Advertisement

ಗುಡ್‌ ಬೈ ಗೂಗಲ್‌ ಪ್ಲಸ್‌!

12:30 AM Feb 12, 2019 | |

ಆರ್ಕುಟ್‌ಗೆ ಬಾಗಿಲು ಹಾಕಿದ ಮೇಲೆ ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲೆಂದೇ “ಗೂಗಲ್‌ ಪ್ಲಸ್‌’ ಹುಟ್ಟಿಕೊಂಡಿತು. ಆದರೆ, ಈಗ ಗೂಗಲ್‌ ಅದಕ್ಕೂ ಮಂಗಳಹಾಡುತ್ತಿದೆ. ನಿಮ್ಮ ಲಾರ್ಜ್‌ ಫೈಲ್‌ಗ‌ಳೇನಾದರೂ ಗೂಗಲ್‌ ಪ್ಲಸ್‌ನಲ್ಲಿದ್ದರೆ, ಈಗಲೇ ತೆಗೆದುಕೊಳ್ಳಿ…

Advertisement

2006ರ ಹೊತ್ತಿಗೆ ಆರ್ಕುಟ್‌ ಸಾಮಾಜಿಕ ಜಾಲತಾಣವೇ ನಂ.1. ಆದರೆ, ಫೇಸ್‌ಬುಕ್‌ ಬಂದಿದ್ದೇ ಬಂದಿದ್ದು. ಜಗತ್ತಿನಾದ್ಯಂತ ಇಂಟರ್‌ನೆಟ್‌ ಬಳಕೆದಾರರು ಆರ್ಕುಟ್‌ನಿಂದ ಪಕ್ಷ ಬದಲಾಯಿಸಿದರು. ಹದಿಹರೆಯದ ಯುವಕನಂತಿದ್ದ ಫೇಸ್‌ಬುಕ್‌ ಮುಂದೆ ಆರ್ಕುಟ್‌ ನೂರರ ಮುದುಕನಂತೆ ಕಂಡಿತ್ತು. ಪರಿಣಾಮ ಯಜಮಾನ ಸಂಸ್ಥೆ ಗೂಗಲ್‌, ಆರ್ಕುಟ್‌ ಅನ್ನು ಮುಚ್ಚಬೇಕಾಯಿತು. ಗೂಗಲ್‌ ಅಷ್ಟಕ್ಕೇ ಸುಮ್ಮನಾಗಿರಲಿಲ್ಲ. ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲೆಂದೇ “ಗೂಗಲ್‌ ಪ್ಲಸ್‌’ ಸಾಮಾಜಿಕ ತಾಣವನ್ನು ಹುಟ್ಟುಹಾಕಿತು. ಶುರುವಿನಲ್ಲಿ ಗೂಗಲ್‌ ಪ್ಲಸ್‌ ಫೇಸ್‌ಬುಕ್‌ ಅನ್ನು ಮೀರಿಸುತ್ತದೆಯೆಂಬ ಪಂಡಿತರ ಲೆಕ್ಕಾಚಾರಗಳೆಲ್ಲವೂ ಉಲ್ಟಾ ಆಯಿತು. ಫೇಸ್‌ಬುಕ್‌ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು ಮಾತ್ರವಲ್ಲ, ಹೆಚ್ಚು ಜನಪ್ರಿಯತೆ ಗಳಿಸುತ್ತಲೇ ಸಾಗಿತು. ಪರಿಣಾಮ ಇತ್ತೀಚಿಗಷ್ಟೆ ಗೂಗಲ್‌ ಪ್ಲಸ್‌ ತನ್ನ ಬಳಕೆದಾರರಿಗೆ ಇಮೇಲ್‌ ಕಳಿಸಿತು. “ಗೂಗಲ್‌ ಪ್ಲಸ್‌ ಮುಚ್ಚುತ್ತಿದೆ. ಕಮ್ಮಿಯಾಗುತ್ತಿರುವ ಬಳಕೆ ಮತ್ತು ಗೂಗಲ್‌ ಪ್ಲಸ್‌ನ ನಿರ್ವಹಣೆಗೆ ಆಗುತ್ತಿರೋ ಹೊರೆಯ ಕಾರಣದಿಂದಾಗಿ ಇಂಥ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ’ ಎಂದು ಅದರಲ್ಲಿ ಬರೆದಿತ್ತು. ಗೂಗಲ್‌ ಕಳಿಸಿರುವ ಮಿಂಚಂಚೆಯ ಪ್ರಕಾರ ಏಪ್ರಿಲ್‌ 2, 2019ರಂದು ಗೂಗಲ್‌ ಪ್ಲಸ್‌ ಬಾಗಿಲು ಮುಚ್ಚಲಿದೆ! 

ಯಾಕೆ ಮುನ್ಸೂಚನೆ?
ಲಕ್ಷಾಂತರ ಜನರು ಬಳಸಲ್ಪಡುವ ಯಾವುದೋ ಒಂದು ಸೇವೆಯನ್ನು ಏಕದಂ ಬಂದ್‌ ಮಾಡಲಾಗೋದಿಲ್ಲ. ಜನರು ಬಳಸುತ್ತಿರುವ ಯಾವುದೇ ಸೇವೆಯನ್ನು ನಿಲ್ಲಿಸುವುದಕ್ಕೆ ಮುಂಚಿತವಾಗಿ ಮಾಹಿತಿಯನ್ನು ನೀಡಲಾಗುತ್ತದೆ. ಅದಕ್ಕೇ ಗೂಗಲ್‌ಪ್ಲಸ್‌ ತನ್ನ ಬಳಕೆದಾರರಿಗೆ ಇಮೇಲ್‌ ಕಳಿಸಿದ್ದು. ಸಂಸ್ಥೆ ಹೇಳಿರುವ ಹಾಗೆ ಫೆ.4ರ ನಂತರ ಗೂಗಲ್‌ ಪ್ಲಸ್ಸಿನಲ್ಲಿ ಯಾವುದೇ ಹೊಸ ಪೇಜನ್ನೋ, ಪ್ರೊಫೈಲನ್ನೋ ಸೃಷ್ಟಿಸಲು ಆಗುವುದಿಲ್ಲ. ಬಳಕೆದಾರರು ಗೂಗಲ್‌ ಪ್ಲಸ್‌ನಲ್ಲಿ ಶೇರ್‌ ಮಾಡಿರುವ ಫೋಟೋ ಮತ್ತಿತರ ಮಾಹಿತಿಯನ್ನು ಬೇರೆಡೆ ಸೇವ್‌ ಮಾಡಿಟ್ಟುಕೊಳ್ಳಬಹುದಷ್ಟೇ. 

ಬಾಗಿಲು ಹಾಕಿದ್ರೆ..? 
1. ಫೋಟೋ
ಏ.2ರಂದು ಗೂಗಲ್‌ ಪ್ಲಸ್‌ ಸೇವೆ ಪೂರ್ತಿ ಮುಚ್ಚಿದರೆ, ಅದರಲ್ಲಿ ಶೇರ್‌ ಮಾಡಿದ ಫೋಟೋಗಳೂ ಅದರೊಂದಿಗೆ ಅಳಿಸಿಹೋಗುತ್ತವೆ. ಆದರೆ, ಜಿ- ಮೇಲ್‌ ಅಥವಾ ಗೂಗಲ್‌ ಡ್ರೈವ್‌ ಸೇರಿದಂತೆ ಮತ್ತಿತರ ಗೂಗಲ್‌ ಸೇವೆಗಳಲ್ಲಿ ಸೇವ್‌ ಆದ ಫೋಟೋಗಳು ಡಿಲೀಟ್‌ ಆಗುವುದಿಲ್ಲ. 

2. ಗ್ರೂಪುಗಳು
ಇಲ್ಲಿರೋ ಗ್ರೂಪುಗಳೂ ಅಳಿಸಲ್ಪಡುತ್ತವೆ. ಆದರೆ, ಗ್ರೂಪಿನಲ್ಲಿ ಮುಖ್ಯವಾದ ಇಮೇಲ್‌ ಐಡಿಗಳೆಲ್ಲಾ ಇದ್ದವು. ಅವನ್ನೆಲ್ಲಾ ತಗೊಳ್ಳೋದು ಹೇಗಪ್ಪಾ ಅಂತ ತಲೆಕೊಡಿಸಿಕೊಂಡಿದ್ದೀರಾ? ಗೂಗಲ್‌ ಹೇಳುವಂತೆ ಅದಕ್ಕೂ ಬದಲಿ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಮಾರ್ಚ್‌ ಮೊದಲ ವಾರದಿಂದ ಇವು ಲಭಿಸಲಿವೆ. 

Advertisement

3. ಬ್ಲಾಗ್‌ 
ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಂತರ್ಜಾಲದ ಬ್ಲಾಗರ್‌ಗಳು ಬಳಸೋದು ಗೂಗಲ್ಲಿನ ಬ್ಲಾಗರ್‌ ಮತ್ತು ವರ್ಡ್‌ಪ್ರಸ್‌ನಲ್ಲಿ. ಯಾವುದೇ ಬ್ಲಾಗ್‌ ಇರಲಿ, ಯಾವುದೇ ಜಾಲತಾಣವಿರಲಿ ಅಲ್ಲಿನ ಕಮೆಂಟ್‌ ಬಾಕ್ಸ್‌ನತ್ತ ಒಮ್ಮ ಕಣ್ಣು ಹಾಯಿಸಿದರೆ ಪ್ರತೀ ಪೋಸ್ಟಿನ ಕೆಳಗೆ ಕಮೆಂಟ್‌/ ಪ್ರತಿಕ್ರಿಯೆ ಎಂಬ ಆಯ್ಕೆ ಇರೋದನ್ನು ನೋಡಿರುತ್ತೀರಿ. ಫೇಸ್‌ಬುಕ್‌ಗೆ ಲಾಗಿನ್‌ ಅಥವಾ ಗೂಗಲ್‌ ಪ್ಲಸ್‌ ಲಾಗಿನ್‌ ಮೂಲಕ ಅಲ್ಲಿ ಕಾಮೆಂಟ್‌ ಹಾಕುವ ಸೌಲಭ್ಯವಿರುತ್ತದೆ. ಗೂಗಲ್‌ ಪ್ಲಸ್‌ ನಿಂತು ಹೋದರೆ, ಗೂಗಲ್‌ ಪ್ಲಸ್‌ ಖಾತೆಯಿಂದ ಪೋಸ್ಟ್‌ ಮಾಡಿದ ಕಮೆಂಟುಗಳೂ ಮಾಯ.

– ಪ್ರಶಸ್ತಿ ಪಿ. ಸಾಗರ

Advertisement

Udayavani is now on Telegram. Click here to join our channel and stay updated with the latest news.

Next