ಮುಂಬಯಿ: ಅಸೋಸಿಯೇಶನ್ ಆಫ್ ಕನ್ನಡ ಕೂಟಸ್ ಆಫ್ ಅಮೆರಿಕಾ ಸಂಸ್ಥೆಯು ಉತ್ತರ ಟೆಕ್ಸಾಸ್ ಮಲ್ಲಿಗೆ ಕನ್ನಡ ಕೂಟ ಇದರ ಆಶ್ರಯದಲ್ಲಿ ಇತ್ತೀಚೆಗೆ ಅಮೆರಿಕದ ಡಾಲಸ್ ನಗರದ ಶೆರಟಾನ್ ಸಮಾವೇಶ ಸಭಾಗೃಹದಲ್ಲಿ ಆಯೋಜಿಸಿದ್ದ ತ್ರಿದಿನಗಳಲ್ಲಿ 10 ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಗರದ ಕವಿ, ಕತೆಗಾರ, ಲೇಖಕ ಗೋಪಾಲ್ ತ್ರಾಸಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ನಗರದಲ್ಲಿ ಸಂವೇದನಾಶೀಲ ಕವಿಯಾಗಿ, ಕತೆಗಾರರಾಗಿ, ಲೇಖಕರಾಗಿ ಗುರುತಿಸಿಕೊಂಡ ಗೋಪಾಲ ತ್ರಾಸಿ ಅವರು ನಾಡಿನ ಹೆಸರಾಂತ ಕವಿ, ಸಾಹಿತಿ ಜಯಂತ್ ಕಾಯ್ಕಿಣಿ ಅಧ್ಯಕ್ಷತೆಯಲ್ಲಿ ಜರಗಿದ “ಶ್ರಾವಣ ಮಧ್ಯಾಹ್ನ-ಅಕ್ಕ 2018 ಕವಿಗೋಷ್ಠಿ’ಯಲ್ಲಿ ತನ್ನ ಹುಣ್ಣಿಮೆ-ಅಭಗ್ನ ಹಾಗೂ ಹೋಳಿ ಎಂಬ ಎರಡು ಕವಿತೆಗಳನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಪ್ರಸ್ತುತಪಡಿಸಿ ನೂರಾರು ಸಾಹಿತ್ಯಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದರು.
ಗೋಪಾಲ ತ್ರಾಸಿ ಅವರನ್ನು ಅಕ್ಕ ಸಮಿತಿಯ ಕಾರ್ಯಾಧ್ಯಕ್ಷ ಅಮರ್‌ನಾಥ್ ಗೌಡ ಮತ್ತು ಅಕ್ಕ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಕೀಲರ ಸ್ಮರಣಿಕೆಯನ್ನಿತ್ತು ಗೌರವಿಸಿದರು. ಅಂತೆಯೇ ತ್ರಾಸಿ ಅವರ ಕಾವ್ಯ ಪ್ರತಿಭೆಯ ಬಹುಮುಖ ಪ್ರತಿಭಾ ಸಂಪನ್ನತೆಯನ್ನು ಗುರುತಿಸಿ ಮೊಂಟ್‌ಗೊಮೆರಿ ಕಂಟ್ರಿ ರಾಜ್ಯ ಕೌನ್ಸಿಲ್ ವತಿಯಿಂದ ಕೌನ್ಸಿಲ್ ಸದಸ್ಯ ರೋಜØರ್ ಬೆರ್ಲಿನರ್ ಅವರು ತ್ರಾಸಿ ಅವರಿಗೆ ಗೌರವಪತ್ರ ಪ್ರದಾನಿಸಿ ಅಭಿನಂದಿಸಿ ಶುಭಹಾರೈಸಿದರು. ಮುಂಬಯಿಯ ರಾತ್ರಿ ಶಾಲೆಯಿಂದ ಬಂದ ಪ್ರತಿಭೆಗೆ ಸಂದ ಅರ್ಹ ಗೌರವ ಇದಾಗಿದೆ ಎಂದು ಇದೇ ಸಂದರ್ಭದಲ್ಲಿ ಗೋಪಾಲ್ ತ್ರಾಸಿ ತಿಳಿಸಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಸದಸ್ಯರೂ ಮತ್ತು ಕ್ರೀಡಾಪಟುವಾಗಿರುವ ಗೋಪಾಲ್ ತ್ರಾಸಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ಭರಣಿಮನೆ ಲಿಂಗ ಪೂಜಾರಿ ಉಪ್ಪಿನಕುದುರು ಮತ್ತು ಹೊಸೊಕ್ಲು ಮನೆ ಮುತ್ತು ಪೂಜಾರಿ ತ್ರಾಸಿ ದಂಪತಿಯ ಪುತ್ರ. ಪತ್ನಿ ಸವಿತಾ ಗೋಪಾಲ್, ಮಕ್ಕಳಾದ ಮಾ| ಧ್ರುವ ಹಾಗೂ ಕು| ಅಪೂರ್ವಾ ಅವರೊಂದಿಗೆ ಕಾಂದಿವಲಿ ಪಶ್ಚಿಮದ ಚಾರ್ಕೊಪ್‌ನಲ್ಲಿ ವಾಸವಾಗಿದ್ದಾರೆ.