Advertisement

ಸಾವಯವ ಕೃಷಿಯಲ್ಲಿ ಅದ್ವಿತೀಯ ಸಾಧನೆಗೈದ ಗೋಪಾಲಕೃಷ್ಣ ಪ್ರಭು

10:17 AM Dec 28, 2019 | mahesh |

ಹೆಸರು: ಕೆ. ಗೋಪಾಲಕೃಷ್ಣ ಪ್ರಭು
ಏನೇನು ಕೃಷಿ: ಭತ್ತ
ವಯಸ್ಸು: 75
ಕೃಷಿ ಪ್ರದೇಶ: 20ಎಕ್ರೆ

Advertisement

ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ತÌದ ಸ್ಥಾನವಿದೆ. ಇದೇ ಹಿನ್ನೆಲೆ ಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

ಸುರತ್ಕಲ್‌: ಕೃಷಿ ಮತ್ತು ಕಂಬಳದ ಆಯೋಜನೆಯಲ್ಲಿ ಅದ್ವಿತೀಯ ಸಾಧನೆಗೈದ ಬೆರಳೆಣಿಕೆಯ ಸಾಧಕರಲ್ಲಿ ಸುರತ್ಕಲ್‌ ಸಮೀಪದ ಮಾಧವನಗರದ ಕೆ. ಗೋಪಾಲಕೃಷ್ಣ ಪ್ರಭು (75) ಓರ್ವರು. ಕೃಷಿ ಭೂಮಿಯ ಉಸ್ತುವಾರಿಯನ್ನು ವಹಿಸಿಕೊಂಡು ಮೊದಲಿಗೆ ಕಂಬಳದ ಕ್ರೀಡೆಯನ್ನು ಮುಂದುವರಿಸಿಕೊಂಡು ಬಂದರೆ ಪದವಿ ಕಲಿಕೆಯ ಸಂದರ್ಭ 1983ರಲ್ಲಿ ಪೂರ್ಣಕಾಲಿಕ ಕೃಷಿಯಲ್ಲಿ ತೊಡಗಿಸಿಕೊಂಡರು. ಮಣ್ಣಿನ ಗುಣವನ್ನು ಸೂಕ್ಷ್ಮವಾಗಿ ಅರಿತು ವಾರ್ಷಿಕ 1,200 ಮುಡಿ ಭತ್ತ ಬೆಳೆದು ಗ್ರಾಮಕ್ಕೆ ಮಾದರಿ ಕೃಷಿಕರಾಗಿದ್ದಾರೆ. ಈ ಹಿಂದೆ 10 ಜೋಡಿ ಎತ್ತುಗಳಿದ್ದರೆ, ಕಾಲದ ಬದಲಾವಣೆಗೆ ತಕ್ಕಂತೆ ಸ್ವಂತ ಟಿಲ್ಲರ್‌ ಬಳಸಿ ನಾಟಿ ಮಾಡುತ್ತಾರೆ.

ನೂರು ಎಕ್ರೆ ಕೃಷಿ ಭೂಮಿಯ ಕುಟುಂಬ!
ತಂದೆ ಶ್ರೀನಿವಾಸ ಯಾನೆ ಕೆ. ಸವೋತ್ತಮ ಪ್ರಭು, ತಾಯಿ ಕೃಷ್ಣಾ ಬಾಯಿ ಪುತ್ರನಾದ ಗೋಪಾಲಕೃಷ್ಣ ಪ್ರಭು ಅವರದು ಪೂರ್ವಜರಿಂದಲೂ ಕೃಷಿ ಕುಟುಂಬವಾಗಿದ್ದರಿಂದ ಚಿಕ್ಕದಿನಿಂದಲೂ ಕೃಷಿಯ ಮೇಲೆ ಒಲುವು ಮೂಡಿತು. ಕುಟುಂಬಕ್ಕೆ 100 ಎಕ್ರೆ ಭೂಮಿಯಿತ್ತು. ಅನಂತರ ಆಸ್ತಿ ಹಂಚಿಕೆಯ ಸಂದರ್ಭ 40 ಎಕ್ರೆ ಇವರ ಪಾಲಿಗೆ ಒದಗಿ ಬಂತು. ಇದರಲ್ಲಿ ಸುಮಾರು 20 ಎಕ್ರೆ ಭತ್ತದ ನಾಟಿ ಮಾಡಿ ಯಶಸ್ವಿಯಾದರು. ತಮ್ಮದೇ ಅಕ್ಕಿ ಮಿಲ್‌ನಲ್ಲಿ ಭತ್ತ ಸಂಸ್ಕರಿಸಲಾಗುತ್ತದೆ. ಇದರಿಂದ ಸ್ಥಳೀಯ ರೈತರಿಗೆ ಪ್ರಯೋಜನವಾಗಿದೆ.

ಸಾವಯವ ಕೃಷಿಗೆ ಒತ್ತು
ಹಟ್ಟಿ ಗೊಬ್ಬರ, ಸೊಪ್ಪು, ಸುಡುಮಣ್ಣು ಬಳಸಿ ಸಾವಯವ ಗೊಬ್ಬರದ ಮೂಲಕವೇ ಅಧಿ ಕ ಇಳುವರಿ ಪಡೆಯುತ್ತಿದ್ದ ಗೋಪಾಲಕೃಷ್ಣ ಪ್ರಭು ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದಾರೆ. ಎಕ್ರೆಗೆ 40 ಕಟ್ಟು ಸೊಪ್ಪು, 140 ಬುಟ್ಟಿ ಗೊಬ್ಬರ ಹಾಗೂ ಸುಡುಮಣ್ಣನ್ನು ಬಳಕೆ ಮಾಡುತ್ತಾರೆ. ಭತ್ತದ ಬೇಸಾಯ ಕಜ ಜಯವನ್ನೆ ನಾಟಿ ಮಾಡಿ ಉತ್ತಮ ಇಳುವರಿ ಪಡೆಯಬಹುದು ಎಂಬುದನ್ನು ಅರಿತುಕೊಂಡರು. ಇವರ ಈ ಸಾಧನೆಗೆ ಜಿಲ್ಲಾ ಮಟ್ಟದಲ್ಲಿ ಕೃಷಿ ಇಲಾಖೆಯಿಂದ ಪ್ರಶಸ್ತಿಯು ಅರಸಿ ಬಂತು. ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಇರುವ ಸಂದರ್ಭ ಕಬ್ಬನ್ನು ಕೂಡ ಬೆಳೆದು ಸೈ ಎನಿಸಿಕೊಂಡಿದ್ದರು.

Advertisement

ತರಕಾರಿ ದಾಖಲೆ
ಕೃಷಿಯ ಜತೆ ತರಕಾರಿಯನ್ನು ಬೆಳೆದ ಸಾಧನೆ ಇವರದು. 20 ಸೆಂಟ್ಸ್‌ ಜಾಗದಲ್ಲಿ ಕ್ವಿಂಟಲ್‌ ಗಟ್ಟಲೆ ಸೌತೆಕಾಯಿ, ಅನನಾಸು, ಕಾಲಿಫವರ್‌, ಗೆಣಸು, ಕೆಂಪು ಒಣ ಮೆಣಸು ಕೃಷಿ, ಸೊಪ್ಪು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಆದರೆ ಕಾಲ ಕ್ರಮೇಣ ಕಾಡು ಪ್ರಾಣಿಗಳಾದ ನವಿಲು, ಮಂಗಳ ಕಾಟದಿಂದ ತರಕಾರಿ ಬೆಳೆ ಕುಂಠಿತವಾಯಿತು.

ಕೃಷಿಗೆ ಮಾರಕವಾಯಿತು ಎಸ್‌ಟಿಪಿ!
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡ್ಸೆಂಪ್‌ ಪ್ರಾಯೋಜಿತ ಒಳಚರಂಡಿ ಯೋಜನೆಗೆ ಸರಕಾರದ ಮನವಿ ಮೇರೆಗೆ ತ್ಯಾಜ್ಯ ಸಂಸ್ಕರಣ ಸ್ಥಾವರಕ್ಕೆ (ಎಸ್‌ಟಿಪಿ) ಭೂಮಿ ಬಿಟ್ಟು ಕೊಟ್ಟ ಗೋಪಾಲಕೃಷ್ಣ ಪ್ರಭು ಅವರಿಗೆ ಈಗ ಮುಳುವಾಗಿದೆ. ಇವರ ಜಮೀನಿಗೆ ಇಲ್ಲಿನ ಕಲುಷಿತ ನೀರು ನಿರಂತರವಾಗಿ ಹರಿದು ಬರುತ್ತಿದ್ದು ಕೃಷಿ ಯೋಗ್ಯವಾದ ಭೂಮಿಯಲ್ಲಿ ನಾಟಿ ಕಾಯಕಕ್ಕೆ ಅಸಾಧ್ಯವಾದ ಸ್ಥಿತಿ ಉಂಟಾಗಿದೆ. ಈಗ ಕಳೆದ ನಾಲ್ಕೈದು ವರ್ಷಗಳಿಂದ ಸಾವಿರಾರು ಮುಡಿ ಭತ್ತದ ಕೃಷಿ ತೆಗೆಯುತ್ತಿದ್ದ ಭೂಮಿ ಇಂದು ಕಲುಷಿತ ನೀರಿನಿಂದ ಅನಾಥವಾಗಿದೆ.

ಜಿಲ್ಲಾಮಟ್ಟದ ಪ್ರಶಸ್ತಿ
ಗೋಪಾಲಕೃಷ್ಣ ಪ್ರಭು ಅವರಿಗೆ 2008-09ರಲ್ಲಿ 96.44 ಕ್ವಿಂಟಲ್‌ ಇಳುವರಿ ಪಡೆದ ಜಿಲ್ಲೆಯ ಪ್ರಥಮ ರೈತ ಎಂಬ ಪ್ರಶಸ್ತಿಯನ್ನು ಕೃಷಿ ಇಲಾಖೆ ನೀಡಿ ಪುರಸ್ಕರಿಸಿದೆ. ಇವರ ಕೃಷಿ ಸಾಧನೆಗೆ ಸಂಘ-ಸಂಸ್ಥೆಗಳ ಸಹಿತ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.

ಕಂಬಳದಲ್ಲಿ ಸಾಧನೆ
1963ರಿಂದ 2019ರ ವರೆಗೆ 57 ವರ್ಷಗಳ ಕಾಲ ಕಂಬಳವನ್ನು ಆಯೋಜಿಸಿದ್ದಲ್ಲದೆ ಇವರ ಕಂಬಳದ ಎತ್ತುಗಳು ಅದ್ವಿತೀಯ ಸಾಧನೆ ಮಾಡಿ ಪ್ರಶಸ್ತಿ ತಂದುಕೊಟ್ಟಿವೆ. ಇವರ ಕೋಣ ಕಂಬಳದಲ್ಲಿ ಸುಮಾರು ಹತ್ತಕ್ಕೂ ಅಧಿಕ ಬಾರಿ ಚಿನ್ನ ಗೆದ್ದಿದೆ. ಕನೆಹಲಗೆ , ಹಗ್ಗ ಹಿರಿಯ, ಹಗ್ಗ ಕಿರಿಯ, ನೇಗಿಲು ಹಿರಿಯ, ನೇಗಿಲು ಕಿರಿಯ,ಅಡ್ಡಹಲಗೆ ಓಟದಲ್ಲಿ ಇವರ ಜೋಡೆತ್ತುಗಳು ಪ್ರಶಸ್ತಿ ಪಡೆದಿವೆ.
ಮೊಬೈಲ್‌ ಸಂಖ್ಯೆ: 8050050147

ಶ್ರಮದಿಂದ ಕೃಷಿಯಲ್ಲಿ ಲಾಭ
ಕೃಷಿ ಯಾವತ್ತು ಕಷ್ಟ ಅಂತ ಆಗುವುದೇ ಇಲ್ಲ ನಾವು ಶ್ರಮಪಟ್ಟು ಬೆಳೆದರೆ ಅದರಲ್ಲಿ ಲಾಭ ಗಳಿಸಬಹುದು. ನನ್ನ ಭೂಮಿಯಲ್ಲಿ ಸಾವಯವ ಕೃಷಿ ಮಾಡಿ 1,200 ಮುಡಿ ಭತ್ತ ಇಳುವರಿ ಪಡೆದಿದ್ದೇನೆ. ಇತರ ಕೃಷಿಕರಿಗೆ ಸಾವಯವ ಗೊಬ್ಬರ ಬಳಕೆ ಮಾಡಿ ಎಂದು ಸಲಹೆ ನೀಡುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೂ ಕೃಷಿಯಲ್ಲಿ ಆಸಕ್ತಿಯಿತ್ತು. ಇದರಲ್ಲಿ ಯಶಸ್ವಿಯೂ ಆಗಿದ್ದೇನೆ. 2018ರ ಮೇ 29ರಂದು ಬಂದ ದಿಢೀರ್‌ ನೆರೆಯಿಂದಾಗಿ ಮಣ್ಣಿನ ಒಡ್ಡು ಒಡೆದು ಆಗ ತಾನೇ ಇಟ್ಟಿದ್ದ ಭತ್ತದ ಪೈರು, ಬೈ ಹುಲ್ಲು ,ನೆರೆಗೆ ಕೊಚ್ಚಿಕೊಂಡು ಹೋದರೆ, ಮಿಲ್‌ನ ಯಂತ್ರ ಹಾಳಾಯಿತು. ಇದರಿಂದ ಲಕ್ಷಾಂತರ ನಷ್ಟವಾಗಿ ಸ್ವಲ್ಪ ಹಿನ್ನಡೆಯಾಯಿತು. ಈಗ ಎಸ್‌ಟಿಪಿ ಸ್ಥಾವರದ ಹೊಡೆತದಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಸದಾ ಕಾಡುತ್ತಿದೆ.
– ಗೋಪಾಲಕೃಷ್ಣ ಪ್ರಭು, ಕೃಷಿಕ

ಲಕ್ಷ್ಮೀ ನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next