Advertisement

ಸರಕು ಸಾಗಾಟ ದರ ಕಡಿತ ಹಿಂಪಡೆಯದಿದ್ದರೆ ಸಾಗಾಟ ಬಂದ್‌: ಅಸೋಸಿಯೇಶನ್‌ ಎಚ್ಚರಿಕೆ

10:42 AM Sep 06, 2022 | Team Udayavani |

ಪಣಂಬೂರು : ಟ್ರಕ್‌ ಮಾಲಕರ ಗಮನಕ್ಕೆ ತಾರದೆ ಏಕಪಕ್ಷೀಯವಾಗಿ ಬಂದರಿನಿಂದ ಸಾಗಾಟವಾಗುವ ಸರಕುಗಳ ದರವನ್ನು ಕಡಿತ ಗೊಳಿಸಿದ್ದು, ಮಾಲಕರಿಗೆ ಭಾರೀ ಹೊಡೆತ ನೀಡಿದೆ. ಹತ್ತು ದಿನಗಳ ಒಳಗಾಗಿ ಸಾಗಾಟಕ್ಕೆ ಸೂಕ್ತ ದರ ನೀಡುವ ಸಲುವಾಗಿ ತತ್‌ಕ್ಷಣ ಜಂಟಿ ಮಾತುಕತೆಗೆ ಜಿಲ್ಲಾಡಳಿತ ಮುಂದಾಗದಿದ್ದರೆ ದ.ಕ. ಟ್ರಕ್‌ ಮಾಲಕರ ಅಸೋಸಿಯೇಶನ್‌ ಸಾಗಾಟ ಸ್ಥಗಿತಗೊಳಿಸಿ ಬಂದ್‌ ನಡೆಸಲು ಮುಂದಾಗಲಿದೆ ಎಂದು ಅಸೋಸಿಯೇಶನ್‌ ಸಲಹೆಗಾರ ಬಿ.ಎಸ್‌. ಚಂದ್ರು ಎಚ್ಚರಿಕೆ ನೀಡಿದ್ದಾರೆ.

Advertisement

ಅಸೋಸಿಯೇಶನ್‌ ವತಿಯಿಂದ ಸೋಮವಾರ ಪಣಂಬೂರು ಬಂದರಿನಲ್ಲಿ ಜೆಎಸ್‌ಡಬ್ಲ್ಯು ಹಾಗೂ ಟ್ರಾನ್ಸ್ ಪೋರ್ಟ್ ಮತ್ತು ಏಜೆಂಟರ ಸಂಘಕ್ಕೆ ಮನವಿ ಅರ್ಪಿಸಲಾಯಿತು.

ಈಗಾಗಲೇ ಸರಕಾರ, ಜಿಲ್ಲಾಡಳಿತ, ನವಮಂಗಳೂರು ಬಂದರು ಟ್ರಾನ್ಸ್ ಪೋರ್ಟ್ ಮತ್ತು ಏಜಂಟರ ಗಮನಕ್ಕೆ ತಂದು ಒಮ್ಮತದ ದರ ನಿಗದಿಗೆ ಅಭಿಪ್ರಾಯಕ್ಕೆ ಬರಲಾಗಿತ್ತು. ಆದರೆ ಇತ್ತೀಚೆಗೆ ಏಕಪಕ್ಷೀಯವಾಗಿ ದರ ಕಡಿತ ನಿರ್ಧಾರ ಕೈಗೊಂಡು ಟ್ರಕ್‌ ಮಾಲಕರ ಹಿತವನ್ನು ಅವಗಣಿಸಲಾಗಿದೆ. ಕನಿಷ್ಠ ದರ ನಿಗದಿ ಅವೈಜ್ಞಾನಿಕವಾಗಿದ್ದು ಟ್ರಕ್‌ ಮಾಲಕರು ಈ ದರ ನಿಗದಿಯಿಂದಾಗಿ ಪ್ರತೀ ಸಾಗಾಟಕ್ಕೆ ಕನಿಷ್ಠ ಒಂಬತ್ತು ಸಾವಿರ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ದ.ಕ. ಟ್ರಕ್‌ ಅಸೋಸಿಯೇಶನ್‌ ಅಧ್ಯಕ್ಷ ಸುನಿಲ್‌ ಡಿ’ಸೋಜಾ ಮಾತ ನಾಡಿ, ಭಾರೀ ಮಳೆ, ರಸ್ತೆ ಕುಸಿತ, ಸಾಗಾಟದ ಮಾರ್ಗ ಬದಲಾವಣೆ ಮತ್ತು ಡೀಸೆಲ್‌ ದರ ಏರಿಕೆ ಮತ್ತು ಬಿಡಿಭಾಗಗಳ ದರ ಹೆಚ್ಚಳ ಗಮನಿಸಿ ದರ ನಿಗದಿ ಪಡಿಸಬೇಕು. ಇದೀಗ ದರ ನಿಗದಿ ಮಾಡಿರುವುದು ಅವೈಜ್ಞಾನಿಕವಾ ಗಿದೆ ಎಂದರಲ್ಲದೇ ತತ್‌ಕ್ಷಣ ಈ ಬಗ್ಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಒತ್ತಾಯಿಸಿದರು. ನಮ್ಮ ಹೋರಾಟಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳ ಟ್ರಕ್‌ ಮಾಲಕರ ಸಂಘ, ಕರುನಾಡ ಸಾರಥಿಗಳ ಸೈನ್ಯ ಟ್ರೇಡ್‌ ಯೂನಿಯನ್‌ ಬೆಂಬಲ ಸೂಚಿಸಿದ್ದರಿಂದ ನಮ್ಮ ಹೋರಾಟಕ್ಕೆ ಬಲ ಬಂದಿದೆ ಎಂದರು.

ಟ್ರಾನ್ಸ್ ಪೋರ್ಟ್ ಸಂಘದ ಅಧ್ಯಕ್ಷ ರಾಜೇಶ್‌ ಹೊಸಬೆಟ್ಟು, ಜೆಎಸ್‌ಡಬ್ಲ್ಯು ಅಧಿಕಾರಿ ಅರವಿಂದ ಚತುರ್ವೇದಿ ಮನವಿ ಸ್ವೀಕರಿಸಿದರು. ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಸುಶಾಂತ್‌ ಶೆಟ್ಟಿ, ಕಾನೂನು ಸಲಹೆಗಾರ ಸತ್ಯ ಕುಮಾರ್‌, ಕರುನಾಡ ಸಾರಥಿಗಳ ಸೈನ್ಯ ಟ್ರೇಡ್‌ ಯೂನಿಯನ್‌ನ ಗೌರವಾಧ್ಯಕ್ಷ ಮೊಯಿದೀನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲಂದರ್‌, ಪ್ರಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಇದನ್ನೂ ಓದಿ : ನವಲಗುಂದ : ಕುಸಿದು ಬಿದ್ದ ಸೇತುವೆ, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ

Advertisement

Udayavani is now on Telegram. Click here to join our channel and stay updated with the latest news.

Next