ ಫ‌ಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈಗ ಅದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ ಎಂದರು. ಮುಂದಿನ ಮೂರು ವರ್ಷಗಳಲ್ಲಿ ಕಾಸಿಯಾ, 20ರಿಂದ 25 ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಗುರಿ ಹೊಂದಿದೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿ ನೀಡುವ ಉದ್ದೇಶದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯಲ್ಲಿ ಅಂದಾಜು 35 ಕೋಟಿ ರೂ.ವೆಚ್ಚದಲ್ಲಿ “ಕಾಸಿಯಾ ಸೆಂಟರ್‌ ಆಫ್ ಎಕ್ಸಲೆನ್ಸ್‌ ಆ್ಯಂಡ್‌ ಇನೋವೇಶನ್‌’ ಕಟ್ಟಡ ನಿರ್ಮಾಣಮಾಡಲಾಗುತ್ತಿದೆ. ಇದಕ್ಕೆ ಸರ್ಕಾರದಿಂದ 20 ಕೋಟಿ ರೂ.ಆರ್ಥಿಕ ನೆರವು ನೀಡಬೇಕು. ಅಲ್ಲದೆ, ಸೂಕ್ಷ್ಮಮತ್ತು ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಪ್ರೋತ್ಸಾಹ ಧನ, ಶೇ.4ರ ಬಡ್ಡಿ ದರದಲ್ಲಿ ಹಣಕಾಸು ಸೇವೆ ಸೇರಿದಂತೆ ಕಾಸಿಯಾ ಅಭಿವೃದ್ಧಿಗೆ ಪೂರಕವಾಗಿ ಸಹಾಯ ಮಾಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನೆಲಮಂಗಲದ 240 ಹಾಗೂ ಹರಿಹರದ 79 ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಕ್ಕುಪತ್ರ ಫ‌ಲಾನುಭವಿಗಳಾಗಿದ್ದು, ಶನಿವಾರ ಸಾಂಕೇತಿಕವಾಗಿ ನೆಲಮಂಗಲ ಮತ್ತು ಹರಿಹರದ ತಲಾ 10 ಜನರಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ಇದೇ ವೇಳೆ, ಕೈಟ್‌ ಪ್ರದರ್ಶನ ಸಮಾವೇಶದ ಚಿಹ್ನೆ ಬಿಡುಗಡೆ ಹಾಗೂ “ಬಿ’ಟು”ಬಿ’ ಪೋರ್ಟ್‌ಲ್‌ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಕೆ.ಗೋಪಾಲಯ್ಯ ಹಾಗೂ ಕಾಸಿಯಾದ ಗೌರವ ಪ್ರಧಾನ ಕಾರ್ಯದರ್ಶಿ ಎಂ.ಜಿ. ರಾಜಗೋಪಾಲ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next