ಕೋಟ: ಸಾಸ್ತಾನ ಗೋಳಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರವು ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಬ್ರಹ್ಮ ಕಲಶೋತ್ಸವ, ಪುನಃ ಪ್ರತಿಷ್ಠೆ ಹಾಗೂ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಫೆ. 19 ಮತ್ತು 20ರಂದು ಜರಗಿದವು.
ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ವೇ| ಮೂ| ಮಣೂರು ಮಧುಸೂದನ ಬಾಯರಿ ಮಾತನಾಡಿ, ದೇಗುಲವು ಎಲ್ಲ ಜಾತಿ, ಮತ, ಜನಾಂಗದವರನ್ನು ಒಗ್ಗೂಡಿಸುವ ಒಂದು ಶಕ್ತಿ ಸ್ಥಳ ಎಂದರು.
ಅಧ್ಯಕ್ಷತೆ ವಹಿಸಿದ್ದ ಆನೆಗುಡ್ಡೆ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯ ಮಾತನಾಡಿ, ದೇಗುಲದ ಜೀರ್ಣೋದ್ಧಾರದಿಂದ ಕ್ಷೇತ್ರದ ಚೈತನ್ಯ ವೃದ್ಧಿಸುತ್ತದೆ ಎಂದರು.
ಉಡುಪಿ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಆಶೀ ರ್ವಚನ ನೀಡಿದರು. ದೇಗುಲದ ಅರ್ಚ ಕರು, ಪಾತ್ರಿಗಳು, ಪರಿಚಾರಕರು, ದಾನಿಗಳು ಹಾಗೂ ಸಹಕಾರ ನೀಡಿದವರನ್ನು, ಗುರಿಕಾರರನ್ನು ಸಮ್ಮಾನಿಸಲಾಯಿತು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಪಿ. ಬಸವರಾಜ್, ಪಾಂಡೇಶ್ವರ ಗ್ರಾ.ಪಂ. ಅಧ್ಯಕ್ಷ ಗೋವಿಂದ ಪೂಜಾರಿ, ಮೊಕ್ತೇಸರರಾದ ಕೃಷ್ಣಯ್ಯ ಹೆಗ್ಡೆ ಹೆಗ್ಡೆರಮನೆ, ಡಾ|ಕೃಷ್ಣಪ್ರಸಾದ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ಪಾತ್ರಿ ಶಂಕರ ಪೂಜಾರಿ, ಗರಡಿಯ ಆಡಳಿತ ನೋಡಿಕೊಳ್ಳುತ್ತಿರುವ ಜಿ. ವಿಠ್ಠಲ ಪೂಜಾರಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಿ.ಎ. ದೇವಾನಂದ ಸ್ವಾಗತಿಸಿ, ಪಿಡಿಒ ಗಣೇಶ ನಿರೂಪಿಸಿದರು. ಗೋವಿಂದ ಪೂಜಾರಿ, ಬಾಲಕೃಷ್ಣ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು.