Advertisement

ಆಯುರ್ವೇದ ಪ್ರಚಾರಕ್ಕೆ ಸರ್ಕಾರದ ಕ್ರಮ ಅವಶ್ಯ

10:00 AM Apr 26, 2022 | Team Udayavani |

ಹುಬ್ಬಳ್ಳಿ: ಆಯುರ್ವೇದವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕಾದ ಸರಕಾರವೇ ಸುಮ್ಮನೆ ಕುಳಿತಿರುವಾಗ, ಖಾಸಗಿ ಸಂಸ್ಥೆ ಅದನ್ನು ಪ್ರಚಾರಪಡಿಸಲು ಮುಂದಾಗಿರುವುದು ಹೆಮ್ಮೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಹೇಳಿದರು.

Advertisement

ಗೋಕುಲ ರಸ್ತೆಯ ಡಾ| ಕೆ.ಎಸ್‌.ಶರ್ಮಾ ವಿಶ್ವಶ್ರಮ ಚೇತನ ಆವರಣದಲ್ಲಿ ನಡೆದ ಆಯುರ್‌ ಎಕ್ಸ್‌ಫೋ-2022ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಯುರ್ವೇದ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಅದನ್ನು ಪ್ರಚುರ ಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಮುಂದೆ ಬರಬೇಕಾಗಿದ್ದು, ಇದೀಗ ಕೇಂದ್ರ ಸರಕಾರದಿಂದ ಅಂತಹ ಕಾರ್ಯಕ್ಕೆ ಹೆಜ್ಜೆ ಇರಿಸಿರುವುದು ಶ್ಲಾಘನೀಯ ಎಂದರು. ಏ.17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ 34 ಎಕರೆ ಪ್ರದೇಶದಲ್ಲಿ ಆಯುರ್ವೇದ ಸಂಶೋಧನಾ ಸಂಸ್ಥೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಿ ಆಯುರ್ವೇದವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಅಲ್ಲದೇ ಆಯುರ್ವೇದ ಬೆಳವಣಿಗೆಗೆ ಕೇಂದ್ರ ಸರಕಾರದಿಂದ 5 ಲಕ್ಷ ಕೋಟಿ ಅನುದಾನ ತೆಗೆದಿರಿಸಲಾಗುವುದು ಎಂದಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಎಸ್‌.ಕೆ. ಬನ್ನಿಗೋಳ ಮಾತನಾಡಿ, ಮಹಾವಿದ್ಯಾಲಯದಿಂದ ಆಯುರ್‌ ಎಕ್ಸ್‌ಫೋ ನಡೆಸಬೇಕೆನ್ನುವ ಬಹುದಿನಗಳ ಆಸೆ ಈಡೇರಿದೆ. ರಾಜ್ಯ ಆಯುಷ್‌ ಒಕ್ಕೂಟ, ನಮ್ಮ ಸಂಸ್ಥೆ ಸಂಸ್ಥಾಪಕರಾದ ಡಾ| ಕೆ.ಎಸ್‌. ಶರ್ಮಾ ಅವರ ಸಹಕಾರ ತುಂಬಾ ಇದೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಎಲ್ಲರಿಗೂ ಆಯುರ್ವೇದ ತಲುಪಿಸುವ ನಮ್ಮ ಉದ್ದೇಶ ಈಡೇರಿದಂತಾಗಿದ್ದು, ಸಮಾಜದಲ್ಲಿ ಆಯುರ್ವೇದವನ್ನು ಹೆಮ್ಮರವಾಗಿ ಬೆಳೆಸಬೇಕು. ಸಮಾರಂಭದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಇದೊಂದು ಯಶಸ್ವಿ ಮೇಳವಾಗಿದೆ ಎಂದರು.

ಶಾಸಕ ಸಿ.ಎಂ. ನಿಂಬಣ್ಣವರ ಮಾತನಾಡಿದರು. ಡಾ| ಕೆ.ಎಸ್‌. ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಆಯುರ್ವೇದ ವಿದ್ಯಾರ್ಥಿ ಸ್ವಾತಿ, ಪ್ರಾಧ್ಯಾಪಕ ರವಿ ಗುತ್ತಲ, ಪ್ರಾಚಾರ್ಯ ಆಕಾಶ, ಗಿರೀಶ ದಾನಪ್ಪಗೌಡರ, ಶರತ್‌ಕುಮಾರ, ಡಾ| ಚೈತ್ರಾ ಅನಿಸಿಕೆ ವ್ಯಕ್ತಪಡಿಸಿದರು. ಡಾ| ಮಹೇಶ ದೇಸಾಯಿ ಇನ್ನಿತರರಿದ್ದರು. ಡಾ| ಸಿ.ಸಿ. ಹಿರೇಮಠ ಸ್ವಾಗತಿಸಿದರು. ಡಾ| ಸೋಮಶೇಖರ ಹುದ್ದಾರ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

ಅಹಲ್ಯಾ ಪ್ರಥಮ: ಆಯುಷ್‌ ಎಕ್ಸ್‌ಪೋ ನಿಮಿತ್ತ ನಡೆದ ಚರ್ಚಾ ಸ್ಪರ್ಧೆಯಲ್ಲಿ ಅಹಲ್ಯಾ ಸರಸ್ವತಿ ಪ್ರಥಮ, ಶ್ರೇಯಸ್‌ ನಾಯಕ ದ್ವಿತೀಯ, ಶ್ರೇಯಾ ಪಾಸ್ತೆ ತೃತೀಯ; ಮಾಡೆಲಿಂಗ್‌ ಮೇಕಿಂಗ್‌ ಸ್ಪರ್ಧೆಯಲ್ಲಿ ಸಯಿದಾ ಪ್ರಥಮ, ಸ್ಫೂರ್ತಿ ಎಂ.ಎಸ್‌. ದ್ವಿತೀಯ, ತೇಜಸ್ವಿನಿ ತೃತೀಯ; ಪೋಸ್ಟರ್‌ ಪ್ರಸೆಂಟೇಶನ್‌ ಸ್ಪರ್ಧೆಯಲ್ಲಿ ಡಾ| ಚೈತ್ರಾ ಪ್ರಥಮ, ಸೃಜನಾ ಕುಪ್ಪಿ ದ್ವಿತೀಯ, ಅಹಲ್ಯಾ ಸರಸ್ವತಿ ಹಾಗೂ ದಿವ್ಯಾ ತೃತೀಯ ಬಹುಮಾನ ಹಂಚಿಕೊಂಡರು. ಆರೋಗ್ಯವಂತ ಮಕ್ಕಳ ಸ್ಪರ್ಧೆಯೂ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next