ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಕಳೆದ ಮಾ. 8 ರಂದು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಆರಂಭವಾಗಿದ್ದು ದಿನದಿಂದ ದಿನಕ್ಕೆ ಜನ ಮನ್ನಣೆ ಗಳಿಸುತ್ತಿದೆ. ಶ್ರಮಿಕ, ಬಡವರ್ಗದವರಿಗೆ ಸಕಾಲದಲ್ಲಿ ಸುಲಭ ದರದಲ್ಲಿ ಶುಚಿ ಮತ್ತು ರುಚಿಯಾದ ಊಟ, ತಿಂಡಿ ದೊರೆಯುತ್ತಿದೆ. 5-10 ರೂ.ಗಳಲ್ಲಿ ಬಡವರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಂಟೀನ್‌ಗೆ ನಿರೀಕ್ಷೆಗೂ ಮೀರಿದ ಬೇಡಿಕೆ ಕಂಡು ಬರುತ್ತಿದೆ. ಬಡವರು, ಕೂಲಿ ಕಾರ್ಮಿಕರು, ಅಬಲೆಯರ ಪಾಲಿನ ನಿತ್ಯದ ಅಕ್ಷಯ ಪಾತ್ರೆಯಾಗಿ ಇಂದಿರಾ ಕ್ಯಾಂಟೀನ್ ಹೊರ ಹೊಮ್ಮಿದೆ. ಬೆಳಿಗ್ಗೆ 7:30 ರಿಂದ ತಿಂಡಿ, ಮಧ್ಯಾಹ್ನ 12:30 ರಿಂದ ಊಟ ಮತ್ತು ರಾತ್ರಿ 7:30 ರಿಂದ ಊಟ ಒದಗಿಸಲಾಗುತ್ತದೆ. ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ 500 ಟೋಕನ್ ಹಾಗೂ ಸಂಜೆ 400 ಟೋಕನ್‌ಗಳನ್ನು ಮಿತಿಗೊಳಿಸಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಬಿಇಒ ಕಚೇರಿ, ನಾಲ್ಕೈದು ಬ್ಯಾಂಕುಗಳು, ವಿವಿಧ ಶಾಲಾ, ಕಾಲೇಜುಗಳು, ಜಿಲ್ಲಾ ನ್ಯಾಯಾಲಯ ಸೇರಿದಂತೆ ಮತ್ತಿತರ ಕಚೇರಿ ಹಾಗೂ ಇನ್ನಿತರೆ ಕೆಲಸ ಕಾರ್ಯಗಳಿಗಾಗಿ ನಗರಕ್ಕೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಅಂತಹ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ತೆರೆದು ಜನರಿಗೆ ಕಡಿಮೆ ದರದಲ್ಲಿ ತಿಂಡಿ, ಊಟ ಒದಗಿಸುತ್ತಿರುವುದರಿಂದ ಅನುಕೂಲವಾಗಿದೆ. ಜನರು ಪ್ರತಿ ನಿತ್ಯ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ತಿಂಡಿ, ಊಟ ಮಾಡುತ್ತಿದ್ದಾರೆ. ಬೆಳಗಿನ ಉಪಹಾರಕ್ಕೆ ಇಡ್ಲಿ, ಪುಳಿಯೊಗರೆ, ಖಾರಾ ಬಾತ್, ಪೊಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗಿಬಾತ್, ಕೇಸರಿಬಾತ್, ಪಲಾವ್, ಬಿಸಿಬೇಳೆ ಬಾತ್, ಉಪ್ಪಿಟ್ಟು. ಮಧ್ಯಾಹ್ನದ ಊಟಕ್ಕೆ ಅನ್ನ, ತರಕಾರಿ ಸಾಂಬಾರ್, ಮೊಸರನ್ನ. ಸಂಜೆ ಊಟಕ್ಕೆ ಟೊಮ್ಯಾಟೋ ಬಾತ್ ಮೊಸರನ್ನ, ಚಿತ್ರಾನ್ನ, ವಾಂಗಿಬಾತ್, ಬಿಸಿಬೇಳೆ ಬಾತ್, ಮೆಂತೆ ಪಲಾವ್, ಪುಳಿಯೊಗರೆ ನೀಡಲಾಗುತ್ತಿದೆ.
ನಗರದ ಯಾವುದೇ ಹೋಟೆಲ್‌ಗೆ ಹೋದರೂ ತಿಂಡಿಗೆ 40-50 ರೂ., ಒಂದು ಊಟಕ್ಕೆ ಕನಿಷ್ಠ 50-60 ರೂ. ತೆರಬೇಕಾಗಿದೆ. ಇದನ್ನು ಇಂದಿರಾ ಕ್ಯಾಂಟೀನ್ ತಪ್ಪಿಸಿ ಆರ್ಥಿಕವಾಗಿ ಸಾಕಷ್ಟು ಉಳಿತಾಯ ಮಾಡಿಕೊಟ್ಟಿದೆ. ಅನ್ನಭಾಗ್ಯ ಯೋಜನೆ ಅನುಷ್ಠಾನದ ನಂತರವೂ ಸಾಕಷ್ಟು ಮಂದಿ ಅಪೌಷ್ಟಿಕತೆಯಿಂದ ಬಳಲುತ್ತಿವುದು, ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರು ಹಾದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು.ಇದನ್ನು ಮನಗಂಡ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದು, ಜನಸಾಮಾನ್ಯರ ಮೆಚ್ಚುಗೆಗೆ ಕಾರಣವಾಗಿ¨
ನಗರ ಪ್ರದೇಶಗಳ ಬೀದಿಬದಿಯ ವ್ಯಾಪಾರಸ್ಥರು, ಕಾರ್ಮಿಕರು, ಕೂಲಿ ಕಾರ್ಮಿಕರು, ಬಡವರು, ಹಳ್ಳಿಗಳಿಂದ ಬರುವ ರೈತರಿಗೆ ಇಂದಿರಾ ಕ್ಯಾಂಟೀನ್‌ನಿಂದ ಅನುಕೂಲವಾಗಿದೆ. ಊಟ-ತಿಂಡಿ ಚೆನ್ನಾಗಿರುತ್ತದೆ.
ತಿಪ್ಪೇಸ್ವಾಮಿ, ರೈತ.
ಹಳ್ಳಿಗಳಿಂದ ಕಾಲೇಜುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತೇವೆ. ಬೆಳಿಗ್ಗೆ ಮನೆಗಳಲ್ಲಿ ಬೇಗ ಅಡುಗೆ ಆಗಿರುವುದಿಲ್ಲ. ಇಲ್ಲಿಗೆ ಬಂದು 5 ರೂ. ನೀಡಿದರೆ ತಿಂಡಿ ಸಿಗುತ್ತದೆ.
ಮಂಜುನಾಥ್, ಪಿಯು ವಿದ್ಯಾರ್ಥಿ.
ಪ್ರತಿ ದಿನದ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ 500 ಟೋಕನ್ ಹಾಗೂ ಸಂಜೆ ಊಟಕ್ಕೆ 300 ಟೋಕನ್ ಮಿತಿಗೊಳಿಸಲಾಗಿದೆ. ಸಾಕಷ್ಟು ಬೇಡಿಕೆ ಇದ್ದ ಕಾರಣ ಸ್ವಯಂ ಪ್ರೇರಣೆಯಿಂದ ನಾವೇ ಹೆಚ್ಚುವರಿಯಾಗಿ ಸಂಜೆ 100 ಟೋಕನ್ ಹೆಚ್ಚಿಸಿದ್ದೇವೆ. ನಿರೀಕ್ಷೆಗೂ ಮೀರಿದ ಜನ ಬರುತ್ತಿದ್ದು ನಿಯಂತ್ರಿಸುವುದು ಕಷ್ಟವಾಗುತ್ತಿದೆ.
ಸಂಜಯ್, ಇಂದಿರಾ ಕ್ಯಾಂಟೀನ್ ಮೇಲ್ವಿಚಾರಕ.
ಹರಿಯಬ್ಬೆ ಹೆಂಜಾರಪ್ಪ