ಲಕ್ನೋ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸ್ಥಳೀಯ ಸಮಾಜವಾದಿ ಪಕ್ಷದ ನಾಯಕನೊಬ್ಬನ ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ಮೇಲೆ ಪ್ರಕರಣ ದಾಖಲಿಸಿದ್ದು, ಅವರಲ್ಲಿ ಬಿಜೆಪಿ ಕೌನ್ಸಿಲರ್ ಮತ್ತು ಮೂವರು ಪುತ್ರರು ಸೇರಿದ್ದಾರೆ.
ಶುಕ್ರವಾರ ರಾತ್ರಿ ಓಂ ಪ್ರಕಾಶ್ ಸಿಂಗ್ ಅವರ ಮನೆಯ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯನ್ನು ನಡೆಸಿದ ಬಳಿಕ ಸಿಂಗ್ ಅವರ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕುಟುಂಬಸ್ಥರು ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದು, ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದರು. ಅವರು ಸಿಂಗ್ ಅವರ ಮೃತದೇಹವನ್ನು ರಸ್ತೆಯ ಮೇಲೆ ಇರಿಸಿ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ ನಂತರವೇ ಅಂತಿಮ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಆಗ್ರಹಿಸಿದ್ದರು.
ಓಂ ಪ್ರಕಾಶ್ ಸಿಂಗ್ (45) ಅವರನ್ನು ಶುಕ್ರವಾರ ರಾತ್ರಿ ಪರ್ಸಾಪುರ ಪಟ್ಟಣದ ರಾಜಾ ತೋಲಾದಲ್ಲಿರುವ ಅವರ ಮನೆಗೆ ಕೆಲವರು ನುಗ್ಗಿ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.
ಸಿಂಗ್ ಅವರ ಪತ್ನಿ ನೀಲಂ ಅವರ ದೂರಿನ ಆಧಾರದ ಮೇಲೆ, ಪರಸ್‌ಪುರ ನಗರ ಪಂಚಾಯತ್ ನ ಬಿಜೆಪಿ ಕೌನ್ಸಿಲರ್ ಉದಯಭನ್ ಸಿಂಗ್ ಅಲಿಯಾಸ್ ಲಲ್ಲನ್ ಸಿಂಗ್ ಮತ್ತು ಅವರ ಮೂವರು ಪುತ್ರರು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪರಸ್‌ಪುರ ಪೊಲೀಸ್ ಠಾಣೆ ಪ್ರಭಾರಿ ದಿನೇಶ್ ಸಿಂಗ್ ಹೇಳಿದ್ದಾರೆ.
ಉದಯಭಾನ್ ಮತ್ತು ಆತನ ಕುಟುಂಬದವರು ಈ ಹಿಂದೆ ಎರಡು ಬಾರಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನೀಲಂ ಸಿಂಗ್ ದೂರಿನಲ್ಲಿ ಆರೋಪಿಸಿದ್ದಾರೆ. ಆಕೆಯ ಪತಿ ಮತ್ತು ಮಗನನ್ನು ಥಳಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ರಾಜಕೀಯ ಒತ್ತಡದಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.