ಚಾಮರಾಜನಗರ: ಭೂ ಸುಧಾರಣಾ ಕಾಯ್ದೆ ಹಾಗು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಕರ್ನಾಟಕ ಬಂದ್ ಗೆ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಅಂಗಡಿ ಮುಂಗಟ್ಟುಗಳು, ಹೊಟೇಲ್ ಗಳು ಸಂಪೂರ್ಣ ಮುಚ್ಚಿದ್ದವು. ಅಗತ್ಯ ವಸ್ತು ಮತ್ತು ಸೇವೆ ಹೊರತುಪಡಿಸಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಕೆಎಸ್ಆರ್ ಟಿಸಿ ಹಾಗು ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು, ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು
ಬಂದ್ ವೇಳೆ ವಿವಿದೆಡೆ ರೈತ ಹಾಗು ಇತರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ರೈತರಿಗೆ ಅನ್ಯಾಯವಾದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ: ಬಿ ಎಸ್ ಯಡಿಯೂರಪ್ಪ
ರೈತರು ಬೈಕ್ ರ್ಯಾಲಿ ಮೂಲಕ ತೆರಳಿ ಕೆಲವೆಡೆ ತೆರೆದಿದ್ದ ಅಂಗಡಿ ಮುಂಗಟ್ಟುಗಳನ್ನು ಮನವಿ ಮಾಡಿ ಮುಚ್ಚಿಸಿದರು. ಎಪಿಎಂಸಿ ಬಳಿ ರಾಷ್ಟ್ರೀಯ ಹೆದ್ದಾರಿ 209 ರಲ್ಲಿ ರಸ್ತೆ ತಡೆ ನಡೆಸಿ ಸರ್ಕಾರ ರೈತರ ಪಾಲಿಗೆ ಸತ್ತುಹೋಗಿದೆ ಎಂದು ಲಯಬದ್ಧವಾಗಿ ಘೋಷಣೆ ಕೂಗುತ್ತಾ ಕುಣಿಯುತ್ತಾ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.
ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದಾಗ ಪೊಲೀಸರು ನೀರು ಹಾಕಿ ಬೆಂಕಿ ನಂದಿಸಿದರು. ಈ ವೇಳೆ ಡಿವೈಎಸ್ಪಿ ಅನ್ಸರ್ ಆಲಿ ಅವರನ್ನು ರೈತ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.