Advertisement

ಶರಣಬಸವ ಖಾಸಗಿ ವಿವಿ ಸ್ಥಾಪನೆಗೆ ಸರ್ಕಾರ ಒಪ್ಪಿಗೆ

03:37 PM Apr 30, 2017 | Team Udayavani |

ಕಲಬುರಗಿ: ಗುಣಮಟ್ಟ ಶಿಕ್ಷಣಕ್ಕೆ ಹೆಸರುವಾಸಿಯಾದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ಏಷಿಯನ್‌ ಅಭಿವೃದ್ಧಿ ಬ್ಯಾಂಕ್‌ ಹಣಕಾಸು ನೆರವಿನ 4 ಕೋಟಿ ರೂ. ವೆಚ್ಚದಿಂದ ಶರಣ ಬಸವೇಶ್ವರ ದೇವಾಲಯದ ಜಾತ್ರಾ ಮೈದಾನದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವನ್ನುಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯ ಸ್ಥಾಪನೆಗೆ ಹಸಿರು ನಿಶಾನೆ ತೋರುವ ಸಂಬಂಧ ಇತ್ತೀಚೆಗೆ ಸರ್ಕಾರದ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ನಡೆಸಿದೆಯಲ್ಲದೆ ಸೌಲಭ್ಯಗಳಿಗೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದು ತಿಳಿಸಿದರು. 

ಯಾತ್ರಿಕ ನಿವಾಸ: ಶರಣ ಬಸವೇಶ್ವರ ದೇವಸ್ಥಾನಕ್ಕೆ ಜಾತ್ರಾ, ಶ್ರವಣ ಹಾಗೂ ಸೋಮವಾರಗಳಂದು ಅನೇಕ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಾರೆ. ಅವರ ಅನುಕೂಲಕ್ಕೆ ಹಾಗೂ ಕಡಿಮೆ ದರದಲ್ಲಿ ವಾಸ್ತವ್ಯ ಮಾಡಲು ಯಾತ್ರಿ ನಿವಾಸ ಅನುಕೂಲವಾಗಲಿದೆ.

ಸರ್ಕಾರದ ವೆಚ್ಚದಲ್ಲಿ ಸದ್ಯ ನೆಲ ಮಹಡಿಯ ಯಾತ್ರಿ ನಿವಾಸ ನಿರ್ಮಿಸಲಾಗಿದೆ. ಇದರ ಮೇಲೆ ಮೂರ್‍ನಾಲ್ಕು  ಮಹಡಿಗಳನ್ನು ನಿರ್ಮಿಸಬಹುದಾಗಿದ್ದು, ಮುಂದಿನ ದಿನಗಳಲ್ಲಿ ಸಂಸ್ಥಾನದವರು ನಿರ್ಮಿಸಿಕೊಳ್ಳಬಹುದು ಎಂದರು. ಶರಣ ಬಸವೇಶ್ವರ ಶಿಕ್ಷಣ ಸಂಸ್ಥಾನವು ಈ ಭಾಗದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವುದರ ಮೂಲಕ ಅಕ್ಷರ ದಾಸೋಹ ರೂಪಿಸಿದ್ದಾರೆ.

Advertisement

ಬಸವೇಶ್ವರ ಸಂಸ್ಥಾನದ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಖಾಸಗಿ ವಿಶ್ವವಿದ್ಯಾಲಯ ರಚಿಸಲು ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಪರಿಶೀಲನೆಗೆ ಆಗಮಿಸಿದ ತಂಡವು ಖಾಸಗಿ ವಿಶ್ವವಿದ್ಯಾಲಯ ರೂಪಿಸಲು ಬೇಕಾಗಿರುವ ಎಲ್ಲ ಅಂಶಗಳನ್ನು ಬಸವೇಶ್ವರ ಶಿಕ್ಷಣ ಸಂಸ್ಥೆ ಒಳಗೊಂಡಿರುವುದಾಗಿ ತಿಳಿಸಿದ್ದಾರೆ ಎಂದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಧಿಪತಿ ಡಾ| ಶರಣ ಬಸವಪ್ಪ ಅಪ್ಪ ಮಾತನಾಡಿ, ಕಲಬುರಗಿಗೆ ಇತರೆ ರಾಜ್ಯಗಳಿಂದ ಹಾಗೂ ದೇಶ ವಿದೇಶಗಳಿಂದ ಆಗಮಿಸುವ ಭಕ್ತಾದಿಗಳು ಮತ್ತು ಪ್ರವಾಸಿಗರು ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇ ನವಾಜ್‌ ದರ್ಗಾಕ್ಕೆ ಭೇಟಿ ನೀಡುವರು. 

ಇದರಿಂದ ರಾಷ್ಟ್ರೀಯ ಭಾವೈಕ್ಯತೆ ಮೂಡಿಸಲು ಸಹಾಯಕವಾಗಿದೆ. ಶರಣ ಬಸವೇಶ್ವರ ದೇವಸ್ಥಾನ ಮತ್ತು ಖಾಜಾ ಬಂದೇ ನವಾಜ್‌ ದರ್ಗಾ ಕಲಬುರಗಿಗೆ ಎರಡೂ ಕಣ್ಣುಗಳಂತಿವೆ. ಬುದ್ಧ ವಿಹಾರ ನಿರ್ಮಾಣವಾಗುವ ಮೂಲಕ ಮೂರನೇ ಕಣ್ಣು ಸಹಿತ ಉದ್ಭವವಾಗಿದೆ.

ಕಲಬುರಗಿಯು ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವುದಲ್ಲದೇ ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಹೇಳಿದರು. ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಮತ್ತು ಮಹಾನಗರಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ್‌ ವಹಿಸಿದ್ದರು.

ಶಾಸಕ ಖಮರುಲ್‌ ಇಸ್ಲಾಂ, ಮಹಾಪೌರ ಶರಣಕುಮಾರ ಮೋದಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್‌ ಅಜಗರ್‌ ಚುಲಬುಲ್‌, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್‌ ಬಾಗವಾನ್‌, ಮಹಾನಗರ  ಪಾಲಿಕೆ ಸದಸ್ಯರಾದ ಶಿವಾನಂದ ಪಾಟೀಲ ಅಷ್ಠಗಿ, ಪ್ರಮೋದ ತಿವಾರಿ, ಮಲ್ಲಿಕಾರ್ಜನ ಟೇಂಗಳಿ, ಅಲಿಮೋದ್ದಿನ್‌ ಪಟೇಲ್‌, ಶಿವಸ್ವಾಮಿ, ರಮೇಶ ಕಮಕನೂರ, ಮಹಾನಗರ ಪಾಲಿಕೆ ಆಯುಕ್ತ ಪಿ. ಸುನೀಲಕುಮಾರ,

ಕಾರ್ಯನಿರ್ವಾಹಕ ಇಂಜಿನಿಯರ್‌ ಆರ್‌.ಪಿ. ಜಾಧವ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು (ಕೆಯುಐಡಿಎಫ್‌ಸಿ) ಸಂಸ್ಥೆಯ ಕಾರ್ಯನಿರ್ವಾಹಕ ಇಂಜಿನಿಯರ್‌ ಎಸ್‌. ಎಸ್‌. ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಬಂಡಪ್ಪ ಆಕಳ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಕೆಯುಐಡಿಎಫ್‌ಸಿ ಯೋಜನಾ ನಿರ್ದೇಶಕ ದೊಡ್ಡ ಬಸವರಾಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನಾಡಿದರು.  

Advertisement

Udayavani is now on Telegram. Click here to join our channel and stay updated with the latest news.

Next