Advertisement

ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಉತ್ತಮ ಮಳೆ

03:45 AM Jun 27, 2017 | |

ಬೆಂಗಳೂರು: ರಾಜ್ಯದಲ್ಲಿ  ಈ ಬಾರಿ ಉತ್ತಮ ಮಳೆಯ ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ಮಳೆ ಮೊದಲ ತಿಂಗಳು ಕೊಂಚ ನಿರಾಸೆ ಉಂಟುಮಾಡಿದೆ. ಇದುವರೆಗೆ ಮಲೆನಾಡು ಸೇರಿದಂತೆ ರಾಜ್ಯದ ಬಹುಭಾಗಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಜಲಾಶಯಗಳು ಭರ್ತಿಯಾಗುತ್ತವೆಯೋ ಇಲ್ಲವೋ ಎನ್ನುವ ಆತಂಕ ಸರ್ಕಾರ ಮತ್ತು ಜನತೆಯನ್ನ ಕಾಡತೊಡಗಿದೆ.

Advertisement

ಜೂನ್‌ 1ರಿಂದ 26ರವರೆಗೆ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ. 35ರಷ್ಟು ಹಾಗೂ ಮಲೆನಾಡು ಭಾಗಗಳಲ್ಲಿ ಶೇ. 19ರಷ್ಟು ಮಳೆ ಕೊರತೆ ಕಂಡುಬಂದಿದೆ. ಉತ್ತರ ಒಳನಾಡಿನಲ್ಲಿ ಮಾತ್ರ ವಾಡಿಕೆ ಮಳೆಯಾಗಿದೆ. ಕರಾವಳಿಯಲ್ಲಿ ಶೇ. 3ರಷ್ಟು ಕಡಿಮೆ ಮಳೆಯಾಗಿದ್ದರೂ, ಅದನ್ನು ವಾಡಿಕೆ ಮಳೆ ಎಂದೇ ಪರಿಗಣಿಸಲಾಗುತ್ತದೆ.

ಈ ಬಾರಿಯ ಮುಂಗಾರು ಉತ್ತಮವಾಗಿರಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದರು. ಈ ಹಿಂದೆ ಸತತ ಎರಡು ವರ್ಷ ಬರಗಾಲದಿಂದ ಕಂಗೆಟ್ಟಿದ್ದ ಜನರಿಗೆ ಉತ್ತಮ ಮಳೆಯ ಮುನ್ಸೂಚನೆಯು ಹೊಸ ಭರವಸೆ ನೀಡಿತ್ತು. ಆದರೆ, ಮೊದಲ ತಿಂಗಳಲ್ಲೇ ನಿರೀಕ್ಷೆ ಹುಸಿಯಾಗಿದೆ. ಉತ್ತರ ಒಳನಾಡಿನ ಕೆಲ ಭಾಗ ಹೊರತುಪಡಿಸಿದರೆ, ಉಳಿದೆಲ್ಲೆಡೆ ಮುಂಗಾರು ಮಾರುತಗಳು ದುರ್ಬಲವಾಗಿರುವುದರಿಂದ ಕೃಷಿ ಚಟುವಟಿಕೆಗಳು ಕೂಡ ಮಂಕಾಗಿವೆ.

ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಜೂನ್‌ 1ರಿಂದ 26ರವರೆಗೆ ವಾಡಿಕೆ ಮಳೆ 57.8 ಮಿ.ಮೀ. ಆದರೆ, ಬಿದ್ದ ಮಳೆ 37.8 ಮಿ.ಮೀ. ಅದೇ ರೀತಿ, ಮಲೆನಾಡಿನಲ್ಲಿ 282.1 ಮಿ.ಮೀ. ವಾಡಿಕೆ ಮಳೆಯಾಗಿದ್ದು, 22.2 ಮಿ.ಮೀ. ಮಳೆ ಬಿದ್ದಿದೆ. ಇನ್ನು ಕರಾವಳಿಯಲ್ಲಿ 662.1 ಮಿ.ಮೀ. ಬದಲಿಗೆ 639.8 ಮಿ.ಮೀ. ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ 85.1 ಮಿ.ಮೀ. ಆಗಿದ್ದು, 103.4 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಜೂನ್‌ನಲ್ಲಿ ಉತ್ತರ ಒಳನಾಡಿನಲ್ಲಿ ಮೇಲ್ಮೆ„ಸುಳಿಗಾಳಿ ಸೇರಿದಂತೆ ಕೆಲವು ಬದಲಾವಣೆಗಳು ಮಳೆ ಸುರಿಸಿದವು. ಹಾಗಾಗಿ, ಅಲ್ಲಿ ಉತ್ತಮ ಮಳೆಯಾಗಿದೆ. ಉಳಿದೆಡೆ ಮೊದಲ ತಿಂಗಳು ಮಳೆ ಅಷ್ಟಕ್ಕಷ್ಟೇ ಆಗಿದೆ. ಮುಂದಿನ ಮೂರ್‍ನಾಲ್ಕು ದಿನಗಳು ಮತ್ತೆ ಉತ್ತಮ ಮಳೆಯ ಸೂಚನೆಗಳಿವೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

ಆದರೆ, ತಿಂಗಳಾಂತ್ಯಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇದ್ದು, ಭಾನುವಾರದಿಂದ ರಾಜ್ಯದಲ್ಲಿ ಮುಂಗಾರು ಕೂಡ ಚುರುಕಾಗಿದೆ. ಮುಂದಿನ ಎರಡು ದಿನಗಳು ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ಸಾಮಾನ್ಯವಾಗಿ ಮೊದಲ ತಿಂಗಳು ಮಾರುತಗಳ ಏರಿಳಿತ ಇದ್ದೇ ಇರುತ್ತದೆ. ಆರಂಭದಲ್ಲಿ ಚೆನ್ನಾಗಿ ಮಳೆಯಾಯಿತು. ನಂತರ ವಿರಾಮ ನೀಡಿತು. ಈಗ ಮತ್ತೆ ಮಾರುತಗಳು ಚುರುಕುಗೊಂಡಿದ್ದು, ಉತ್ತಮ ಮಳೆಯಾಗುತ್ತಿದೆ. ಹಾಗಾಗಿ, ಈಗಲೇ ಮಳೆ ಕೊರತೆ ಆಯಿತು ಎಂದು ಹೇಳಲಾಗದು. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಮುಂಗಾರು ಆರಂಭ ಉತ್ತಮವಾಗಿಯೇ ಇದೆ. ಮುಂದಿನ ಮೂರ್‍ನಾಲ್ಕು ದಿನ ಉತ್ತಮ ಮಳೆಯ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ರಮೇಶಬಾಬು ಸ್ಪಷ್ಟಪಡಿಸುತ್ತಾರೆ.

ಮೂರ್‍ನಾಲ್ಕು ದಿನ ಉತ್ತಮ ಮಳೆ
ರಾಜ್ಯದಲ್ಲಿ ಭಾನುವಾರದಿಂದ ಮುಂಗಾರು ಮಾರುತಗಳು ಚುರುಕಾಗಿದ್ದು, ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ.

ಜೂನ್‌ 28ರಿಂದ ಜುಲೈ 1ರವರೆಗೆ ಬುಧವಾರ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತಿತರ ಕಡೆಗಳಲ್ಲಿ ಮಳೆಯಾಗಲಿದೆ. ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಈ ಮಧ್ಯೆ ಕೊಲ್ಲೂರು, ಕಾರ್ಕಳ, ಮಾಣಿ, ಪುತ್ತೂರು, ಭಾಗಮಂಡಲ, ಶೃಂಗೇರಿ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳಿಗ್ಗೆ 8.30ಕ್ಕೆ ಗರಿಷ್ಠ 15 ಸೆಂ.ಮೀ.ನಿಂದ ಕನಿಷ್ಠ 12 ಸೆಂ.ಮೀ. ಮಳೆ ದಾಖಲಾಗಿದೆ. ಅದೇ ರೀತಿ, ಸಿದ್ದಾಪುರ, ಕೊಟ್ಟಿಗೆಹಾರ, ಕಮ್ಮರಡಿ, ಬೆಳ್ತಂಗಡಿ, ಮಂಗಳೂರು, ಜಯಪುರ, ಧರ್ಮಸ್ಥಳ ಸುತ್ತಲಿನ ಪ್ರದೇಶಗಳಲ್ಲಿ ಗರಿಷ್ಠ 10ರಿಂದ ಕನಿಷ್ಠ 7 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಶಿವಮೊಗ್ಗ, ಹಾಸನ, ಬೆಳಗಾವಿ, ಮೈಸೂರು, ಯಾದಗಿರಿ, ಕಲಬುರಗಿ, ಹಾವೇರಿ, ವಿಜಯಪುರ ಮತ್ತಿತರ ಜಿಲ್ಲೆಗಳ ಕೆಲವೆಡೆ 6ರಿಂದ 1 ಸೆಂ.ಮೀ.ವರೆಗೂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next