Advertisement

ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಬಿಐಗೆ ಒಪ್ಪಿಸಿ: ಬೇಳೂರು ಒತ್ತಾಯ

04:25 PM May 16, 2022 | Team Udayavani |

ಸಾಗರ: ಸಿಐಡಿ ರಾಜ್ಯ ಸರ್ಕಾರದ ಕೈಗೊಂಬೆಯಾಗಿದ್ದು, ಪಿಎಸ್‌ಐ ನೇಮಕಾತಿ ಹಗರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಸಿಐಡಿ ಹಗರಣಕ್ಕೆ ಸಂಬಂಧಪಟ್ಟಂತೆ ಸಣ್ಣಪುಟ್ಟ ಪೊಲೀಸ್ ಅಧಿಕಾರಿಗಳನ್ನು ಬಂಧಿಸುತ್ತಿದೆ. ನೂರಾರು ಕೋಟಿ ರೂಪಾಯಿ ಹಗರಣದ ಹಿಂದೆ ದೊಡ್ಡದೊಡ್ಡ ಕಿಂಗ್‌ಪಿನ್‌ಗಳಿದ್ದು, ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರಬೇಕಾದರೆ ಸಮಗ್ರ ತನಿಖೆ ಅಗತ್ಯ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದರು.

ಇದನ್ನೂ ಓದಿ: ಥಿಯೇಟರ್ ನಲ್ಲಿ ‘ಟ್ವೆಂಟಿ ಒನ್ ಹವರ್ಸ್’; ಡಾಲಿ ಅಭಿನಯದ ಚಿತ್ರ ಮೇ.20ಕ್ಕೆ ರಿಲೀಸ್

ರಾಜ್ಯದಲ್ಲಿರುವುದು ಕಣ್ಣುಕಿವಿ ಇಲ್ಲದ ಸರ್ಕಾರ. ಬಡವರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಸಾಗರ ಕ್ಷೇತ್ರದ ಶಾಸಕರು ಸಹ ಬಡವರ ಬಗ್ಗೆ ಆಸಕ್ತಿ ಇಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಒಂದು ಆಶ್ರಯ ನಿವೇಶನ, ಬಗರ್‌ಹುಕುಂ ಜಮೀನು ಮಂಜೂರು ಮಾಡಿಲ್ಲ. ತಮಗೆ ಬೇಕಾದವರು, ಹಣ ಕೊಟ್ಟ ಒಬ್ಬಿಬ್ಬರಿಗೆ ಬಗರ್‌ಹುಕುಂ ಹಕ್ಕುಪತ್ರ ನೀಡಿದ್ದು ಬಿಟ್ಟರೆ ಅರ್ಹರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಸ್ಲಂಬೋರ್ಡ್‌ನಿಂದ ನಿರ್ಮಿಸುತ್ತಿರುವ ಮನೆ ಕಾಮಗಾರಿ ಈತನಕ ಮುಗಿಯದೆ ಇರುವುದರಿಂದ ಹಣ ಕಟ್ಟಿದ ಬಡವರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ. ಶಾಸಕರು ಮಾತೆತ್ತಿದರೆ ಗಣಪತಿ ಕೆರೆ ಎನುತ್ತಾರೆ. ಕೆರೆ ಪಕ್ಕದಲ್ಲಿ ಶಾಸಕರು ಜಾಗ ಖರೀದಿ ಮಾಡಿದ್ದಾರೆ. ಒತ್ತುವರಿದಾರರ ಪಟ್ಟಿಯಲ್ಲಿ ಶಾಸಕರ ಹೆಸರು ಇದ್ದು, ಪ್ರಾಧಿಕಾರ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕೆರೆ ಅಭಿವೃದ್ಧಿಯಾದರೆ ತಮ್ಮ ಜಾಗಕ್ಕೆ ಅನುಕೂಲ ಎಂದು ಗಣಪತಿ ಕೆರೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಸಿರುಮಕ್ಕಿ ಸೇತುವೆ ನಿರ್ಮಾಣ ಹಿನ್ನೀರು ಭಾಗದ ಜನರ ಕನಸು. ಕಾಗೋಡು ತಿಮ್ಮಪ್ಪ ಅವರು ಅಧಿಕಾರದಲ್ಲಿದ್ದಾಗ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ 98 ಕೋಟಿ ರೂ. ಬಿಡುಗಡೆ ಮಾಡಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಶಾಸಕ ಹಾಲಪ್ಪ ಪಟಗುಪ್ಪ ಸೇತುವೆ ನಿರ್ಮಾಣಕ್ಕೆ ತೋರಿಸಿದಷ್ಟು ಆಸಕ್ತಿ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ತೋರಿಸುತ್ತಿಲ್ಲ. ಹಸಿರುಮಕ್ಕಿ ಸೇತುವೆಗೆ ಸಂಬಂಧಪಟ್ಟಂತೆ ಶೇ. ೪೦ ಕಮೀಷನ್ ಶಾಸಕರಿಗೆ ಸಂದಾಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೇತುವೆ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. ಹಸಿರುಮಕ್ಕಿ ಸೇತುವೆ ತ್ವರಿತ ನಿರ್ಮಾಣಕ್ಕೆ ಒತ್ತಾಯಿಸಿ ಸ್ಥಳೀಯರು ಹಮ್ಮಿಕೊಳ್ಳುತ್ತಿರುವ ಪಾದಯಾತ್ರೆಗೆ ತಮ್ಮ ಸಂಪೂರ್ಣ ಬೆಂಬಲವಿದ್ದು, ತಾವು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು.

Advertisement

ಇದನ್ನೂ ಓದಿ: ಸಮವಸ್ತ್ರ ಸಮಾಚಾರ: ನಿಮ್ಮ ಮಕ್ಕಳ ಯೂನಿಫಾರಂ ಎಲ್ಲಿಂದ ಬರುತ್ತೆ?

ಸಾಗರ ಕ್ಷೇತ್ರವ್ಯಾಪ್ತಿಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಓಸಿ, ಮಟ್ಕಾ, ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಗಾಂಜಾ ಸೇವನೆ ಮಾಡಿದವರು ಅಪರಾಧಿ ಕೃತ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಓಸಿ, ಮಟ್ಕಾ, ಗಾಂಜಾ ಹಾವಳಿ ತಡೆಗಟ್ಟಲು ಪೊಲೀಸ್ ಉಪ ಅಧೀಕ್ಷಕ ರೋಹನ್ ಜಗದೀಶ್ ಮತ್ತವರ ತಂಡ ಸಂಪೂರ್ಣ ವಿಫಲವಾಗಿದೆ. ಬಹುಶಃ ಓ.ಸಿ. ದಂಧೆಯಲ್ಲೂ ಶಾಸಕರಿಗೆ ಕಮೀಷನ್ ಹೋಗುತ್ತಿದೆ. ಆದ್ದರಿಂದಲೇ ಅದನ್ನು ನಿಯಂತ್ರಿಸಲು ಅಧಿಕಾರಿಗಳ ಮೇಲೆ ಅವರು ಒತ್ತಡ ತರುತ್ತಿಲ್ಲ. ಶಾಸಕರು ತಮ್ಮ ಬೆಂಬಲಿಗನ ಮೇಲೆ ಹಲ್ಲೆ ಮಾಡಿದಾಗ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದರು. ಈಗ ಬ್ರಾಹ್ಮಣ ಮತ್ತು ಲಿಂಗಾಯಿತ ಮುಖಂಡರ ಮೇಲೆ ಎಂಡಿಎಫ್ ಗಲಾಟೆಯಲ್ಲಿ ಹಲ್ಲೆ ನಡೆದಿದೆ. ಈತನಕ ಪ್ರಕರಣ ಸಹ ದಾಖಲಾಗಿಲ್ಲ. ಈಗ ಶಾಸಕರು ಧರಣಿ ನಡೆಸಿ ಎಫ್‌ಐಆರ್ ದಾಖಲು ಮಾಡಲು ಒತ್ತಡ ತರಲಿ ಎಂದು ಹೇಳಿದ ಅವರು, ಕಾಗೋಡು ಪುತ್ರಿ ಡಾ. ರಾಜನಂದಿನಿ ಅವರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿರುವ ಕೃತ್ಯ ಖಂಡನೀಯ. ಈ ಸಂಬಂಧ ದೂರು ನೀಡಿ ಎಫ್‌ಐಆರ್ ದಾಖಲಾಗಿದೆ. ಇಂತಹ ಘಟನೆಗಳನ್ನು ನಾನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ಪ್ರಮುಖರಾದ ತಾರಾಮೂರ್ತಿ, ಯಶವಂತ ಪಣಿ, ಡಿ.ದಿನೇಶ್, ಅನ್ವರ್ ಭಾಷಾ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next