ನವದೆಹಲಿ: ನೀವು ಜಿ-ಮೇಲ್ ಬಳಕೆದಾರರಾಗಿದ್ದು ಕಳೆದ 2 ವರ್ಷಗಳಿಂದ ನಿಮ್ಮ ಖಾತೆಯನ್ನು ಬಳಕೆ ಮಾಡದೇ ಇದ್ದೀರಾ ? ಹಾಗಾದರೆ ಮುಂದಿನ ತಿಂಗಳು ನಿಮ್ಮ ಖಾತೆಯನ್ನೇ ಗೂಗಲ್ ನಿಷ್ಕ್ರಿಯಗೊಳಿಸಲಿದೆ. ಹೀಗೆಂದು ಗೂಗಲ್, ಮೇಲ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಸೈಬರ್ ದಾಳಿಗಳು ಹೆಚ್ಚಿದ್ದು ಬಹುಕಾಲದಿಂದ ಬಳಕೆ ಮಾಡದಂಥ ಖಾತೆಗಳನ್ನೇ ಸೈಬರ್‌ದಾಳಿಗಳಿಗೆ ಅಸ್ತ್ರವಾಗಿಸಿಕೊಳ್ಳುತ್ತಿರುವುದು ವರದಿಯಾಗಿದೆ. ಈ ನಿಟ್ಟಿನಲ್ಲಿ ಭದ್ರತಾ ದೃಷ್ಟಿಯಿಂದ ಬಳಕೆಯಲ್ಲಿ ಇಲ್ಲದಂಥ ಖಾತೆಗಳನ್ನು ನಿಷ್ಕ್ರಿಯಗೊಳಿಸಲು ಗೂಗಲ್ ಮುಂದಾಗಿದೆ.
ಮುಂದಿನ ತಿಂಗಳಿನಿಂದಲೇ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು, ಇದರ ಪರಿಣಾಮವಾಗಿ ಜಿ-ಮೇಲ್, ಡಾಕ್ಯುಮೆಂಟ್ಸ್, ಡ್ರೈವ್, ಗೂಗಲ್ ಮೀಟ್, ಕ್ಯಾಲೆಂಡರ್, ಫೋಟೋಸ್ ಸೇರಿದಂತೆ ಖಾತೆಯೊಂದಿಗೆ ಲಿಂಕ್ ಆಗಿರುವ ಎಲ್ಲಾ ದತ್ತಾಂಶಗಳನ್ನೂ ಅಳಿಸಿ ಹಾಕಲಾಗುವುದು ಎಂದು ತಿಳಿಸಿದೆ.
2 ವರ್ಷದಿಂದ ಜಿ-ಮೇಲ್ ಲಾಗಿನ್ ಆಗದೇ ಇರುವವರಿಗೆ ಈಗ ಸಮಯ ನೀಡಲಾಗಿದೆ. ಈಗಲಾದರೂ ಲಾಗಿನ್ ಆಗಿ ಖಾತೆಯನ್ನು ಆ್ಯಕ್ಟಿವ್ ಆಗಿ ಇಟ್ಟುಕೊಳ್ಳಲು ಕಂಪನಿ ಸೂಚಿಸಿದೆ. ಇಲ್ಲವಾದರೆ ಆ ಖಾತೆಗಳು ಶಾಶ್ವತವಾಗಿ ಮುಚ್ಚಿಹೋಗಲಿದೆ ಎಚ್ಚರಿಕೆ ನೀಡಿದೆ.
ಬಳಕೆಯಲ್ಲಿರುವ ಖಾತೆಗಳನ್ನೇನಾದರೂ ತಪ್ಪಾಗಿ ಅಳಿಸಿಬಿಡಬಹುದಾದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಇಮೇಲ್ ಹಾಗೂ ರಿಕವರಿ ಇಮೇಲ್ ಎರಡಕ್ಕೂ ಸಂದೇಶಗಳನ್ನು ಕಳುಹಿಸಲಾಗುವುದು. ಈ ವೇಳೆ ಪ್ರತಿಕ್ರಿಯೆ ಬರದಿದ್ದಲ್ಲಿ ಅಂಥ ಖಾತೆಯನ್ನು ಬಳಕೆಯಲ್ಲಿಲ್ಲದ ಖಾತೆ ಎಂದು ಪರಿಗಣಿಸಿ ನಿಷ್ಕ್ರಿಯಗೊಳಿಸಲಾಗುವುದು ಎಂದು ಗೂಗಲ್ ತಿಳಿಸಿದೆ.