ಚಿಕ್ಕಮಗಳೂರು: ತರೀಕೆರೆ ತಾಲೂಕು ಗೇರುಮರಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಜೆಸಿಬಿ ಚಾಲಕ ಮಾರುತಿ ಎಂಬವರು ಹಳೇ ಮನೆ ಕೆಡವಲು ತೆರಳಿದ್ದ ಸಂದರ್ಭ ಡಿಶ್ ವೈಯರ್ ತುಂಡಾದ ವಿಚಾರಕ್ಕೆ ಗಲಾಟೆ ನಡೆದಿದ್ದು, 15 ಜನರ ಮೇಲೆ ಕೇಸ್ ದಾಖಲಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಶಿವರಾಮ್, ರಾಜಪ್ಪ, ಶಂಕರ್, ತಮ್ಮಯ್ಯ ಎಂಬವರನ್ನು ಪೊಲೀಸರು ಬಂಧಿಸಿದ್ದು, ಉಳಿದವರು ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಡಿವೈಎಸ್ ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.
ಈ ಘಟನೆ ಬೆನ್ನಲ್ಲೆ ಗ್ರಾಮದ ಕಂಬದ ರಂಗನಾಥ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ಗ್ರಾಮಸ್ಥರು ಬೀಗ ಹಾಕಿದ್ದಾರೆ.
ಈ ಗ್ರಾಮದಲ್ಲಿ ಕಟ್ಟುನಿಟ್ಟಿನ ಸಂಪ್ರದಾಯಗಳು ಇಂದಿಗೂ ಆಚರಣೆಯಲ್ಲಿವೆ. ಗ್ರಾಮಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಯುವಕ ಹಾಗೂ ಸಂಘಟನೆಯವರು ಮತ್ತು ಪ್ರಕರಣದ ಸಂಬಂಧ ಪೊಲೀಸರು ಬಂದಿದ್ದರಿಂದ ದೇವರಿಗೆ ಮೈಲಿಗೆ ಆಗುತ್ತದೆ ಎಂಬ ಕಾರಣಕ್ಕೆ ದೇಗುಲದ ಗರ್ಭಗುಡಿಗೆ ಬೀಗ ಹಾಕಲಾಗಿದೆ ಎನ್ನಲಾಗುತ್ತಿದೆ.
ದೇವರಿಗೆ ಗಂಗಾಪೂಜೆ ನೆರವೇರಿಸಿದ ಬಳಿಕ ದೇವಸ್ಥಾನದ ಬಾಗಿಲು ತೆರೆದು ಎಂದಿನಂತೆ ಪೂಜೆ ವಿಧಿವಿಧಾನಗಳು ನೆರವೇರಲಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಗ್ರಾಮಕ್ಕೆ ಅಧಿಕಾರಿಗಳು ತೆರಳಿ ಗ್ರಾಮಸ್ಥರ ಮನವೊಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.