Advertisement

Karnataka: ಅಶೋಕ್‌ ವಿರುದ್ಧ ಸರಕಾರ ಭೂಚಕ್ರ! ವಿಪಕ್ಷ ನಾಯಕನ ವಿರುದ್ಧ ಸಚಿವರ ಗಂಭೀರ ಆರೋಪ

01:15 AM Oct 03, 2024 | Team Udayavani |

ಬೆಂಗಳೂರು: “ಕದ್ದ ಮಾಲು ಹಿಂದಿರುಗಿಸಿದ ಕೂಡಲೇ ಕಳ್ಳನು ನಿರಪರಾಧಿ ಆಗುವನೇ?’ ಎಂದು ಪ್ರಶ್ನಿಸಿದ್ದ ವಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಸರಕಾರ “ಭೂಚಕ್ರ’ ಪ್ರಯೋಗಿಸಿದೆ. “ಈ ಹಿಂದೆ ಸ್ವತಃ ಸರಕಾರಿ ಜಮೀನು ಕಬಳಿಸಿ ಉಡುಗೊರೆ ಪತ್ರದ ಮೂಲಕ ಹಿಂದಿರುಗಿಸಿದ್ದ ಆರ್‌. ಅಶೋಕ್‌ ಕೂಡ ಹಗಲು ದರೋಡೆ ಮಾಡಿದವರೇ.

Advertisement

ಹಾಗಾಗಿ ನಿಮ್ಮ ಮೇಲಿನ ಆರೋಪ ಮಾಫಿ ಆಗುವುದೇ ಅಥವಾ ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವಿರಾ?’ ಎಂದು ಹಲವು ಸಚಿವರು ಅಶೋಕ್‌ ವಿರುದ್ಧ ಬುಧವಾರ ಅಕ್ಷರಶಃ ಮುಗಿಬಿದ್ದಿದ್ದಾರೆ.

ಸಚಿವರಾದ ಡಾ| ಪರಮೇಶ್ವರ್‌, ಕೃಷ್ಣ ಬೈರೇಗೌಡ, ಎಚ್‌.ಕೆ. ಪಾಟೀಲ್‌, ಸತೀ ಶ್‌ ಜಾರಕಿಹೊಳಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಆರ್‌. ಅಶೋಕ್‌ ಅವರು ಲೊಟ್ಟೆಗೊಲ್ಲಹಳ್ಳಿಯಲ್ಲಿ ಭೂಮಿ ಖರೀದಿಸಿ ಅನಂತರ ಅದನ್ನು ಉಡುಗೊರೆ ಪತ್ರದ ಮೂಲಕ ಸರಕಾರಕ್ಕೆ ವಾಪಸ್‌ ನೀಡಿರುವುದರ ದಾಖಲೆ ಪ್ರದರ್ಶಿಸಿದರು. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಕೂಡ ಭಾಗಿಯಾಗಿದ್ದಾರೆ. ಹೀಗಾಗಿ ಬಿಜೆಪಿಯು ಈ ಮೂವರ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಡಾ| ಪರಮೇಶ್ವರ್‌ ಮಾತನಾಡಿ, ಲೊಟ್ಟೆಗೊಲ್ಲಹಳ್ಳಿಯ ಸರ್ವೇ ನಂಬರ್‌ 10/1, 10/11 ಎಫ್1 ಹಾಗೂ 10/11 ಎಫ್2 ಜಾಗದಲ್ಲಿ 32 ಗುಂಟೆ ಜಮೀನನ್ನು 1977ರಲ್ಲಿ ಬಿಡಿಎ ಅಧಿಸೂಚನೆ ಮಾಡಿತ್ತು. 1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಅನಂತರ 2003 ಹಾಗೂ 2007ರಲ್ಲಿ ಆ ಜಮೀನಿನ ಮೂಲ ಮಾಲಕ ರಾಮಸ್ವಾಮಿ ಅವರಿಂದ ಅಶೋಕ್‌ ಅವರು ಶುದ್ಧಕ್ರಯದ ಮೂಲಕ ಜಮೀನು ಖರೀದಿಸಿದ್ದರು. ಅಂದು ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಈ ಸಂಬಂಧದ ಅರ್ಜಿಯ ಮೇಲೆ “ಕೂಡಲೇ ಮಂಡಿಸಿ’ ಎಂದು ಬರೆದಿದ್ದರು. ಅನಂತರ ಕಡತ ಮಂಡನೆಯಾದ 2 ತಿಂಗಳಲ್ಲಿ ಭೂಸ್ವಾಧೀನ ಕೈಬಿಡಲಾಗಿತ್ತು ಎಂದು ಆರೋಪಿಸಿದರು.

ಡಿನೋಟಿಫಿಕೇಶನ್‌ ಬಳಿಕ ನಿವೃತ್ತ ವಿಂಗ್‌ ಕಮಾಂಡರ್‌ ಜಿ.ವಿ. ಅತ್ರಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿ ಬಳಿಕ ಕೋರ್ಟ್‌ ಮೆಟ್ಟಿಲೇರಿದ್ದರು. ಕೊನೆಗೆ 2011ರಲ್ಲಿ ಅಶೋಕ್‌ ಅವರು ಈ ಜಮೀನನ್ನು ಬಿಡಿಎಗೆ ಉಡುಗೊರೆ ಪತ್ರದ ಮೂಲಕ ಹಿಂದಿರುಗಿಸಿದರು. ಈಗ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ನಿವೇಶನ ವಾಪಸ್‌ ನೀಡಿದ ಬೆನ್ನಲ್ಲೇ ನಿಮ್ಮ ನಿಲುವು ಬೇರೆಯೇ ಆಗಿದೆ. ನಿಮ್ಮ ಮೇಲಿನ ಆರೋಪವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಅಶೋಕ್‌ ಅವರನ್ನು ಪ್ರಶ್ನಿಸಿದರು.

Advertisement

ನೀವು ಸರಿ; ಸಿಎಂ ಹೇಗೆ ತಪ್ಪು?
ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಅಶೋಕ್‌ ಅವರ ಹೇಳಿಕೆ ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಿಡಿಎ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡು ಅನಂತರ ಬಿಡಿಎಗೆ ವಾಪಸ್‌ ನೀಡಿದವರು ತಮ್ಮ ಅನುಭವದ ಮಾತನ್ನು ಈಗ ಆಡುತ್ತಿದ್ದಾರೆ. ನೀವು ಮಾಡಿದ್ದು ಸರಿಯಾದರೆ ಸಿಎಂ ಅವರ ಪತ್ನಿ ಪಾರ್ವತಮ್ಮ ಅವರು ಮಾಡಿದ್ದು ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡುವುದನ್ನು ನಿಲ್ಲಿಸಬೇಕು. ನೀವು ನಿಮ್ಮದಲ್ಲದ ಭೂಮಿಯನ್ನು ಬಿಡಿಎಗೆ ಕೊಡು ತ್ತೀರಿ, ಮುಡಾ ಸಂಸ್ಥೆಯಿಂದ ಪರಿಹಾರವಾಗಿ ಬಂದದ್ದನ್ನು ಪಾರ್ವತಿಯವರು ಹಿಂದಿರುಗಿಸಿದರೆ ಅದನ್ನು ತಪ್ಪು ಎನ್ನುತ್ತೀರಿ. ಇದು ಎಷ್ಟು ಸರಿ ಎಂದು ಖಾರವಾಗಿ ಕೇಳಿದರು.

ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಸರಕಾರಿ ಜಾಗವನ್ನು 23 ವರ್ಷಗಳ ಅನಂತರ ಡಿನೋಟಿಫಿಕೇಶನ್‌ ಮಾಡಿರುವುದು ಅಕ್ರಮ ಅಲ್ಲವೇ? ಶುದ್ಧಕ್ರಯ ಪತ್ರದಲ್ಲಿ ಗುಳ್ಳಮ್ಮ ಎಂಬವವರ ವಾರಸುದಾರರು ಯಾರು ಎಂದು ನೋಡಿದರೆ ಜಿ. ಶಾಮಣ್ಣ, ಜಿ. ಮುನಿರಾಜು, ಜಿ. ಗೋವಿಂದಪ್ಪ, ಜಿ. ಕಾಂತರಾಜು, ಜಿ. ಸುಬ್ರಹ್ಮಣ್ಯ ಎಂದು ಇದೆ. ಇಲ್ಲಿ ರಾಮಸ್ವಾಮಿ ಹಾಗೂ ವೆಂಕಟಪ್ಪ ಎಂಬವವರಿಗೆ ಗುಳ್ಳಮ್ಮ ಹೇಗೆ ಸಂಬಂಧ ಎಂದು ಗೊತ್ತಿಲ್ಲ. ಮೂಲ ವಾರಸುದಾರರು ಡಿನೋಟಿಫಿಕೇಶನ್‌ಗೆ ಅರ್ಜಿಯನ್ನೇ ಕೊಟ್ಟಿಲ್ಲ. ಇವರ ಹೆಸರಲ್ಲಿ ಬೇನಾಮಿ ರಾಮಸ್ವಾಮಿ ಎಂಬವರನ್ನು ಸೃಷ್ಟಿ ಮಾಡಲಾಗಿದೆ. ಇದು ಕ್ರಮವೇ, ಅಕ್ರಮವೇ ಎಂದು ಪ್ರಶ್ನಿಸಿದರು.

ಏನಿದು ಆರೋಪ?
-ಲೊಟ್ಟೆಗೊಲ್ಲಹಳ್ಳಿಯಲ್ಲಿ ಜಾಗ ಖರೀದಿಸಿದ್ದ ಆರ್‌. ಅಶೋಕ್‌
-ಶುದ್ಧ ಕ್ರಯದ ಮೂಲಕ ಜಮೀನು ಖರೀದಿ
-ಡಿನೋಟಿಫಿಕೇಶನ್‌ ಬಳಿಕ ಲೋಕಾಯುಕ್ತಕ್ಕೆ ನಿವೃತ್ತ ವಿಂಗ್‌ ಕಮಾಂಡರ್‌ ಜಿ.ವಿ. ಅತ್ರಿ ದೂರು
-ಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣ
-2011ರಲ್ಲಿ ಜಮೀನನ್ನು ಬಿಡಿಎಗೆ ಗಿಫ್ಟ್ ಮೂಲಕ ಹಿಂದಿರುಗಿಸಿದ್ದ ಅಶೋಕ್‌

Advertisement

Udayavani is now on Telegram. Click here to join our channel and stay updated with the latest news.

Next