Advertisement
ಯೆಹೂದ್ಯ ಜನಾಂಗದಲ್ಲಿ ಹುಟ್ಟಿ ಬೆಳೆದ ಯೇಸು ಕ್ರಿಸ್ತರು ಆ ಧರ್ಮದಲ್ಲಿದ್ದ ಮೂಢನಂಬಿಕೆ, ಧಾರ್ಮಿಕ ಆಷಾಢಭೂತಿತನ, ಅರ್ಥವಿಲ್ಲದ ಕಟ್ಟುಪಾಡುಗಳು, ಪುರೋಹಿತಶಾಹಿ ಪ್ರವೃತ್ತಿ, ಅಶಕ್ತರ ಹಾಗೂ ಮಹಿಳೆಯರ ದಮನ ಇನ್ನಿತರ ಕೆಟ್ಟತನಗಳನ್ನು ಕಟುವಾಗಿ ಟೀಕಿಸಿದರು. “ಪರಪ್ರೀತಿಯೇ ಸರ್ವಶ್ರೇಷ್ಟ; ಇದರಲ್ಲಿ ಉಳಿದೆಲ್ಲ ನಿಯಮಗಳು ಅಡಕವಾಗಿವೆ’ ಎಂದು ಬೋಧಿಸಿದರು. ಅವರ ಬೋಧನೆಯನ್ನು ವಿರೋಧಿಸಿದ ಪುರೋಹಿತಶಾಹಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಬಂಧಿಸಿ, ಚಿತ್ರಹಿಂಸೆಗೆ ಒಳಪಡಿಸಿ ವಿಚಾರಣೆಯಿಲ್ಲದೆ ಅವರನ್ನು ಶಿಲುಬೆಯ ಮರಣದ ಶಿಕ್ಷೆಗೆ ಒಳಪಡಿಸಿದರು.
Related Articles
Advertisement
ಹೀಗೆ ಯೆಹೂದ್ಯ ಧಾರ್ಮಿಕ ನಾಯಕರು, ಮುಖ್ಯ ಯಾಜಕರು, ಫರಿಸಾಯರು, ಧರ್ಮಪಂಡಿತರು ಹಾಗೂ ಇನ್ನಿತರರು ಯೇಸುಸ್ವಾಮಿಯ ಮರಣಕ್ಕೆ ನೇರ ಕಾರಣರು. ಇದರಲ್ಲಿ ಸಾಮಾನ್ಯ ಜನರ ಉಲ್ಲೇಖವೇ ಇಲ್ಲ. ಆದರೆ ಈ ಅಧಿಕಾರಸ್ಥ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರು ಸಾಮಾನ್ಯ ಜನರನ್ನು ಭಯ ಬೀಳಿಸಿ, ಪ್ರಚೋದಿಸಿ ಅವರನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡರು. ಅವರ ಕುಮ್ಮಕ್ಕಿನಿಂದಲೇ, ಜನಸಾಮಾನ್ಯರು, “ಅವನನ್ನು ಶಿಲುಬೆಗೇರಿಸಿ’ ಎಂದು ಬೊಬ್ಬಿಟ್ಟರು.
ಯೇಸುಸ್ವಾಮಿ ಜೀವಿಸಿ, ಬೋಧಿಸಿದ ಮೊದಲನೇ ಶತಮಾನದ ಆದಿಭಾಗದಲ್ಲಿ ಈಗಿನ ಇಸ್ರೇಲ್-ಪ್ಯಾಲೆಸ್ತೀನ್ ಭಾಗಗಳು ರೋಮ್ ಅಧಿಪತ್ಯಕ್ಕೆ ಒಳಪಟ್ಟಿದ್ದವು. ಧಾರ್ಮಿಕ ನಿಯಮಗಳು ಯೆಹೂದ್ಯರ ಸಂಪ್ರದಾಯದಂತೆ ಇದ್ದು, ಇತರ ಎಲ್ಲ ನಿಯಮಗಳು ರೋಮ್ ಆಡಳಿತ ವಿಧಿಸಿದ್ದಾಗಿದ್ದವು. ಯೇಸುಸ್ವಾಮಿಗೆ ಶಿಕ್ಷೆ ಅಥವಾ ಮರಣದಂಡನೆಯನ್ನು ವಿಧಿಸಲು ಯೆಹೂದ್ಯರಿಗೆ ಅಧಿಕಾರವಿಲ್ಲದುದರಿಂದ, ಅವರನ್ನು ಯೆಹೂದ್ಯರು ರೋಮನರ ಕೈಗೆ ಒಪ್ಪಿಸಿದರು. ರೋಮನರಿಗೆ ಒಪ್ಪಿಸುವಾಗ ಯೇಸುಸ್ವಾಮಿಯ ಮೇಲೆ ಹೊರಿಸಿದ ಸುಳ್ಳು ಆರೋಪಗಳು: “ಅವರು ಯೆಹೂದ್ಯರ ಪವಿತ್ರ ದೇವಾಲಯವನ್ನು ಕೆಡವಲು ಪ್ರಯತ್ನಿಸಿದ್ದು; ದೇವದೂಷಣೆ ಮಾಡಿದ್ದು; ರೋಮ್ ಆಡಳಿತದ ವಿರುದ್ಧ ದಂಗೆ ಎದ್ದದ್ದು ಇತ್ಯಾದಿ. ಆದರೆ ಯೇಸುಸ್ವಾಮಿ ತನ್ನ ಮರಣಾನಂತರ ಮೂರನೇ ದಿನ ಜೀವಂತವಾಗಿ ಏಳುವುದಾಗಿ ತನ್ನ ದೇಹದ ಬಗ್ಗೆ ಮಾತನಾಡಿದ್ದು ಹಾಗೂ ದೇವರನ್ನು ತಂದೆ ಎಂದು ಕರೆದದ್ದು, ರೋಮ್ ಆಡಳಿತದ ಬಗ್ಗೆ ಯೇಸುಸ್ವಾಮಿ, “ಅರಸನಿಗೆ ಕೊಡಬೇಕಾಗಿದ್ದನ್ನು ಅರಸನಿಗೆ ಕೊಡಿ; ದೇವರಿಗೆ ಸಲ್ಲುವುದನ್ನು ದೇವರಿಗೆ ಕೊಡಿ’ ಎಂದು ಪ್ರಾಮಾಣಿಕವಾಗಿ ರಾಜ್ಯಕ್ಕೆ ತೆರಿಗೆಯನ್ನು ಸಲ್ಲಿಸಬೇಕೆಂದು ಎಲ್ಲರಿಗೂ ಹೇಳಿದ್ದರು ಅಷ್ಟೇ.
ರೋಮ್ ರಾಜ್ಯಪಾಲನಾದ ಪೊಂತ್ಸಿಯಸ್ ಪಿಲಾತನಿಗೆ ಯೇಸುಸ್ವಾಮಿ ಸಂಪೂರ್ಣ ನಿರಪರಾಧಿ ಎಂದು ತಿಳಿದಿದ್ದರೂ ಧಾರ್ಮಿಕ ನಾಯಕರು ಹಾಗೂ ಯಾಜಕರಿಗೆ ಹೆದರಿ ರಾಜಕೀಯ ಕೈದಿಗೆ ನೀಡುವ ಶಿಲುಬೆಯ ಮರಣದ ತೀರ್ಪನ್ನು ಯೇಸುಸ್ವಾಮಿಗೆ ನೀಡುತ್ತಾನೆ. ಸಕಾರಣವಿಲ್ಲದೇ ಯೇಸುಸ್ವಾಮಿ ಶಿಲುಬೆಯ ಮರಣಕ್ಕೆ ಒಳಗಾದರು. ಅನಂತರ ಪುನರುತ್ಥಾನರಾಗಿ ಎದ್ದು ಸ್ವರ್ಗಕ್ಕೆ ಏರಿಹೋದರು.
ಯಾರಾದರೂ ನನ್ನ ಹಿಂಬಾಲಕರಾಗಲು ಬಯಸುವುದಾದರೆ ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸಲಿ ಎಂಬ ಕರೆಯನ್ನು ಯೇಸುಸ್ವಾಮಿ ತಮ್ಮ ಬೋಧನೆಯಲ್ಲಿ ನೀಡಿದರು. ಶಿಲುಬೆಯೆಂದರೆ ಜೀವನದಲ್ಲಿ ಎದುರಾಗುವ ಕಷ್ಟಗಳು, ದುಃಖ-ದುಗುಡಗಳು, ಸಾವು, ನೋವು, ಸಂಕಟಗಳು. ತನ್ನ ಶಿಲುಬೆಯನ್ನು ಹೊತ್ತು ಯೇಸುಸ್ವಾಮಿ ಗೊಲ್ಗೊಥಾದ ತುದಿಗೆ ಸಾಗಿದಂತೆ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಎದುರಾಗುವ ವಿವಿಧ ಶಿಲುಬೆಗಳನ್ನು ಹೊತ್ತು ನಡೆದರೆ ಪುನರುತ್ಥಾನದ ಆನಂದವನ್ನು ಪಡೆಯಬಹುದು ಎಂಬ ಭರವಸೆಯನ್ನು ಅವರು ನೀಡುತ್ತಾರೆ. ದೀನತೆಯ ಸಂಕೇತವಾದ ಶಿಲುಬೆಯು ಮಾನವನ ಅಹಂಕಾರ ಹಾಗೂ ಸ್ವಾರ್ಥಕ್ಕೊಂದು ಸವಾಲು. ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರಪ್ರೀತಿಯಲ್ಲಿ ಬಾಳಲು ಶಿಲುಬೆಯೊಂದು ಹಾದಿ.
ತಪಸ್ಸು ಕಾಲದ ಶುಕ್ರವಾರಗಳಲ್ಲಿ ಹಾಗೂ ವಿಶೇಷವಾಗಿ ಗುಡ್ ಫ್ರೆçಡೆಯಂದು ಯೇಸುಸ್ವಾಮಿ ಮರಣ ದಂಡನೆಯ ತೀರ್ಪನ್ನು ಪಡೆದು ಶಿಲುಬೆಯನ್ನು ಹೊತ್ತು “ಗೊಲ್ಗೊಥಾ ಬೆಟ್ಟಕ್ಕೆ ಸಾಗಿದುದ್ದನ್ನು ಪ್ರತಿಬಿಂಬಿಸುವ “ಶಿಲುಬೆ ಹಾದಿ’ಯನ್ನು ಕ್ರೈಸ್ತರು ನಡೆಸುತ್ತಾರೆ. ಆ ಹಾದಿಯಲ್ಲಿ ತಮ್ಮ ಜೀವನದ ಕಷ್ಟ-ದುಃಖದ, ಸಾವು-ನೋವಿನ ಹಾದಿಯನ್ನು ಕಾಣುತ್ತಾರೆ. ಹೀಗೆ ಗುಡ್ ಫ್ರೆçಡೆ ಹಾಗೂ “ಶಿಲುಬೆಯ ಹಾದಿ’ ಪವಿತ್ರ ವಾರದ ಅತ್ಯಂತ ಗಾಢ ಆಧ್ಯಾತ್ಮಿಕ ಧ್ಯಾನ ಹಾಗೂ ಚಿಂತನೆಯಾಗಿವೆ.
– ಫಾದರ್ ಚೇತನ್
ಸಾರ್ವಜನಿಕ ಸಂಪರ್ಕಾಧಿಕಾರಿ,
ಉಡುಪಿ ಧರ್ಮಪ್ರಾಂತ