ಭುವನೇಶ್ವರ್: ಸರಕು ಸಾಗಣೆ ರೈಲೊಂದು ಹಳಿ ತಪ್ಪಿದ ಪರಿಣಾಮ ಒಂಬತ್ತು ಬೋಗಿಗಳು ನದಿಗೆ ಬಿದ್ದಿರುವ ಘಟನೆ ಒಡಿಶಾದ ಆ್ಯಂಗುಲ್-ಟಾಲ್ಚೆರ್ ರೈಲ್ವೆ ಮಾರ್ಗದಲ್ಲಿ ಮಂಗಳವಾರ(ಸೆಪ್ಟೆಂಬರ್ 14) ಮುಂಜಾನೆ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:‘ಡಾಗ್ ಆಫ್ ದಿ ಮಂತ್’: ಫೀಲ್ಡಿಂಗ್ ಮಾಡಿದ ನಾಯಿಗೆ ವಿಶೇಷ ಪುರಸ್ಕಾರ ನೀಡಿದ ಐಸಿಸಿ
ಗೋಧಿ ಚೀಲ ತುಂಬಿದ್ದ ಸರಕು ಸಾಗಣೆ ರೈಲು ಮುಂಜಾನೆ 2.30ರ ಹೊತ್ತಿಗೆ ಹಳಿ ತಪ್ಪಿದ್ದು, ಒಂಬತ್ತು ಬೋಗಿಗಳು ನದಿಗೆ ಬಿದ್ದಿದ್ದು, ಘಟನೆಯಲ್ಲಿ ರೈಲಿನ ಚಾಲಕ, ಇತರ ಸಿಬಂದಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣದಿಂದ ಫಿರೋಜ್ ಪುರ್ ನಿಂದ ಖುದ್ರಾಗೆ ತೆರಳುತ್ತಿದ್ದ ಸರಕು ಸಾಗಣೆ ರೈಲು ನಂದಿರಾ ಸೇತುವೆ ಬಳಿ ಹಳಿ ತಪ್ಪಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಟಾಲ್ಚೆರ್ ಪ್ರದೇಶದಲ್ಲಿ ದಾಖಲೆಯ 394 ಮಿಲಿ ಮೀಟರ್ ಮಳೆಯಾಗಿತ್ತು. ರೈಲು ಹಳಿತಪ್ಪಿದ ಘಟನೆ ನಡೆದ ನಂತರ ಈ ಮಾರ್ಗದಲ್ಲಿ ಸಂಚರಿಸುವ 12 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.