Advertisement

ಗೂಗಲಿಸಿ ನೋಡಿ

06:00 AM Apr 22, 2018 | |

ಇಪ್ಪತ್ತು ವರ್ಷಗಳ ಹಿಂದೆ ಸಾಂಸ್ಥಿಕ ರೂಪ ಪಡೆದುಕೊಂಡ ಗೂಗಲ್‌ ಇದೀಗ ಇಂಟರ್‌ನೆಟ್‌ನ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು. ಗೂಗಲ್‌ ಎಂಬುದು ಇಂದಿನ ಜೀವನದ ಅತ್ಯವಶ್ಯಕ ಸಂಗತಿಯಾದಂತಾಗಿದೆ.  ಮಾಹಿತಿಗಾಗಿ ಹುಡುಕುವ ಕೆಲಸಕ್ಕೆ ಗೂಗ್ಲಿಂಗ್‌ ಪರ್ಯಾಯ ಪದವೇ ವಾಡಿಕೆಗೆ ಬಂದಿದೆ. ಮಾಹಿತಿಯೇ ವ್ಯಾಪಾರದ ವಸ್ತು ಎನ್ನುವುದು ಗೊತ್ತಿದ್ದರೂ ಇಲ್ಲಿ ಉತ್ಪಾದಕ ಯಾರು, ಗ್ರಾಹಕ ಯಾರು, ಒಟ್ಟಾರೆ ಲಾಭ ಯಾರಿಗೆ ಎನ್ನುವುದು ಮಾತ್ರ ಅಸ್ಪಷ್ಟವಾಗಿಯೇ ಇದೆ.

Advertisement

ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ಏನಾದರೂ ಮಾಹಿತಿ ಬೇಕಾದಾಗ ಮನೆಯಲ್ಲಿದ್ದ ಪುಸ್ತಕಗಳಲ್ಲಿ ಹುಡುಕುವುದು, ಗ್ರಂಥಾಲಯಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ನೂರಾರು ಪುಟದ ಪುಸ್ತಕಗಳಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಕೆಲಸ ಸಾಕಷ್ಟು ಕ್ಲಿಷ್ಟವೂ ಆಗಿತ್ತು. ಪಠ್ಯರೂಪದ ಮಾಹಿತಿಯನ್ನೇನೋ ಪುಸ್ತಕದಿಂದ ನಕಲಿಸಿಕೊಳ್ಳಬಹುದಿತ್ತು, ಸರಿ. ಚಿತ್ರಗಳು ಬೇಕಾದವೆಂದರೆ ಹಳೆಯ ಪತ್ರಿಕೆಗಳನ್ನು ಆಶ್ರಯಿಸುವುದು, ಅವನ್ನು ಕತ್ತರಿಸಲು ಪರದಾಡುವುದು- ಇದೇ ನಮಗಿದ್ದ ಆಯ್ಕೆ. 

ಈ ಪರದಾಟವನ್ನು ಕಡಿಮೆ ಮಾಡಬಲ್ಲ ಹಿರಿಯರ ನೆರವು ಎಲ್ಲೋ ಕೆಲವರಿಗಷ್ಟೇ ದೊರಕುತ್ತಿತ್ತು. ಶಾಲೆಯ ಮೇಷ್ಟರು, ಅನುಭವಿ ಗ್ರಂಥಪಾಲಕರು ಬೇಕಾದ್ದನ್ನು ಥಟ್ಟನೆ ಹುಡುಕಿಕೊಟ್ಟರೆ ನಮಗೆ ಏನೋ ಮಹತ್ವದ್ದನ್ನು ಸಾಧಿಸಿದಷ್ಟು ಸಂತೋಷವಾಗುತ್ತಿತ್ತು!

ಈಗ ಪರಿಸ್ಥಿತಿ ಎಷ್ಟೆಲ್ಲ ಬದಲಾಗಿದೆಯೆಂದರೆ ಹಿಂದೊಮ್ಮೆ ಹೀಗೆಲ್ಲ ಇತ್ತು ಎನ್ನುವುದೂ ಇಂದಿನ ಕಿರಿಯರಿಗೆ ತಿಳಿದಿಲ್ಲ. ಹೊಯ್ಸಳ ವಾಸ್ತುಶಿಲ್ಪವಿರಲಿ, ಹರಪ್ಪಾ ನಾಗರೀಕತೆ ಇರಲಿ, ಆಫ್ರಿಕಾದ ವನ್ಯಜೀವನವೇ ಇರಲಿ- ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಅವರು ಹೇಳುವುದು ಒಂದೇ ಮಾತು: ಗೂಗಲ್‌ ಮಾಡಿ!

ಅಂತರಜಾಲ – ವಿಶ್ವವ್ಯಾಪಿ ಜಾಲಗಳು ಬೆಳೆದಂತೆ ಎಲ್ಲೆಲ್ಲೋ ಹಂಚಿಹೋಗಿದ್ದ ಮಾಹಿತಿಯೆಲ್ಲ ಒಂದುಕಡೆ ಸುಲಭವಾಗಿ ಸಿಗುವಂತಾಯಿತಲ್ಲ, ಅದರಲ್ಲಿ ನಮಗೆ ಬೇಕಾದ್ದನ್ನು ಸುಲಭವಾಗಿ ಹುಡುಕಿಕೊಳ್ಳುವಂತಿರಬೇಕು ಎನ್ನುವ ಅಗತ್ಯವೂ ಬಹಳ ಬೇಗ ಪ್ರಾಮುಖ್ಯ ಪಡೆದುಕೊಂಡಿತು. ಆಗ ಹುಟ್ಟಿದ್ದೇ ಸರ್ಚ್‌ ಇಂಜಿನ್‌ ಪರಿಕಲ್ಪನೆ. ಜಾಲಲೋಕದಲ್ಲಿರುವ ಅಗಾಧ ಪ್ರಮಾಣದ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಥಟ್ಟನೆ ಹುಡುಕಿಕೊಳ್ಳಲು ನೆರವಾಗುವ ತಂತ್ರಾಂಶ ಸೇವೆ ಇದು.

Advertisement

ಮೊದಲ ಸರ್ಚ್‌ ಇಂಜಿನ್ನುಗಳು ಅಂತರ್ಜಾಲದ ಬಾಲ್ಯಕಾಲದಲ್ಲೇ ಕಾಣಿಸಿಕೊಂಡವಾದರೂ ಅವುಗಳ ಮಹತ್ವ ಸ್ಪಷ್ಟವಾದದ್ದು ಜಾಲದ ವ್ಯಾಪ್ತಿ ವ್ಯಾಪಕವಾಗಿ ವಿಸ್ತರಿಸಿದ ನಂತರವೇ. ಪ್ರಪಂಚದ ಮೊದಲ ಸರ್ಚ್‌ ಇಂಜಿನ್‌ ಎಂದು ಕರೆಸಿಕೊಂಡ “ಆರ್ಚಿ’ಯಿಂದ (1990) ಪ್ರಾರಂಭಿಸಿ ಇಂತಹ ಅನೇಕ ತಂತ್ರಾಂಶ ಸೇವೆಗಳು ರೂಪುಗೊಂಡವಾದರೂ ಆ ಪೈಕಿ ಅಭೂತಪೂರ್ವ ಯಶಸ್ಸು ದೊರೆತದ್ದು ಗೂಗಲ್‌ ಎಂಬ ವಿಚಿತ್ರ ಹೆಸರಿಗೆ ಮಾತ್ರ.

ನಾಮಪದವೇ ಕ್ರಿಯಾಪದವಾಗಿ…
ಲ್ಯಾರಿ ಪೇಜ್‌ ಹಾಗೂ ಸೆರ್ಗಿ ಬ್ರಿನ್‌ ಎಂಬ ಸಂಶೋಧನಾ ವಿದ್ಯಾರ್ಥಿಗಳು 1996ರಲ್ಲಿ ಪ್ರಾರಂಭಿಸಿದ ಯೋಜನೆಯೇ ಗೂಗಲ್‌. ತಮ್ಮ ಯೋಜನೆಯ ವ್ಯಾಪ್ತಿ ಎಷ್ಟು ದೊಡ್ಡದು ಎಂದು ತೋರಿಸಲು ಸೂಕ್ತವಾದ ಹೆಸರಿನ ಹುಡುಕಾಟದಲ್ಲಿದ್ದ ಅವರಿಗೆ ಎಂಬ ಹೆಸರು ಕಾಣಿಸಿತಂತೆ. 1ರ ಮುಂದೆ 100 ಸೊನ್ನೆಗಳನ್ನು ಸೇರಿಸಿದರೆ ಸಿಗುವ ಸಂಖ್ಯೆಯ ಹೆಸರು ಇದು. ಈ ಹೆಸರಿನ ಅಪಭ್ರಂಶವೇ ಗೂಗಲ್‌!

1998ರಲ್ಲಿ ಸಾಂಸ್ಥಿಕ ರೂಪ ಪಡೆದುಕೊಂಡ ಗೂಗಲ್‌ ಇದೀಗ ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು. ಜಾಲಲೋಕದಲ್ಲಿ ಏನೇ ಮಾಹಿತಿ ಬೇಕೆಂದರೂ ಗೂಗಲ್‌ ಮೊರೆಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ ಅದೆಷ್ಟು ವ್ಯಾಪಕವಾಗಿದೆಯೆಂದರೆ, ಮಾಹಿತಿಗಾಗಿ ಹುಡುಕುವ ಕೆಲಸಕ್ಕೆ “ಗೂಗ್ಲಿಂಗ್‌’ (ಗೂಗಲ್‌ ಮಾಡು, ಗೂಗಲಿಸು) ಎಂಬ ಹೆಸರೇ ಹುಟ್ಟಿಕೊಂಡುಬಿಟ್ಟಿದೆ. ಗೂಗಲ್‌ ಎಂಬ ಅರ್ಥವಿಲ್ಲದ ನಾಮಪದ ಕಾಲಕ್ರಮದಲ್ಲಿ ಕ್ರಿಯಾಪದವೂ ಆಗಿಹೋಗಿರುವ ವಿಶಿಷ್ಟ ಉದಾಹರಣೆ ಇದು.

ಇಂದು ಅಸ್ತಿತ್ವದಲ್ಲಿರುವ ಅಸಂಖ್ಯ ಜಾಲತಾಣಗಳ ನಡುವೆ ನಮಗೆ ಬೇಕಾದ ಮಾಹಿತಿ ಎಲ್ಲಿದೆ ಎನ್ನುವುದನ್ನು ಗೂಗಲ್‌ನಂತಹ ಸರ್ಚ್‌ ಇಂಜಿನ್‌ಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಹೀಗೆ ಹುಡುಕಲು ಹೊರಟಾಗ ನಾವು ಟೈಪ್‌ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ “ಹುಡುಕುಪದ’) ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ.ಅದೆಲ್ಲ ಸರಿ, ಆದರೆ ನಮಗೆ ಬೇಕಾದ್ದನ್ನು ಹುಡುಕಿಕೊಡಲು ಸರ್ಚ್‌ ಇಂಜಿನ್‌ಗೆ ಸಾಧ್ಯವಾಗುವುದು ಹೇಗೆ?

ಈ ಕೆಲಸಕ್ಕಾಗಿ ಅವು ಸಾಕಷ್ಟು ತಯಾರಿ ಮಾಡಿಟ್ಟುಕೊಂಡಿರುತ್ತವೆ. ಸ್ವಯಂಚಾಲಿತ ತಂತ್ರಾಂಶ, ಅಂದರೆ “ಬಾಟ್‌’ಗಳ ನೆರವಿನಿಂದ ಅಪಾರ ಸಂಖ್ಯೆಯ ಜಾಲತಾಣಗಳನ್ನು ಪರಿಶೀಲಿಸುವ ಸರ್ಚ್‌ ಇಂಜಿನ್‌ಗಳು ಆ ತಾಣಗಳಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಒಂದಷ್ಟು ವಿವರಗಳನ್ನು ಉಳಿಸಿಟ್ಟುಕೊಳ್ಳುತ್ತವೆ. ನಾವು ಸರ್ಚ್‌ ಮಾಡಿದಾಗ ನಮಗೆ ಬೇಕಾದ ಮಾಹಿತಿಯಿರುವ ಜಾಲತಾಣಗಳ ಪಟ್ಟಿ ಥಟ್ಟನೆ ಕಾಣಿಸಿಕೊಳ್ಳುವುದಕ್ಕೆ ಈ ವಿವರಗಳೇ ಮೂಲ. 
ಅಂತರ್ಜಾಲ- ಜೇಡರಬಲೆ

ಬೃಹತ್‌ ಜೇಡರಬಲೆಯಂತಿರುವ ಜಾಲಲೋಕದಲ್ಲಿ ಸರಾಗವಾಗಿ ಓಡಾಡುತ್ತವಲ್ಲ, ಅದಕ್ಕಾಗಿಯೇ ಈ ಬಾಟ್‌ಗಳನ್ನು “ಸ್ಪೈಡರ್‌’ (ಜೇಡ) ಎಂದೂ ಗುರುತಿಸಲಾಗುತ್ತದೆ. ವೆಬ್‌ ಕ್ರಾಲರ್‌ ಎನ್ನುವುದು ಇವುಗಳ ಇನ್ನೊಂದು ಹೆಸರು. 

ಜಾಲತಾಣಗಳನ್ನು ರೂಪಿಸುವವರು ಇಂತಹ ತಂತ್ರಾಂಶಗಳಿಗೆ ಬೇಕಾದ ಮಾಹಿತಿಯನ್ನು ತಮ್ಮ ತಾಣಗಳಲ್ಲಿ ಉಳಿಸಿಡುತ್ತಾರೆ. 
ಈ ಬಾಟ್‌ಗಳ ಹುಡುಕಾಟ ಸಾಮಾನ್ಯವಾಗಿ ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರಿರುವ ಸರ್ವರ್‌ಗಳಿಂದ ಪ್ರಾರಂಭವಾಗುತ್ತದೆ. ತಾಣಗಳಲ್ಲಿರುವ ಮಾಹಿತಿಯನ್ನು ಗಮನಿಸುವುದರ ಜೊತೆಗೆ ಅಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಇವು ಹಿಂಬಾಲಿಸುವುದರಿಂದ ಬಾಟ್‌ಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಕೇಳಲು ಸುಲಭ ಎನಿಸಿದರೂ ಇದು ಭಾರೀ ದೊಡ್ಡ ಪ್ರಮಾಣದಲ್ಲಿ ನಡೆಯುವ ಕೆಲಸ. ಇದರಿಂದಾಗಿ ಇಂದು ಗೂಗಲ್‌ ಬಳಿ ಕೋಟಿಗಟ್ಟಲೆ ಜಾಲತಾಣಗಳ, ವೆಬ್‌ ಪುಟಗಳ ಬಗೆಗಿನ ಮಾಹಿತಿ ಲಭ್ಯವಿದೆ. ಇಷ್ಟೆಲ್ಲ ಅಗಾಧ ಪ್ರಮಾಣದ ಮಾಹಿತಿ ಇರುವುದರಿಂದಲೇ ಇಂದು ಆ ಸಂಸ್ಥೆಗೆ ಎಲ್ಲಿಲ್ಲದ ಮಹತ್ವ. ಮಾಹಿತಿಯ ಹುಡುಕಾಟದಲ್ಲಿರುವ ಬಳಕೆದಾರರಷ್ಟೇ ಅಲ್ಲ, ತಮ್ಮ ಬಗ್ಗೆ ಯಾವತ್ತೋ ಎಲ್ಲೋ ಸಂಗ್ರಹವಾಗಿರುವ ಮಾಹಿತಿಯ ಬಗ್ಗೆ ಚಿಂತಿತರಾಗಿರುವವರೂ ಇಂದು ಗೂಗಲ್‌ನ ಬೆನ್ನುಬಿದ್ದಿದ್ದಾರೆ. ಯುರೋಪಿನ ಹಲವು ರಾಷ್ಟ್ರಗಳ ನಾಗರಿಕರಿಗೆ ನೀಡಲಾಗಿರುವ ರೈಟ್‌ ಟು ಬಿ ಫ‌ರ್‌ಗಾಟನ್‌ ಎಂಬ ಹಕ್ಕಿನ ಅನ್ವಯ ತಮ್ಮ ಬಗ್ಗೆ ಈ ಹಿಂದೆ ಪ್ರಕಟವಾಗಿರುವ ಋಣಾತ್ಮಕ ಮಾಹಿತಿ (ಉದಾ: ಯಾವುದೋ ಪ್ರಕರಣದಲ್ಲಿ ಶಿಕ್ಷೆಯಾದ ಸುದ್ದಿ) ಸರ್ಚ್‌ ಫ‌ಲಿತಾಂಶದಲ್ಲಿ ಕಾಣಿಸದಂತೆ ಮಾಡಿ ಎಂದು ಅನೇಕರು ಗೂಗಲ್‌ ಸಂಸ್ಥೆಯನ್ನು ಕೇಳುತ್ತಿದ್ದಾರೆ. ಅಷ್ಟೇ ಏಕೆ, ಕೆಲ ಸನ್ನಿವೇಶಗಳಲ್ಲಿ ನ್ಯಾಯಾಲಯಗಳೂ ಅಂತಹ ವ್ಯಕ್ತಿಗಳನ್ನು ಬೆಂಬಲಿಸಿವೆ.  ಇದು ಕಳೆದ ಎರಡು ದಶಕಗಳಲ್ಲಿ ಗೂಗಲ್‌ ಮತ್ತು ಸರ್ಚ್‌ ತಂತ್ರಜ್ಞಾನ ಬೆಳೆದಿರುವ ಪರಿಯ ಒಂದು ಆಯಾಮ ಮಾತ್ರ. ಜಾಲತಾಣಗಳಲ್ಲಿರುವ ಪಠ್ಯರೂಪದ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಡಲೆಂದು ರೂಪುಗೊಂಡ ಈ ತಂತ್ರಜ್ಞಾನ ಇದೀಗ ಬಹಳ ವಿಸ್ತಾರವಾಗಿ ಬೆಳೆದಿದೆ. 

ನಿರ್ದಿಷ್ಟ ಪದಗಳನ್ನಷ್ಟೇ (ಕೀವರ್ಡ್‌) ಬಳಸಿ ಮಾಹಿತಿಗಾಗಿ ಹುಡುಕುವ ಬದಲು, ಸರ್ಚ್‌ ಇಂಜಿನ್‌ಗಳು ನಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಂಡದ್ದು (ನ್ಯಾಚುರಲ್‌ ಲ್ಯಾಂಗ್ವೆಜ್‌ ಪ್ರಾಸೆಸಿಂಗ್‌) ಇಲ್ಲಿನ ಮಹತ್ವದ ಹೆಜ್ಜೆಗಳಲ್ಲೊಂದು. ಮೊದಲು ಟೈಪಿಸಿದ ಕೆಲ ಅಕ್ಷರಗಳ ಆಧಾರದ ಮೇಲೆ ನಾವೇನು ಹುಡುಕುತ್ತಿದ್ದೇವೆ ಎಂದು ಊಹಿಸುವ ಸೌಲಭ್ಯ (ಆಟೋಕಂಪ್ಲೀಟ್‌), ಪಠ್ಯದ ಜೊತೆಗೆ ಚಿತ್ರ – ವೀಡಿಯೋ ಮುಂತಾದ ಬಹುಮಾಧ್ಯಮ ಮಾಹಿತಿಯನ್ನೂ ಹುಡುಕಿಕೊಡುವ ಸವಲತ್ತು, ನಮ್ಮ ಸುತ್ತಮುತ್ತಲ ಸಂಗತಿಗಳ ಬಗ್ಗೆ  (ಅಂಗಡಿ, ಹೊಟೇಲ್‌ ಇತ್ಯಾದಿ) ಮಾಹಿತಿ ನೀಡುವ ವ್ಯವಸ್ಥೆಗಳೂ ಗಮನಾರ್ಹ ಬೆಳವಣಿಗೆಗಳೇ. ಜಾಲತಾಣಗಳಲ್ಲಿ ಮಾತ್ರವೇ ಹುಡುಕುವ ಬದಲು ಪುಸ್ತಕಗಳಲ್ಲಿ, ಸಂಶೋಧನಾ ಪ್ರಬಂಧಗಳಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿಕೊಳ್ಳುವುದೂ ಸಾಧ್ಯವಾಗಿದೆ.

ಗೂಗಲ್‌ ಮಾಡಿ ನಮ್ಮ ಪ್ರಶ್ನೆಗೆ ಉತ್ತರ ಪಡೆಯಬಹುದು ಎಂದೆನಲ್ಲ, ಆ ಪ್ರಶ್ನೆ ಹಲವು ಬಗೆಯದಾಗಿರುವುದು ಸಾಧ್ಯ. ಕರ್ನಾಟಕದ ರಾಜಧಾನಿ ಯಾವುದು, ಶ್ರವಣಬೆಳಗೊಳದ ಗೊಮ್ಮಟ ವಿಗ್ರಹದ ಎತ್ತರ ಎಷ್ಟು ಎಂದು ಕೇಳಿದಷ್ಟೇ ಸರಾಗವಾಗಿ ನಾವು ಲಂಡನ್ನಿನಲ್ಲಿ ಈಗ ಟೈಮೆಷ್ಟು, 256ರ ವರ್ಗಮೂಲ ಎಷ್ಟು, 20 ಡಾಲರು ಎಷ್ಟು ರೂಪಾಯಿಗೆ ಸಮ ಎಂಬಂತಹ ಪ್ರಶ್ನೆಗಳಿಗೂ ಉತ್ತರ ಪಡೆಯಬಹುದು.
 
ಧ್ವನಿಯ ಮೂಲಕ ಶೋಧಿಸಬಹುದು…
ಪ್ರಶ್ನೆಗಳನ್ನು ಟೈಪ್‌ ಮಾಡುವುದಷ್ಟೇ ಅಲ್ಲ, ಧ್ವನಿ ಗುರುತಿಸುವ (ಸ್ಪೀಚ್‌ ರೆಕಗ್ನಿಶನ್‌) ತಂತ್ರಜ್ಞಾನ ಬಳಸಿಕೊಂಡು ನಮ್ಮ ಬಾಯಿಮಾತಿನ ಪ್ರಶ್ನೆಗಳಿಗೂ ಉತ್ತರ ಪಡೆದುಕೊಳ್ಳಬಹುದು. ಈಚೆಗೆ ಮಾರುಕಟ್ಟೆಗೆ ಬಂದಿರುವ ಗೂಗಲ್‌ ಹೋಮ್‌ ಹಾಗೂ ಅಮೆಜಾನ್‌ ಎಕೋದಂತಹ ಉತ್ಪನ್ನಗಳಂತೂ ಧ್ವನಿರೂಪದ ಪ್ರಶ್ನೆಗಳಿಗೆ ಧ್ವನಿರೂಪದಲ್ಲೇ ಉತ್ತರ ನೀಡುತ್ತವೆ!ಸರ್ಚ್‌ ಫ‌ಲಿತಾಂಶಗಳ ಜೊತೆಯಲ್ಲಿ ಜಾಹೀರಾತುಗಳನ್ನೂ ಪ್ರದರ್ಶಿಸುವ ಮೂಲಕ ಗೂಗಲ್‌ ಹಣ ಸಂಪಾದಿಸುತ್ತದೆ. ಈ ವ್ಯವಹಾರ ವೃದ್ಧಿಯಾದಂತೆ ಗೂಗಲ್‌ ಕಾರ್ಯಾಚರಣೆಯ ವ್ಯಾಪ್ತಿಯೂ ಗಮನಾರ್ಹವಾಗಿ ಬೆಳೆದಿದೆ. ಸರ್ಚ್‌ ಜೊತೆಗೆ ಜಿಮೇಲ್‌, ಯುಟ್ಯೂಬ್‌, ಗೂಗಲ್‌ ಮ್ಯಾಪ್ಸ್‌ ಮುಂತಾದ ಹಲವು ಸೇವೆಗಳನ್ನು ಪ್ರಾರಂಭಿಸಿದ ಈ ಸಂಸ್ಥೆ ಅವೆಲ್ಲವನ್ನೂ ಸರ್ಚ್‌ ಜೊತೆಯಲ್ಲಿಯೇ ಬೆಳೆಸಿದೆ. ಅಷ್ಟೇ ಅಲ್ಲ, ಅಲ್ಲೆಲ್ಲ ಇರುವ ಮಾಹಿತಿಯನ್ನೂ ಸರಾಗವಾಗಿ ಹುಡುಕುವುದನ್ನು ಸಾಧ್ಯವಾಗಿಸಿದೆ. ಮೊಬೈಲ್‌ ಫೋನುಗಳಲ್ಲಿರುವ ಆಂಡ್ರಾಯ್ಡ ಕಾರ್ಯಾಚರಣ ವ್ಯವಸ್ಥೆ ಕೂಡ ಗೂಗಲ್‌ನದೇ ಉತ್ಪನ್ನ.

ತಂತ್ರಾಂಶ ಕ್ಷೇತ್ರದಲ್ಲಿ ಹೆಸರುಮಾಡಿರುವ ಗೂಗಲ್‌ ಸಂಸ್ಥೆ ಯಂತ್ರಾಂಶ ನಿರ್ಮಾಣದಲ್ಲೂ ತೊಡಗಿಕೊಂಡಿದೆ. ಈ ಹಿಂದೆ ನೆಕ್ಸಸ್‌ ಸರಣಿಯ ಸ್ಮಾರ್ಟ್‌ಫೋನ್‌ ಹಾಗೂ ಟ್ಯಾಬ್ಲೆಟ್ಟುಗಳನ್ನು ಪರಿಚಯಿಸಿದ್ದ, ಕೆಲಸಮಯ ಮೋಟರೋಲಾ ಸಂಸ್ಥೆಯ ಒಡೆತನವನ್ನೂ ಹೊಂದಿದ್ದ ಗೂಗಲ್‌ ಸಂಸ್ಥೆ ಸದ್ಯ “ಪಿಕ್ಸೆಲ್‌’ ಸರಣಿಯ ಸ್ಮಾರ್ಟ್‌ಫೋನುಗಳನ್ನು ಹೊರತರುತ್ತಿದೆ. ಗೂಗಲ್‌ ಹೋಮ್‌ನಂತಹ ಸ್ಮಾರ್ಟ್‌ ಸಹಾಯಕರಿಂದ ಪ್ರಾರಂಭಿಸಿ ಚಾಲಕರಹಿತ ಕಾರುಗಳ ನಿರ್ಮಾಣದವರೆಗೆ ಇನ್ನೂ ಅದೆಷ್ಟೋ ಬಗೆಯ ಚಟುವಟಿಕೆಗಳಲ್ಲಿ ಗೂಗಲ್‌ ತನ್ನನ್ನು ತೊಡಗಿಸಿಕೊಂಡಿದೆ. 

ಇವೆಲ್ಲ ಚಟುವಟಿಕೆಗಳಿಂದಾಗಿ ನಮ್ಮ ಬದುಕಿನಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ, ಆಗುತ್ತಿವೆ. ಪರೋಕ್ಷ ಪ್ರಯೋಜನಗಳು ಹಾಗಿರಲಿ, ಗೂಗಲ್‌ ಉತ್ಪನ್ನಗಳ ಸುತ್ತಲೇ ಅನೇಕ ನೇರ ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ (ಉದಾ: ಗೂಗಲ್‌ ಒದಗಿಸುವ ಜಾಹೀರಾತುಗಳನ್ನು ನಮ್ಮ ತಾಣದಲ್ಲಿ ಪ್ರದರ್ಶಿಸುವುದು). ನಮ್ಮ ಆಸಕ್ತಿಯ ವಿಷಯಗಳನ್ನು, ನಿತ್ಯದ ಬದುಕಿನಲ್ಲಿ ಬೇಕಾಗುವ ಮಾಹಿತಿಯನ್ನು ಸುಲಭವಾಗಿ ಹುಡುಕಿಕೊಳ್ಳಲು ಸಾಧ್ಯವಾಗಿಸಿದ ಗೂಗಲ್‌ ನಮ್ಮ ಮಾಹಿತಿಯನ್ನು ನಿರ್ವಹಿಸುತ್ತ ಇನ್ನಷ್ಟು ದೊಡ್ಡದಾಗಿ ಬೆಳೆಯುತ್ತಿದೆ. ಮಾಹಿತಿಯೇ ವ್ಯಾಪಾರದ ವಸ್ತು ಎನ್ನುವುದು ಗೊತ್ತಿದ್ದರೂ ಇಲ್ಲಿ ಉತ್ಪಾದಕ ಯಾರು, ಗ್ರಾಹಕ ಯಾರು, ಒಟ್ಟಾರೆ ಲಾಭ ಯಾರಿಗೆ ಎನ್ನುವುದು ಮಾತ್ರ ಅಸ್ಪಷ್ಟವಾಗಿಯೇ ಇದೆ. ಜಾಲಲೋಕದ ಮಬ್ಬಿನಲ್ಲಿ ಕೈಹಿಡಿದು ನಡೆಸಲು ಸರ್ಚ್‌ ಇಂಜಿನ್‌ಅನ್ನು  ಮಾತ್ರ ನಾವು ಕರೆಯುತ್ತಲೇ ಇದ್ದೇವೆ ! 

– ಟಿ. ಜಿ. ಶ್ರೀನಿಧಿ

Advertisement

Udayavani is now on Telegram. Click here to join our channel and stay updated with the latest news.

Next