Advertisement

ಗೂಗಲ್ ಸರ್ಚ್ ಎಲ್ಲದಕ್ಕೂ ಇರಲಿ ಆದರೆ ಗೂಗಲ್ ಸರ್ಚ್ ಎಲ್ಲಾ ಆಗದಿರಲಿ!

12:16 PM Jul 06, 2021 | Team Udayavani |

ಇದೊಂದು ಅನುಭವದ ಕಥೆ. ವೃತ್ತಿಯಲ್ಲಿ ವೈದ್ಯರಾಗುವುದೇ ಒಂದು ಸವಾಲಿನ ಕೆಲಸ. ಅದರಲ್ಲೂ ಭಾರತೀಯ ವೈದ್ಯ ಪದ್ಧತಿಯವರಾದರೆ ಅದು ಇನ್ನಷ್ಟು ಸವಾಲಿನ ಕಥೆ. ಏಕೆಂದರೆ, ಮನೆ ಮನೆಯಲ್ಲೂ ಒಬ್ಬ ವೈದ್ಯ ಇದ್ದೆ ಇರುತ್ತಾರೆ. ಇತ್ತೀಚೆಗಿನ ದಿನಗಳಲ್ಲಿ, “ಗೂಗಲ್ ದೇವೋಭವ “ ಎನ್ನುವ ರೀತಿಯಲ್ಲಿ ನಾವು ಬದುಕುತಿದ್ದೇವೆ. ಈ ಕೋವಿಡ್ ನಂತರವಂತು ಗೂಗಲ್ ಮೇಲೆ ನಮ್ಮ ಅವಲಂಬನೆ ತೀರಾ ಹೆಚ್ಚಾಗಿದೆ. ಶಿಕ್ಷಣ, ಕಚೇರಿ ಕೆಲಸಗಳಿಗೆಲ್ಲವೂ ನಾವು ಗೂಗಲ್ ದೇವರಾಗಿ ಹೋಗಿದೆ.ನಾವು ಒಗ್ಗರಣೆ ಘಾಟಿಗೆ ಕೆಮ್ಮಿದರೂ,ನಮಗೇನಾದರೂ ಖಾಯಿಲೆಯೇ ಎಂದು ಗೂಗಲ್ ಡಾಕ್ಟರ್ ನಲ್ಲಿ ಕೇಳುವ ಕಾಲ ಬಂದೊದಗಿದೆ.

Advertisement

ವೈದ್ಯರುಗಳಿಗೆ ವರುಷಾನುಗಟ್ಟಲೆ ಓದಿ, ಸಾಲದು ಎಂದು, ರೋಗಿಗಳು ಬರುವವರು ಗೂಗಲ್ ನಿಂದ ಏನೇನು ಅಪ್ರಯೋಜನಕಾರಿ ಅಥವಾ ವಾಸ್ತವಕ್ಕೆ ಹತ್ತಿರವಲ್ಲದ ವಿಷಯಗಳನ್ನು ತಿಳಿದುಕೊಂಡು ಬಂದಿರುತ್ತಾರೆಂದು ಅರ್ಥೈಸಿಕೊಳ್ಳಲು, ಅವರು ಗೂಗಲ್ ಮಾಡುವ ಪರಿಸ್ಥಿತಿ ಎದುರಿಗಿದೆ. ಇನ್ನು ನಾವು ಭಾರತೀಯ ವೈದ್ಯ ಪದ್ಧತಿಯವರು, ನಮಲ್ಲಿ ಬರುವ ಮುಂಚೆ ಸಾಕಷ್ಟು ಮನೆ ಮದ್ದು ಮಾಡಿಯೇ ಬರುತ್ತಾರೆ.

ಇದನ್ನೂ ಓದಿ:ಅರ್ಜುನ್ ಸರ್ಜಾರ ಕನಸಿನ ಶ್ರೀ ಯೋಗಾಂಜನೇಯ್ಯ ಸ್ವಾಮಿ ದೇವಾಲಯ ಹೇಗಿದೆ ನೋಡಿ

ಏಕೆಂದರೆ, ಗೂಗಲ್ ನಲ್ಲಿ home remedies ಅಂತ ಒತ್ತಿದರೆ ಸಾಲದೇ? ಆಯುರ್ವೇದ, ಹೆರ್ಬೋಲಜಿ, ಅದು ಇದು ಎಂದು ಸಹಸ್ರಗಟ್ಟಲೆ ಮನೆ ಮದ್ದುಗಳು ರಾರಾಜಿಸುವುದು. ಯಾವುದನ್ನು ಹಿಂದೆ ಮುಂದೆ ನೋಡದೆ, ಮನೆ ಮದ್ದಾದ ಕಾರಣ ವಿಪರೀತ ಪರಿಣಾಮ ಇರುವುದಿಲ್ಲ ಎಂಬ ನಂಬಿಕೆ. ಇದಕ್ಕೆ ಉದಾಹರಣೆ ಎಂದರೆ, ಕರೋನ ಕಷಾಯ ಎಂದು, ಶುಂಠಿ, ಚಕ್ಕೆ ಇತರೆ ವಸ್ತುಗಳ ಕಷಾಯ ದಿನಾ ನೀರಿನ ಬದಲು ಕುಡಿದು, ಬಾಯಿ ಹುಣ್ಣು, ಎದೆ ಉರಿ ಬರಿಸಿಕೊಂಡವರು ಅದೆಷ್ಟೋ ಮಂದಿ. ಇಂಥ ಅದೆಷ್ಟೋ ಉದಾಹರಣೆಗಳು ಹೇಳಿದಷ್ಟು ಸಿಗುವುದು.

ನಾನು ಹೇಳಬೇಕೆಂದುಕೊಂಡ ವಿಷಯವೇನೆಂದರೆ, ಗೂಗಲ್ ಮಾಡಿ ನಿಮ್ಮ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಸರಿ ಆದರೆ ಅದನ್ನು ನಂಬಿ ನಿಮ್ಮ ವೈದ್ಯರನ್ನು ಪ್ರಶ್ನಿಸುವುದಲ್ಲ. ಅವರ ಪದವಿಯನ್ನು ಸಂದೇಹದಿಂದ ನೋಡಬಾರದು. ಅವರ ಸಲಹೆ ಅವರ ತಿಳುವಳಿಕೆ ಹಾಗೂ ಅನುಭವದಿಂದ ಕೂಡಿರುವುದೇ ಹೊರತು ಸಣ್ಣ ಪುಟ್ಟ ಅಂಕಣಗಳನ್ನು ಓದಿ ಅಲ್ಲ.

Advertisement

ಸಾಧಾರಣವಾಗಿ ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿ ಎಂಬಂತೆ ನಿಯಮಿತ ವ್ಯಾಯಾಮ,, ಹಣ್ಣು ತರಕಾರಿಗಳ ಸೇವನೆ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಹಾಗೂ ಧ್ಯಾನ ನಮ್ಮ ಆರೋಗ್ಯ ತಕ್ಕ ಮಟ್ಟಿಗೆ ಹತೋಟಿಯಲ್ಲಿ ಇಡಬಹುದು. ನಿಮ್ಮ ವೈದ್ಯರು ಹೇಳಿದ ಪಥ್ಯ ಹಾಗೂ ಔಷಧಿಗಳನ್ನು ಹೇಳಿದ ಹಾಗೆ, ಹೇಳಿದಷ್ಟು ದಿನಗಳು ಸರಿಯಾಗಿ ತೆಗೆದುಕೊಳ್ಳುವುದರಿಂದ, ನಮ್ಮ ಆರೋಗ್ಯದಲ್ಲಿ ಆದ ಏರುಪೇರು ಸರಿಯಾಗುವುದು. ಯಾವುದೇ ಒಂದು ಆರೋಗ್ಯ ಸಮಸ್ಯೆ ಎದುರಾದಾಗ, ಅದು ಸಣ್ಣ ಮಟ್ಟಿಗೆ ಇರುವಾಗಲೇ ವೈದ್ಯರನ್ನು ಕಾಣುವುದು ಕ್ಷೇಮ.

ಅದು ದೊಡ್ಡದಾದ ಮೇಲೆ ಅದು ಬಗೆಹರಿಸಲಾಗದಿದ್ದಲ್ಲಿ, ವೈದ್ಯರನ್ನು ದೂಷಿಸಿ ಪ್ರಯೋಜನವಿಲ್ಲ. ಆರೋಗ್ಯದ ವಿಷಯದಲ್ಲಿ ಮನೆಮದ್ದು ಅಗತ್ಯ, ಹಾಗೆಂದು ಮನೆಮದ್ದು ಅಗತ್ಯ ಔಷದೋಪಚಾರ, ಅಥವಾ ಪರೀಕ್ಷೆಗಳು ಅಗತ್ಯವಿದ್ದಲ್ಲಿ ಮಾಡಲೇಬೇಕಾಗುತ್ತದೆ. ಅಥವಾ ಮುಂದೆಂದೋ ಬರುವ ಔಷಧದ ಅಡ್ಡ ಪರಿಣಾಮಗಳಿಗೆ ಹೆದರಿ ಇಂದು ಅಗತ್ಯ ಔಷದೋಪಚಾರ ಮಾಡದಿದ್ದಲ್ಲಿ ಪ್ರಮಾದವಾದೀತು.

ಇಷ್ಟುಸಾಲದೆಂದು, ನಿಮ್ಮ ವೈದ್ಯರು ಹೇಳಿದ ರೋಗ ತೀರ್ಮಾನದ ಮೇಲೆ ನಂಬಿಕೆ ಇಡಿ. ಗೂಗಲ್ ತೋರಿಸಿದರ ಮೇಲಲ್ಲ. ತಲೆನೋವು ಶೀತ ಅಥವಾ ಆಯಾಸಕ್ಕೂ ಬರಬಹುದು, tumor ಆಗಿರಬೇಕೆಂದೇನಿಲ್ಲ. ಜ್ವರ ಮಾಮೂಲಿ ಹವಾಮಾನ ಬದಲಾವಣೆಯಿಂದ ಬಂದಿರಬಹುದು, ಕೋವಿಡ್ ಆಗಿರಬೇಕೆಂದೇನಿಲ್ಲ. ಹಾಗಾಗಿ, ಗೂಗಲ್ ಮೇಲೆ ನಂಬಿಕೆ ಇಡಿ. ಅದೇ ಸತ್ಯ ಬಾಕಿ ಮಿಥ್ಯ ಆಗಿರಬೇಕೆಂದೇನಿಲ್ಲ.ಆದುದರಿಂದ, ಓದುಗರಲ್ಲಿ ಒಂದು ಕಳಕಳಿಯ ವಿನಂತಿ, ದಯಮಾಡಿ ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿ ಇಟ್ಟುಕೊಳ್ಳಿ ಅಥವಾ ವೈದ್ಯರಲ್ಲಿ ಒಪ್ಪಿಸಿ. ಗೂಗಲ್ ಗೆ ಅಲ್ಲ.

ಡಾ. ಭಾವನಾ. ಎಂ,
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ,
bhavanabaradka@gmail.com

Advertisement

Udayavani is now on Telegram. Click here to join our channel and stay updated with the latest news.

Next