Advertisement

ಉತ್ತಮ ಪುಸ್ತಕ ಓದಿನಿಂದ ದೃಢ ವ್ಯಕ್ತಿತ್ವ

10:04 AM Aug 11, 2017 | Team Udayavani |

ಕಲಬುರಗಿ: ಸಾಹಿತ್ಯ ವಲಯ ವಿಶಾಲವಾಗಿದ್ದು, ಅಸಂಖ್ಯಾತ ಉತ್ತಮ ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನಾದರೂ
ಓದುವುದರ ಮುಖಾಂತರ ನಮ್ಮ ವ್ಯಕ್ತಿತ್ವ ಹಾಗೂ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶರಣಬಸವ
ವಿಶ್ವವಿದ್ಯಾಲಯದ ಸಹ ಕುಲಪತಿ ಹಾಗೂ ಶರಣಬಸವೇಶ್ವರ ವಸತಿ (ಎಸ್‌ಬಿಆರ್‌) ಕಾಲೇಜಿನ ಪ್ರಾಚಾರ್ಯ ಡಾ| ಎನ್‌.
ಎಸ್‌. ದೇವರಕಲ್‌ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಗುರುವಾರ ನಗರದ ಎಸ್‌ಬಿಆರ್‌ ಶಾಲೆಯಲ್ಲಿ ಷಡಕ್ಷರಿಸ್ವಾಮಿ ಡಿಗ್ಗಾಂವಕರ
ಪ್ರತಿಷ್ಠಾನದ ಶಿವಾಂಶ ಪ್ರಕಾಶನ ವತಿಯಿಂದ ಮನೋವಿಜ್ಞಾನಿ ಡಾ| ಸಿ.ಆರ್‌. ಚಂದ್ರಶೇಖರ ಬರೆದ “ಒಳ್ಳೆಯ ಅಧ್ಯಯನ ವಿಧಾನ ಮತ್ತು ಉತ್ತಮ ನೆನಪಿನ ಶಕ್ತಿ ಹಾಗೂ ಗುಡ್‌ ಸ್ಟಡಿ ಹ್ಯಾಬಿಟ್‌ ಗುಡ್‌ ಮೆಮೋರಿ ಎನ್ನುವ ಎರಡು ಪುಸ್ತಕ ಲೋಕಾರ್ಪಣೆಗೊಳಿಸಿ ಅವರು
ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಓದಿದ್ದನ್ನು ಪುನಃ ಮನನ ಮಾಡಿಕೊಂಡರೆ ಓದಿಕೊಂಡಿದ್ದು ಬಹಳ ದಿನಗಳವರೆಗೆ ಶಾಶ್ವತವಾಗಿ ನೆನೆಪಿನಲ್ಲಿ ಉಳಿಯುತ್ತದೆ. ಲೋಕಾರ್ಪಣೆಗೊಂಡಿರುವ ಎರಡು ಪುಸ್ತಕಗಳು ಬಹಳ ಮಹತ್ವದಿಂದ ಕೂಡಿವೆ. ಕಡಿಮೆ ಬೆಲೆಯಲ್ಲಿ ಅಪಾರ ವಸ್ತು ವಿಷಯಗಳನ್ನು ಈ ಪುಸ್ತಕಗಳು ಹೊಂದಿವೆ ಎಂದು ಹೇಳಿದರು.
ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದ ವಸ್ತು ಮತ್ತೂಂದಿಲ್ಲ. ಜ್ಞಾನ ಯಾವ ಮೂಲೆಯಿಂದಲಾದರೂ ಬರಲಿ, ಅದನ್ನು ಒಮ್ಮನಸ್ಸಿನಿಂದ ಸ್ವೀಕರಿಸಬೇಕು. ಖನ್ನತೆ, ಒತ್ತಡ ನಿವಾರಿಸಿಕೊಳ್ಳಲು ಪುಸ್ತಕ ಓದುವ ಹವ್ಯಾಸ ಆರೋಗ್ಯಕ್ಕೆ ಒಳ್ಳೆಯದು ಎಂದರು. ಹಿರಿಯ ಪತ್ರಕರ್ತ ಟಿ. ವಿ ಶಿವಾನಂದನ್‌, ನಿವೃತ್ತ ಉಪನ್ಯಾಸಕ ನರೇಂದ್ರ ಬಡಶೇಷಿ, ಶಿವಾಂಶ ಪ್ರಕಾಶನದ ಡಾ| ಎಸ್‌ ಎಸ್‌ ಹಿರೇಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next