Advertisement

ಅಧಿಕಾರಿಗಳ ಅನಪೇಕ್ಷಿತ ವರ್ತನೆಗಳಿಗೆ ಸರಕಾರದ ಕಡಿವಾಣ

11:07 PM Sep 19, 2021 | Team Udayavani |

ರಾಜ್ಯದಲ್ಲಿ ಉನ್ನತ ಅಧಿಕಾರಿಗಳ ಅದರಲ್ಲೂ ಐಎಎಸ್‌, ಐಪಿಎಸ್‌ ಅಧಿಕಾರಿಗಳ ನಡುವಣ ಕಿತ್ತಾಟ, ಜನಪ್ರತಿನಿಧಿಗಳೊಂದಿಗಿನ ಕಚ್ಚಾಟಗಳು ಕಳೆದ ಕೆಲವು ತಿಂಗಳುಗಳಿಂದೀಚೆಗೆ ಮಿತಿಮೀರಿರುವ ಹಿನ್ನೆಲೆಯಲ್ಲಿ ಸರ ಕಾರ ಅಧಿಕಾರಿಗಳಿಗೆ ಸುತ್ತೋಲೆಯ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.

Advertisement

ಎಲ್ಲ ಅಧಿಕಾರಿಗಳು ಸೇವಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಧ್ಯಮಗಳಿಗೆ ಅನಪೇಕ್ಷಿತ ಹೇಳಿಕೆ, ವೈಯಕ್ತಿಕ ಕುಂದು ಕೊರತೆ, ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳ ಟೀಕೆ, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ, ಅನಾಮಧೇಯ ಅಥವಾ ಬೇರೊಬ್ಬರ ಹೆಸರಿನಲ್ಲಿ ಖಾತೆ ತೆರೆದು ವ್ಯತಿರಿಕ್ತ ಅಭಿಪ್ರಾಯ ಹಂಚಿಕೊಳ್ಳುವುದನ್ನು ನಿಷೇಧಿಸಿದೆ. ಆಡಳಿತದ ಮೇಲೆ ದುಷ್ಪರಿಣಾಮ ಬೀರುವಂಥ, ಸರಕಾರದ ವರ್ಚಸ್ಸಿಗೆ ಧಕ್ಕೆ ಹಾಗೂ ಮುಜುಗರ ಉಂಟುಮಾಡುವಂಥ ಹೇಳಿಕೆಗಳನ್ನು ಅಧಿಕಾರಿಗಳು ನೀಡುವಂತಿಲ್ಲ. ಇದೇ ವೇಳೆ ಸರಕಾರದ ಯೋಜನೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಮತ್ತು ಅಧಿಕೃತ ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯವಿದ್ದಲ್ಲಿ ಮಾತ್ರವೇ ಪತ್ರಿಕಾಗೋಷ್ಠಿ ನಡೆಸಲು ಅಥವಾ ಮಾಧ್ಯಮಗಳನ್ನು ಬಳಸಿಕೊಳ್ಳಲು ಅವಕಾಶವಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮಾಜಿ ಸಚಿವ ಸಾ.ರಾ. ಮಹೇಶ್‌ ನಡುವಣ ವಾಕ್ಸಮರ ತಾರಕಕ್ಕೇರಿದ್ದು ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿದ್ದರು. ಗುರುವಾರ ವಿಧಾನ ಸಭೆಯಲ್ಲಿ ಸಾ.ರಾ.ಮಹೇಶ್‌ ಅವರು ಈ ವಿಚಾರವನ್ನು ಪ್ರಸ್ತಾವಿಸಿ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಅವಕಾಶ ಕೋರಿ ದ್ದರು. ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಸಂಬಂಧ ಸರಕಾರಕ್ಕೆ ಸೂಚನೆ ನೀಡುವುದಾಗಿ ಸದನಕ್ಕೆ ಭರವಸೆ ನೀಡಿದ್ದರು. ಈ ವೇಳೆ ಸಚಿವ ಆರ್‌. ಅಶೋಕ್‌ ಅವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದರು.

ಕಳೆದ ಕೆಲವು ತಿಂಗಳುಗಳಿಂದೀಚೆಗೆ ಕೆಲವೊಂದು ಐಎಎಸ್‌, ಐಪಿಎಸ್‌ ಅಧಿಕಾರಿಗಳ ನಡುವೆ ವಾಕ್ಸಮರ, ಕೆಲವೊಂದು ಮಹತ್ವದ ಪ್ರಕರಣಗಳ ತನಿಖೆಯ ಮಾಹಿತಿ ಸೋರಿಕೆ, ಜನಪ್ರತಿನಿಧಿಗಳಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ, ಹಿರಿಯ ಐಪಿಎಸ್‌ ಅಧಿಕಾರಿಯ ಸ್ವಯಂ ನಿವೃತ್ತಿ ಮತ್ತಿತರ ಪ್ರಕರಣಗಳು ಸರಕಾರಕ್ಕೆ ಭಾರೀ ಮುಜುಗರವನ್ನುಂಟು ಮಾಡಿದ್ದವು. ಇತ್ತೀಚೆಗೆ ನ್ಯಾಯಾಲಯ ಕೂಡ ಪ್ರಕರಣವೊಂದರ ತನಿಖೆಯ ಮಾಹಿತಿ ಸೋರಿಕೆ ಸಂಬಂಧ ಅಧಿಕಾರಿಗಳ ವರ್ತನೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಆಡಳಿತ ವ್ಯವಸ್ಥೆಯ ಪ್ರಧಾನ ಸ್ತಂಭವಾದ ಕಾರ್ಯಾಂಗದಲ್ಲಿ ಇಷ್ಟೆಲ್ಲ ರಾದ್ಧಾಂತಗಳು ನಡೆಯುತ್ತಿದ್ದರೂ ಸರಕಾರ ಚಕಾರ ಎತ್ತಿರಲಿಲ್ಲ. ಕೊನೆಗೂ ಸರಕಾರ ಈ ವಿಚಾರವಾಗಿ ಸಿಎ ಸ್‌ಮೂಲಕ ಹಾಲಿ ಇರುವ ಸೇವಾ ನಿರ್ಬಂಧ, ನಿಯಮಾವಳಿಗಳನ್ನು ನೆನಪಿಸಿರುವುದು ಸುಗಮ ಆಡಳಿತದ ದೃಷ್ಟಿ ಯಿಂದ ಒಳ್ಳೆಯ ಬೆಳವಣಿಗೆ ಯೇ. ಹಾಗೆಂದ ಮಾತ್ರಕ್ಕೆ ಸೇವಾ ನಿಯಮಗಳ ಹೆಸರಿನಲ್ಲಿ ಅಧಿಕಾರಿಗಳ ಬಾಯಿ ಮುಚ್ಚಿಸಿದಾಕ್ಷಣ ಅವರು ಎತ್ತಿರುವ ಕೆಲವೊಂದು ಮಹತ್ತರ ವಿಚಾರಗಳು ತೆರೆಮರೆಗೆ ಸರಿಯುವಂತಾಗಬಾರದು. ಈ ಬಗ್ಗೆ ಪರಿಶೀಲನೆ ನಡೆಸಿ ಆಗಿರುವ ಲೋಪದೋಷಗಳನ್ನು ಪತ್ತೆಹಚ್ಚಿ ಅವುಗಳನ್ನು ಸರಿಪಡಿ ಸುವ ಮತ್ತು ಮುಂದಿನ ದಿನಗಳಲ್ಲಿ ಇಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಸರಕಾರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next