ಉಡುಪಿ: ಗೂಗಲ್ ಮ್ಯಾಪ್ ಎಡವಟ್ಟಿನಿಂದಾಗಿ ನಗರದ ಕಾಡುಬೆಟ್ಟಿನ ಪ್ರದೇಶದಲ್ಲಿ ಶ್ರೀ ಕೃಷ್ಣಮಠ ಹುಡುಕಿಕೊಂಡು ಬರುತ್ತಿದ್ದಾರೆ ಯಾತ್ರಾರ್ಥಿಗಳು!
ಕಳೆದ ಹಲವಾರು ದಿನಗಳಿಂದ ಬೆಂಗಳೂರು, ಹೈದರಾಬಾದ್, ತಮಿಳುನಾಡು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಿಂದ ಉಡುಪಿಗೆ ಆಗಮಿಸುವ ಪ್ರವಾಸಿಗರು, ಕೃಷ್ಣಮಠಕ್ಕೆ ತೆರಳಲು ಗೂಗಲ್ ಮ್ಯಾಪ್ ಮೂಲಕ ಸಾಗಿದರೆ ಅದು ತಲುಪುವುದು ಕಾಡುಬೆಟ್ಟಿನ ಪುಳಿಮಾರ್‌ಸಂಕ್‌ನ ರಸ್ತೆಗೆ. ಈ ಪ್ರದೇಶ ಗೂಗಲ್ ಮ್ಯಾಪ್‌ನಲ್ಲಿ ಕೃಷ್ಣಮಠದ ಡೆಸ್ಟಿನೇಶನ್ ತೋರಿಸುತ್ತಿರುವುದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ.
ಗೂಗಲ್ ನ್ಯಾವಿಗೇಶನ್ ಸಲಹೆ ಮೂಲಕ ಬರುವ ಸಾಕಷ್ಟು ಮಂದಿ ಯಾತ್ರಿಕರು ಇದರಿಂದ ಪೇಚಿಗೆ ಸಿಲುಕುತ್ತಿದ್ದು, ಸ್ಥಳೀಯರು ಕಿರಿಕಿರಿ ಅನುಭವಿಸುಂತಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು, ಪ್ರತಿದಿನ ಇಲ್ಲಿ ಬರುವವರಿಗೆ ಕೃಷ್ಣಮಠದ ವಿಳಾಸ ಹೇಳಿ ಕಳುಹಿಸುತ್ತೇವೆ ಎನ್ನುತ್ತಾರೆ.
ಇದರಿಂದ ರೋಸಿ ಹೋಗಿಸುವ ಸ್ಥಳೀಯರ ಸಂಕಷ್ಟವನ್ನು ಅರಿತು, ಶ್ರೀಕೃಷ್ಣ ಮಠಕ್ಕೆ ಬರುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಾರ್ಡ್ ಸದಸ್ಯರಾದ ಟಿ. ಜಿ. ಹೆಗ್ಡೆ ಅವರು ಬ್ಯಾನರ್ ಅಳವಡಿಸಿದ್ದಾರೆ. ಮಹೇಶ್ ಶೆಟ್ಟಿ ಅವರು ಇದರ ಶೀರ್ಷಿಕೆಯನ್ನು “ಸ್ಟಾಪ್’ ಕೃಷ್ಣಮಠಕ್ಕೆ ಬರುವ ಭಕ್ತಾಭಿಮಾನಿಗಳಲ್ಲಿ ವಿನಂತಿ. ಗೂಗಲ್ ನ್ಯಾವಿಗೇಶನ್ ತಾಂತ್ರಿಕ ದೋಷದಿಂದಾಗಿ ಹಲವಾರು ಯಾತ್ರಿಕರು ಈ ದಾರಿಗೆ ಬಂದು ಸಿಕ್ಕಿಹಾಕಿಕೊಂಡಿದ್ದಾರೆ. ಯಾತ್ರಿಕರು ಗೂಗಲ್‌ನಲ್ಲಿ “ಕಲ್ಸಂಕ ರಾಜಾಂಗಣ ರೋಡ್’ ಎಂದು ನಮೂದಿಸಿ ಮುಂದುವರೆಯಿರಿ ಎಂದು ಬರೆದಿದ್ದಾರೆ.