Advertisement
ಬೆಂಗಳೂರು: ಕೊರೊನಾ 2ನೇ ಅಲೆ ಜೀವಗಳನ್ನಷ್ಟೇ ಕಸಿಯುತ್ತಿಲ್ಲ, ಜನರ ಬದುಕಿನ ಬಂಡವಾಳವನ್ನೂ ಕಸಿದುಕೊಳ್ಳುತ್ತಿದೆ!ರಾಜ್ಯ ಸರಕಾರ ಲಾಕ್ ಡೌನ್ ಮಾದರಿಯ ಕರ್ಫ್ಯೂ ಘೋಷಿಸಿದ್ದು, ಇದರಿಂದ ರೈತರು ತಾವು ಬೆಳೆದ ತರಕಾರಿ, ಹೂವು, ಹಣ್ಣು ಮಾರಾಟ ಮಾಡಲಾಗದ ಸ್ಥಿತಿಗೆ ಬಂದಿದ್ದಾರೆ. ಬೆಳೆದ ಬೆಳೆಗಳನ್ನು ರಸ್ತೆಗೆ ಚೆಲ್ಲುತ್ತಿದ್ದಾರೆ, ಹೊಲದಲ್ಲೇ ಬಿಡುತ್ತಿದ್ದಾರೆ.
ಸದ್ಯ ಬೆಳಗ್ಗೆ 6ರಿಂದ 10ರ ವರೆಗೆ ತರಕಾರಿ, ಹೂವು, ಹಣ್ಣು ಮಾರಾಟಕ್ಕೆ ಸರಕಾರ ಅವಕಾಶ ಕೊಟ್ಟಿದೆ. ಆದರೆ ಈ ಅವಧಿಯಲ್ಲಿ ಬೆಳೆದದ್ದೆಲ್ಲ ಮಾರಾಟವಾಗುತ್ತಿಲ್ಲ. ಲಾಕ್‌ಡೌನ್‌ನಿಂದಾಗಿ ರಫ್ತು ಕೂಡ ಆಗುತ್ತಿಲ್ಲ.
ಲಾಕ್‌ಡೌನ್ ಸಮಯದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ವಾರ್ ರೂಂ ವ್ಯವಸ್ಥೆ ಮಾಡಿವೆ. ರೈತರು ಹಾಪ್‌ಕಾಮ್ಸ್‌ಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷವೇ ಉತ್ತಮ ಎನ್ನುತ್ತಾರೆ ಅಧಿಕಾರಿಗಳು. ಸರಕಾರ ಪರಿಹಾರ ಘೋಷಿಸಿದೆಯಾದರೂ ಅದಕ್ಕಿಂತ ಹೆಚ್ಚು ನಷ್ಟವಾಗಿದೆ ಎಂಬ ಅಳಲು ಬೆಳೆಗಾರರದು. ಹಣ್ಣು, ತರಕಾರಿ ಮಾತ್ರವಲ್ಲದೆ ಹೂ ಬೆಳೆಗಾರರೂ ನಷ್ಟ ಅನುಭವಿಸಿದ್ದಾರೆ.
Related Articles
ತೋಟಗಾರಿಕೆ ಬೆಳೆಗಳ ಬೆಲೆ ಕುಸಿತಕ್ಕೆ ಆತಂಕ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವಂತೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ಎಲ್ಲ ರಾಜ್ಯಗಳ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಈ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಬೇಕು ಎಂದು ಮನವಿ ಮಾಡಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದಿದ್ದರೆ ಕೃಷಿಕರ ಸಹಿತ ಗ್ರಾಮೀಣ ಪ್ರದೇಶದ ಜನರ ಸ್ಥಿತಿ ಶೋಚನೀಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತೋಟಗಾರಿಕೆ ಬೆಳೆಗಳಿಗೆ ಅಷ್ಟೊಂದು ಸಮಸ್ಯೆಯಾಗಿಲ್ಲ. ದೊಡ್ಡ ಮಟ್ಟದ ಖರೀದಿ ಇಲ್ಲದಿರುವುದರಿಂದ ಉತ್ಪನ್ನ ಉಳಿಯುತ್ತಿದೆ. ರೈತರು ಸಮಸ್ಯೆ ಇದೆ ಎಂದು ಕರೆ ಮಾಡಿದರೆ ಅಧಿಕಾರಿಗಳು ವಾರ್ ರೂಂ ಮೂಲಕ ನಿರಂತರ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ.– ಆರ್. ಶಂಕರ, ತೋಟಗಾರಿಕೆ ಸಚಿವ