Advertisement

ಮಕ್ಕಳಲ್ಲಿ ಬೆಳೆಸಿ ದೇಶಭಕ್ತಿ -ನೈತಿಕತೆ

12:19 PM Feb 24, 2020 | Naveen |

ಗೊರೇಬಾಳ: ಕೆಲ ಸಂಘಟನೆಗಳು ಮಕ್ಕಳಿಗೆ ಪ್ರಚೋದನೆ ನೀಡಿ ದೇಶ, ಸಮಾಜದ್ರೋಹಿ ಕೆಲಸಗಳಲ್ಲಿ ತೊಡಗಿಸುತ್ತಿದ್ದಾರೆ. ಆದ್ದರಿಂದ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ನೈತಿಕ ಮೌಲ್ಯ, ಸಂಸ್ಕೃತಿ, ಸಂಸ್ಕಾರ ಮತ್ತು ದೇಶಭಕ್ತಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ಸಿಂಧನೂರು ತಾಲೂಕಿನ ರಂಗಾಪುರ ಕ್ಯಾಂಪ್‌ನಲ್ಲಿ ರವಿವಾರ ನಡೆದ ಅಮೃತ ಫೌಂಡೇಶನ್‌ ಬೆಂಗಳೂರು ಇವರ ವತಿಯಿಂದ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಪಿಚ್ಚಿಕಲಾ ಶೇಷಮ್ಮ ಸೂರನ್ನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕೆಲ ಸಂಘಟನೆಗಳು ಪ್ರಚೋದನೆ ನೀಡಿ ಮಕ್ಕಳನ್ನು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸುತ್ತಿದ್ದಾರೆ. ಮಕ್ಕಳು ಇಂತಹ ಚಟುವಟಿಕೆಯಿಂದ ದೂರ ಉಳಿಯಲು ಅವರಲ್ಲಿ ದೇಶಭಕ್ತಿ, ಸಂಸ್ಕೃತಿ, ಸಂಸ್ಕಾರ ಬೆಳೆಸುವ ಕೆಲಸವಾಗಬೇಕಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕರ್ತವ್ಯ ನಿರ್ವಹಿಸದೇ ಶಾಲಾ-ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ನೈತಿಕ ಪಾಠ ಮಾಡಬೇಕು. ಅವರಲ್ಲಿ ದೇಶಭಕ್ತಿ ಬೆಳೆಸಿ ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು ಎಂದರು.

ಮನುಷ್ಯ ತಾನು ಗಳಿಸಿದ್ದರಲ್ಲಿ ಅಲ್ಪ ಭಾಗವನ್ನಾದರೂ ಸಮಾಜ ಸೇವೆಗೆ ಬಳಸುವ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. 40 ವರ್ಷದ ಹಿಂದೆ ಗ್ರಾಮೀಣ ಭಾಗದಲ್ಲಿ ಜನಿಸಿ ಗುಡಿಸಲು ಶಾಲೆಯಲ್ಲಿ ಓದಿದ ಪಿ. ವೆಂಕಟೇಶ್ವರರಾವ್‌ ಅವರು ತಮ್ಮ ಅಮೃತ ಫೌಂಡೇಶನ್‌ ವತಿಯಿಂದ ತಾವು ಕಲಿತ ಶಾಲೆಯ ಕಟ್ಟಡವನ್ನು ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ್ದು ಮಾದರಿಯಾಗಿದೆ. ಗ್ರಾಮಕ್ಕೆ ಮಾದರಿ ಶಾಲೆ ನಿರ್ಮಿಸಿದ್ದಾರೆ. ಇಂತಹ ದಾನಿಗಳಿಂದಲೇ ದೇಶ, ಸಮಾಜ ಪ್ರಗತಿ ಆಗುತ್ತಿದೆ ಎಂದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಮಕ್ಕಳಿಗೆ ಜ್ಞಾನಾರ್ಜನೆ ಕೊಡುವ ದೇವಾಲಯ ನಿರ್ಮಿಸಿದ ಪಿ. ವೆಂಕಟೇಶ್ವರರಾವ್‌ ಅವರ ಜೀವನ ಸಾರ್ಥಕ. ಸರಕಾರ ಮಾಡದ ಕಾರ್ಯವನ್ನು ಪಿಚ್ಚಿಕಲಾ ವೆಂಕಟೇಶ್ವರರಾವ್‌ ಮಾಡಿದ್ದು, ಇದರ ಪ್ರಯೋಜನವನ್ನು ಮಕ್ಕಳು, ಗ್ರಾಮಸ್ಥರು ಪಡೆಯಬೇಕು ಎಂದರು.

Advertisement

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಸರ್ಕಾರ ಎಲ್ಲ ಕೆಲಸ ಮಾಡಲು ಆಗುವುದಿಲ್ಲ. ದಾನಿಗಳು ಕೈ ಜೋಡಿಸಿದಾಗ ಉತ್ತಮ ಶಾಲೆಗಳ ನಿರ್ಮಾಣ ಸಾಧ್ಯ. ಅನ್ನದಾನಕ್ಕಿಂತಲೂ ಮಿಗಿಲಾದ ದಾನ ಜ್ಞಾನ ದಾನ. ಜ್ಞಾನ ಇದ್ದರೆ ಎಲ್ಲವನ್ನು ವ್ಯಕ್ತಿ ಪಡೆಯಬಲ್ಲ. ಮಕ್ಕಳಿಗೆ, ಗ್ರಾಮಕ್ಕೆ ಅನುಕೂಲವಾಗುವ ಬಹು ದೊಡ್ಡ ಕೆಲಸವನ್ನು ವೆಂಕಟೇಶ್ವರರಾವ್‌ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕನಕಗಿರಿ ಶಾಸಕ ಬಸವರಾಜ ದಡೇಸುಗೂರ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಜಿಪಂ ಸದಸ್ಯರಾದ ಅಮರೇಗೌಡ ವಿರುಪಾಪುರ, ಶಿವುನಗೌಡ ಗೊರೇಬಾಳ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಹಾಗೂ ತಾಲೂಕ ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಎಚ್‌.ಎಂ.ಮಲ್ಲಿಕಾರ್ಜುನಸ್ವಾಮಿ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next