ಇಂಡಿ: ಗೋವು ಸಾಗಿಸುತ್ತಿದ್ದ ಗೂಡ್ಸ್ ವಾಹನ 407 ಮತ್ತು ಇನೋವಾ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿ ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ನಂದ್ರಾಳ ಕ್ರಾಸ್ ಬಳಿ ರವಿವಾರ ನಡೆದಿದೆ. ಘಟನೆಯಲ್ಲಿ ಕಾರ್‌ನಲ್ಲಿದ್ದ ಬಂಥನಾಳ ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ. ಗೂಡ್ಸ್ ವಾಹನದಲ್ಲಿ ಸೊಲ್ಲಾಪುರಕ್ಕೆ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಗೋವುಗಳನ್ನು ಸಾಗಿಸುತ್ತಿದ್ದ ವಾಹನಗಳನ್ನು ನಂದ್ರಾಳ ಭತಗುಣಕಿ ಗ್ರಾಮಸ್ಥರು ವಶಕ್ಕೆ ಪಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಗೋವುಗಳನ್ನು ತುಂಬಿಕೊಂಡಿದ್ದ ಗೂಡ್ಸ್ ವಾಹನ ಅತಿ ವೇಗವಾಗಿ ಬರುತ್ತಿತ್ತು. ಮುಂದೆ ವಾಹನ ಇದೆ ಎಂದು ಗೊತ್ತಿದ್ದರೂ ಗೂಡ್ಸ್ ವಾಹನ ಚಾಲಕ ತನ್ನ ವಾಹನದ ವೇಗ ಕಡಿಮೆ ಮಾಡದೆ ಹಾಗೇ ಬಂದು ನಮ್ಮ ಕಾರ್‌ಗೆ ಡಿಕ್ಕಿ ಹೊಡೆದ ಸ್ಥಳದಲ್ಲೇ ಎರಡು ಹಸುಗಳು ಸತ್ತಿವೆ. ಕಾರ್‌ನಲ್ಲಿ ಏರ್ ಬ್ಯಾಗ್ ಇದ್ದ ಕಾರಣ ನನಗೆ ಯಾವುದೇ ಅಪಾಯವಾಗಲಿಲ್ಲ. ನನಗೆ ಯಾವುದೇ ಗಾಯಗಳಾಗಿಲ್ಲ ಆರೋಗ್ಯವಾಗಿದ್ದೇನೆ.
ವೃಷಭಲಿಂಗ ಸ್ವಾಮೀಜಿ, ಬಂಥನಾಳ
ಅಕ್ರಮ ಗೋವು ಸಾಗಾಟ ಧಂದೆ ಎಗ್ಗಿಲ್ಲದೆ ನಡೆಯುತ್ತಿದೆ. ತಾಲೂಕಿನ ನಂದ್ರಾಳ ಗ್ರಾಮದ ಹತ್ತಿರ ಅಡವಿಯಲ್ಲಿ ದೊಡ್ಡ ಪ್ರಮಾಣದ ಕಸಾಯಿ ಖಾನೆ ಇದೆ. ಹೊರ್ತಿ, ಇಂಡಿ ತಾಲೂಕಿನ ಅನೇಕ ಕಡೆ ಅಕ್ರಮ ಕಸಾಯಿಖಾನೆಗಳಿವೆ. ಇಂಡಿ ತಾಲೂಕಿನಿಂದ ಮಹಾರಾಷ್ಟ್ರಕ್ಕೆ ಮಾಂಸ ಸಾಗಾಟ, ಗೋವು ಸಾಗಾಟ ಮಾಡಲಾಗುತ್ತಿದೆ. ಪೊಲೀಸರಿಗೆ ಹಲವಾರು ಬಾರಿ ತಿಳಿಸಿದರೂ ಕಸಾಯಿಖಾನೆಯವರ ಮೇಲೆ ಕ್ರಮ ಕೈಗೊಂಡಿಲ್ಲ.
ಅನಿಲ ಜಮಾದಾರ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ