Advertisement

ದಿಶಾ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ

10:52 AM Feb 18, 2018 | Team Udayavani |

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಮಂಗಳಗಂಗೋತ್ರಿ ಕ್ಯಾಂಪಸ್‌ ನಲ್ಲಿ ಶನಿವಾರ ನಡೆದ ಉದ್ಯೋಗ ಮೇಳ ‘ದಿಶಾ’ಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬೆಳಗ್ಗಿನಿಂದಲೇ ಜನಸಾಗರ ಹರಿದು ಬಂದಿತ್ತು. 130 ಕಂಪೆನಿಗಳ 9,500 ಹುದ್ದೆ ಗೆ ಸುಮಾರು 6,592ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

Advertisement

ದ.ಕ. ಜಿಲ್ಲಾಡಳಿತ, ಉದ್ಯೋಗ ಮತ್ತು ತರಬೇತಿ ಇಲಾಖೆ, ಸಿಇಒಎಲ್‌ ಮತ್ತು ಆಳ್ವಾಸ್‌ ಶಿಕ್ಷಣ ಸಂಸ್ಥೆ, ಮಂಗಳೂರು ವಿವಿ ಇದರ ಸಹಭಾಗಿತ್ವದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಎಸೆಸೆಲ್ಸಿ , ಪಿಯುಸಿ, ಪದವಿ, ಸ್ನಾತಕೋತ್ತರ, ನರ್ಸಿಂಗ್‌, ಐಟಿಐ, ಹೊಟೇಲ್‌, ಮ್ಯಾನೆಂಜ್‌ಮೆಂಟ್‌ ಮತ್ತು ಡಿಪ್ಲೊಮ ಕೋರ್ಸ್‌ ಪೂರ್ಣಗೊಳಿಸಿದ ಉದ್ಯೋಗಾಕಾಂಕ್ಷಿಗಳು ಮತ್ತು ಪದವಿ, ಸ್ನಾತಕೋತ್ತರ ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿವಿಧೆಡೆಯಿಂದ ಆಕಾಂಕ್ಷಿಗಳು
ಉದ್ಯೋಗ ಮೇಳದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯ ಆಕಾಂಕ್ಷಿಗಳು ಹೆಚ್ಚಿದ್ದರೆ, ಕೊಡಗು, ಚಿತ್ರದುರ್ಗ, ಗುಲ್ಬರ್ಗ ಸೇರಿದಂತೆ ಬೇರೆ ಜಿಲ್ಲೆಯವರು, ಜಿಲ್ಲೆಯಲ್ಲಿ ಕಲಿಯುತ್ತಿರುವ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಖಾಸಗಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳು.

ಮಾಹಿತಿ ಕಟೌಟ್‌
ಉದ್ಯೋಗ ಮೇಳಕ್ಕಾಗಿ ಕ್ಯಾಂಪಸ್‌ನ ಮಾನವಿಕ ವಿಭಾಗ, ವಿಜ್ಞಾನ ಸಂಕೀರ್ಣ ಮತ್ತು ಮ್ಯಾನೇಜ್‌ ಮೆಂಟ್‌ ಬ್ಲಾಕ್‌ ಸಂಪರ್ಕಿಸುವ ಲೈಬ್ರೇರಿ ಪಕ್ಕ ಬೃಹತ್‌ ಮಾಹಿತಿಯ ಕಟೌಟ್‌ ಹಾಕಲಾಗಿತ್ತು. ಲೈಬ್ರೇರಿ ಎದುರು ಭಾಗದಲ್ಲಿ ಕಂಪೆನಿಗಳು ಮತ್ತು ಉದ್ಯೋಗಗಳ ಮಾಹಿತಿ ನೀಡುವ ಕೌಂಟರ್‌ ನಿರ್ಮಿಸಲಾಗಿತ್ತು.

ಮೈಕ್‌ ಮೂಲಕ ಬಂದಿದ್ದ ಆಕಾಂಕ್ಷಿಗಳಿಗೆ ಕಂಪೆನಿ ಮತ್ತು ಅದರಲ್ಲಿರುವ ಉದ್ಯೋಗಗಳ ಮಾಹಿತಿಯನ್ನು ಪ್ರತೀ ಐದು ನಿಮಿಷಕ್ಕೊಂದು ಬಾರಿಯಂತೆ ನೀಡಲಾಗುತ್ತಿತ್ತು. ಆಕಾಂಕ್ಷಿಗಳ ನೋಂದಣಿಗೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ 3 ಬ್ಲಾಕ್‌ಗಳಲ್ಲಿ 169 ಕೊಠಡಿಗಳನ್ನು,91 ಕಂಪ್ಯೂಟರ್‌ ವ್ಯವಸ್ಥೆ ಮಾಡಲಾಗಿತ್ತು.

Advertisement

ಸ್ವಯಂ ಸೇವಕರಾಗಿ ವಿದ್ಯಾರ್ಥಿಗಳು
ಮಂಗಳೂರು ವಿವಿ ಮಾನವಿಕ ವಿಭಾಗದ ಬಳಿ ಬೆಳಗ್ಗಿನಿಂದಲೇ ನೋಂದಣಿ ಕೌಂಟರ್‌ ಮೂಲಕ ಆಳ್ವಾಸ್‌ ಸೇರಿದಂತೆ ವಿವಿ ವಿದ್ಯಾರ್ಥಿಗಳು, ಎನ್‌ ಎಸ್‌ಎಸ್‌, ಎನ್‌ಸಿಸಿ ವಿದ್ಯಾರ್ಥಿಗಳು ನೋಂದಣಿ ಸೇರಿದಂತೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದರೊಂದಿಗೆ ಆಳ್ವಾಸ್‌ ಕಾಲೇಜಿನ, ಮಂಗಳೂರು ವಿಶ್ವವಿದ್ಯಾನಿಲಯದ ಸಿಬಂದಿ ಭಾಗವಹಿಸಿದ್ದರು.

ಪ್ರಸಿದ್ಧ ಕಂಪೆನಿಗಳತ್ತ ಒಲವು
ಉದ್ಯೋಗಾಂಕ್ಷಿಗಳು ಹೆಚ್ಚಾಗಿ ಬಹುರಾಷ್ಟ್ರೀಯ ಕಂಪೆನಿಗಳು, ಪ್ರಸಿದ್ಧ ಕಂಪೆನಿಗಳತ್ತ ತಮ್ಮ ಒಲವನ್ನು ವ್ಯಕ್ತಪಡಿಸಿದರು.
ಕೆಲವು ಕಂಪೆನಿಗಳ ಕೌಂಟರ್‌ ಎದುರು ಆಕಾಂಕ್ಷಿಗಳು ಸರತಿ ಸಾಲಿನಲ್ಲಿ ನಿಂತು ಕಾಯುವುದು ಕಂಡು ಬಂತು.

ಕೆಲವು ಕಂಪೆನಿಗಳು ಉದ್ಯೋಗ ಮೇಳದಲ್ಲೇ ಇಂಟರ್‌ವ್ಯೂ ಸೇರಿದಂತೆ, ಲಿಖಿತ ಪರೀಕ್ಷೆಗಳನ್ನು ನಡೆಸಿದರು. ಉದ್ಯೋಗ ಮೇಳದಲ್ಲಿ ಎನ್‌ಎಂಸಿ ನ್ಯೂ ಮೆಡಿಕಲ್‌ ಸೆಂಟರ್‌ ಅಬುದಾಬಿ, ಇನ್ಫೋಸಿಸ್‌ ಬಿಪಿಒ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಪೇಟಿಎಂ, ಏರ್‌ ಟೆಲ್‌ ಎಸ್‌.ಬ್ಯಾಂಕ್‌, ಬಿ.ಆರ್‌.ಲೈಫ್‌, ಹಿಂದೂಜಾ ಗ್ಲೋಬಲ್‌ ಸೊಲ್ಯೂಷನ್‌, ರಿಲಾಯನ್ಸ್‌ ಕ್ಯಾಪಿಟಲ್‌, ಡಿಎಕ್ಸ್‌ಸಿ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳು ಮೇಳದಲ್ಲಿ ಭಾಗವಹಿಸಿದ್ದವು.

ಗ್ರಾಮೀಣ ಪ್ರದೇಶದವರಿಗೆ ಸಹಕಾರಿ
ನಾನು ಪದವಿ ಶಿಕ್ಷಣ ಅಂತಿಮ ವರ್ಷದಲ್ಲಿದ್ದು, ಇಲ್ಲಿ 2 ಕಂಪೆನಿಗಳ ಇಂಟರ್‌ವ್ಯೂಗೆ ಹಾಜರಾಗಿದ್ದೇನೆ. ಇಂತಹ ಉದ್ಯೋಗ ಮೇಳ ನಮ್ಮಂತಹ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಮತ್ತು ನಿರುದ್ಯೋಗಿಗಳಿಗೆ ಸಹಕಾರಿಯಾಗುತ್ತದೆ.
ಭವ್ಯಾ ಧರ್ಮಸ್ಥಳ,
  ವಿದ್ಯಾರ್ಥಿನಿ, ವಾಮದಪದವು ಸ.ಪ್ರ.ದ. ಕಾಲೇಜು

ಉದ್ಯೋಗ ಸಿಗುವ ಭರವಸೆ
ಎಂಬಿಎ ಮುಗಿಸಿ ಎರಡು ವರ್ಷವಾಗಿದೆ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದೇನೆ. ಉದ್ಯೋಗ ಮೇಳ ನಮ್ಮಂತಹ ನಿರುದ್ಯೋಗಿಗಳಿಗೆ ಒಂದು ವೇದಿಕೆಯಾಗಿದ್ದು, ಉದ್ಯೋಗ ಸಿಗುವ ಭರವಸೆಯಿಂದ ಈ ಮೇಳದಲ್ಲಿ ಭಾಗವಹಿಸುತ್ತಿದ್ದೇನೆ.
– ಶೇಷರಾಜ್‌ ಗುರುಪುರ,
 ಎಂಬಿಎ ಪದವೀಧರ

Advertisement

Udayavani is now on Telegram. Click here to join our channel and stay updated with the latest news.

Next