Advertisement

ಬಡವರ ಬಂಧು ಬಂದ್‌? ಜನರಿಗೆ ತಲುಪದ ಜನಪ್ರಿಯ ಯೋಜನೆಗಳಿಗೆ ಕೊಕ್‌?

01:11 AM Feb 18, 2021 | Team Udayavani |

ಬೆಂಗಳೂರು: ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರಕಾರ ಈ ಬಾರಿ ಅಳೆದು ತೂಗಿದ ಬಜೆಟ್‌ ಮಂಡನೆಗೆ ಕಸರತ್ತು ನಡೆಸುತ್ತಿದೆ. ಸಿಎಂ ಯಡಿಯೂರಪ್ಪ ಜನಪ್ರಿಯತೆ ಕಳೆದುಕೊಂಡಿರುವ ಯೋಜನೆಗಳಿಗೆ ಕತ್ತರಿ ಹಾಕುವ ಆಲೋಚನೆ ನಡೆಸಿದ್ದಾರೆ.

Advertisement

ಫೆ. 8ರಂದು ಸಿಎಂ ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ್ದು, ಮಿತವ್ಯಯದ ಬಗ್ಗೆ ಪ್ರಾರಂಭದಲ್ಲಿಯೇ ಮಾತನಾಡಿದ್ದಾರೆ. ಬಜೆಟ್‌ ಗಾತ್ರದಲ್ಲಿ ಶೇ. 7ರಿಂದ 8ರಷ್ಟು ಕಡಿತ ಮಾಡುವ ಲೆಕ್ಕಾಚಾರ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಸಿಎಂ ಅವರು ಈ ಬಾರಿ ಹಣಕಾಸು ಹೊಂದಾಣಿಕೆಗಾಗಿ ಪ್ರತೀ ವಿಷಯವನ್ನೂ ಅಳೆದು ತೂಗಿ ಲೆಕ್ಕಹಾಕುತ್ತಿದ್ದಾರೆ. ಹಿಂದಿನ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿ ಸರಕಾರಗಳು ಘೋಷಿಸಿದ್ದ ಜನಪ್ರಿಯ ಯೋಜನೆಗಳು ಸಾರ್ವಜನಿಕರಿಗೆ ತಲುಪದೇ ವ್ಯರ್ಥವಾಗುತ್ತಿದ್ದರೆ ಅಂತಹವುಗಳನ್ನು ಸ್ಥಗಿತಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಅಂತಹ ಯೋಜನೆಗಳನ್ನು ಪಟ್ಟಿ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಡವರ ಬಂಧು
ಮೈತ್ರಿ ಸರಕಾರದ ಅವಧಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿದ್ದ “ಬಡವರ ಬಂಧು’ ಯೋಜನೆ ಕೈಬಿಡುವ ಸಾಧ್ಯತೆ ಇದೆ. ಬೀದಿ ವ್ಯಾಪಾರಿಗಳಿಗೆ ಪ್ರತೀ ದಿನ 2ರಿಂದ 10 ಸಾವಿರ ರೂ.ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುವ ಈ ಯೋಜನೆ ಅಡಿಯಲ್ಲಿ 2019ರಲ್ಲಿ 22 ಸಾವಿರ ಫ‌ಲಾನುಭವಿಗಳಿಗೆ 14 ಕೋಟಿ ರೂ. ಸಾಲ ವಿತರಣೆ ಮಾಡಲಾಗಿತ್ತು. 2020-21ರಲ್ಲಿ ಈ ಯೋಜನೆ ಮೂಲಕ 9,237 ಫ‌ಲಾನುಭವಿಗಳಿಗೆ 8.54 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಸಾಲದ ಮೇಲಿನ ಬಡ್ಡಿ ನೀಡಲು ರಾಜ್ಯ ಸರಕಾರ 1.10 ಕೋಟಿ ರೂ. ಮೀಸಲಿಟ್ಟಿದೆ.

ಈಗ ಕೇಂದ್ರ ಸರಕಾರವು “ಪಿಎಂ ಸ್ವನಿಧಿ’ ಯೋಜನೆಯನ್ನು ಜಾರಿಗೊಳಿಸಿದ್ದು, ಇದರಲ್ಲಿ ಹೆಚ್ಚು ಫ‌ಲಾನುಭವಿಗಳಿರುವ ಹಿನ್ನೆಲೆಯಲ್ಲಿ “ಬಡವರ ಬಂಧು’ ಯೋಜನೆ ಕೈಬಿಡುವ ಲೆಕ್ಕಾಚಾರ ನಡೆದಿದೆ.

Advertisement

ಕುರಿ ಸಾವಿನ ಪರಿಹಾರ
ಆಕಸ್ಮಿಕವಾಗಿ ಸಾವಿಗೀಡಾಗುವ ಕುರಿಗಳಿಗೆ ನೀಡುವ ಪರಿಹಾರಧನ ಯೋಜನೆಯನ್ನು ಸ್ಥಗಿತಗೊಳಿಸುವ ಆಲೋಚನೆ ನಡೆಸಲಾಗುತ್ತಿದೆ. ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ಈ ವರ್ಷ ಬಜೆಟ್‌ನಲ್ಲಿಯೂ ಈ ಯೋಜನೆಗೆ ಯಾವುದೇ ಮೊತ್ತ ಮೀಸಲಿಡುವುದು ಅನುಮಾನ.

ಇಸ್ರೇಲ್‌ ಮಾದರಿ ಕೃಷಿ
ಇದು ಮೈತ್ರಿ ಸರಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಮತ್ತೂಂದು ಮಹತ್ವದ ಯೋಜನೆ. ಎಚ್‌.ಡಿ. ಕುಮಾರಸ್ವಾಮಿ ಅವರು ಈ ಯೋಜನೆ ಜಾರಿಗೊಳಿಸಲು 150 ಕೋಟಿ ರೂ. ಮೀಸಲಿಟ್ಟಿದ್ದರು. ಪ್ರತೀ ವರ್ಷ ರೈತರನ್ನು ಇಸ್ರೇಲ್‌ ಕೃತಿ ಪದ್ಧತಿ ಅಧ್ಯಯನಕ್ಕಾಗಿ ಕಳುಹಿಸಿಕೊಡುವ ಯೋಜನೆ ರೂಪಿಸಿದ್ದರು.ಅದನ್ನು ಕೈಬಿಟ್ಟು ಆತ್ಮನಿರ್ಭರ ಮೂಲಕ ಸ್ಥಳೀಯ ಕೃಷಿ ಪದ್ಧತಿಗೆ ಹೆಚ್ಚಿನ ಒತ್ತು ನೀಡಲು ಆಲೋಚನೆ ಮಾಡಲಾಗುತ್ತಿದೆ ಎನ್ನಲಾಗಿದೆ.

ವಿದೇಶ ಪ್ರವಾಸವಿಲ್ಲ
ಅಧ್ಯಯನದ ಹೆಸರಿನಲ್ಲಿ ಅಧಿಕಾರಿಗಳ ವಿದೇಶ ಪ್ರವಾಸ, ಆಡಳಿತಾತ್ಮಕ ಅನಗತ್ಯ ವೆಚ್ಚ ಕಡಿತ ಮಾಡಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

ಅನ್ನಭಾಗ್ಯ ಲೆಕ್ಕಾಚಾರ ಬದಲು
ಅನ್ನಭಾಗ್ಯ ಯೋಜನೆ ಅಡಿ ಪ್ರತೀ ವ್ಯಕ್ತಿಗೆ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು 5 ಕೆ.ಜಿ.ಗಳಿಂದ 2 ಕೆ.ಜಿ.ಗಳಿಗೆ ಇಳಿಸಿ, ಪರ್ಯಾಯವಾಗಿ ದಕ್ಷಿಣ ಕರ್ನಾಟಕದಲ್ಲಿ ರಾಗಿ ಮತ್ತು ಉತ್ತರ ಕರ್ನಾಟಕದಲ್ಲಿ ಜೋಳ ನೀಡಲು ಸರಕಾರ ಚಿಂತನೆ ನಡೆಸಿದೆ. ಬಜೆಟ್‌ನಲ್ಲಿ ಅಧಿಕೃತ ಘೋಷಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಸಮುದಾಯ ಭವನ: ಒಂದೇ ದಾರಿ
ಬೇರೆ ಬೇರೆ ಇಲಾಖೆಗಳಿಂದ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ನೀಡುವ ವ್ಯವಸ್ಥೆಯನ್ನು ಬದಲಾಯಿಸಿ, ಒಂದೇ ಇಲಾಖೆಯ ಮೂಲಕ ಅನುದಾನ ನೀಡುವ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ. ಇದರಿಂದ ನೂರಾರು ಕೋಟಿ ರೂ. ಉಳಿತಾಯ ಮಾಡುವ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next