Advertisement

ಹೊನ್ನ ಕಳಶ‌: ಹೊನ್ನವಳ್ಳಿ ಕೃಷ್ಣ 1000

03:50 AM Apr 14, 2017 | |

“ಕೃಷ್ಣ’ ಅಂತ ಕೂಗಿದರಂತೆ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ. ಐದಾರು ಜನ ಕೃಷ್ಣರು ಆ ಕಡೆ, ಈ ಕಡೆಯಿಂದ ಓಡಿ ಬಂದರಂತೆ. ಆದರೆ, ಸಿದ್ಧಲಿಂಗಯ್ಯನವರಿಗೆ ಬೇಕಾಗಿದ್ದು ಹೊನ್ನವಳ್ಳಿಯ ಕೃಷ್ಣ ಮಾತ್ರ. ಹೀಗೆ ಬೇರೆಯವರು ಬಂದಿದ್ದು ನೋಡಿ, ಕೃಷ್ಣರ ಹೆಸರನ್ನು ಬದಲಾಯಿಸಬೇಕು ಅಂತ ಆಗಲೇ ತೀರ್ಮಾನಿಸಿಬಿಟ್ಟರಂತೆ ಸಿದ್ಧಲಿಂಗಯ್ಯ. ಯಾವೂರಯ್ಯ ನಿಂದು ಅಂದರಂತೆ. ಹೊನ್ನವಳ್ಳಿ ಎಂದಿದ್ದಾರೆ ಇವರು. ಸರಿ ಇನ್ನು ಮುಂದೆ ನಿನ್ನ ಹೆಸರು ಹೊನ್ನವಳ್ಳಿ ಕೃಷ್ಣ ಅಂತ … ಆಯ್ತಾ ಎಂದರಂತೆ ನಿರ್ದೇಶಕರು. “ಸಾರ್‌, ನಾನು ನೋಡಿದರೆ ಕೃಷ್ಣ ಕುಮಾರ್‌ ಅಂತ ಹೆಸರು ಮಡೀಕೋಬೇಕು ಅಂತಿವ್ನಿ’ ಅಂದರಂತೆ ಕೃಷ್ಣ. “ಈಗಾಗಲೇ ರಾಜಕುಮಾರ್‌, ಉದಯ್‌ ಕುಮಾರ್‌, ಕಲ್ಯಾಣ್‌ ಕುಮಾರ್‌ ಎಲ್ಲಾ ಇದ್ದಾರೆ. ನಿನ್ನ ನಾ ಹೊನ್ನವಳ್ಳಿ ಅಂತ ಕರೀತೀನಿ. ಕರೆದಾಗ, ಸುಮ್ಮನೆ ಬರೋದು ಕಲಿ’ ಎಂದರಂತೆ.

Advertisement

ಹೀಗೆ ಇಟ್ಟ ಹೆಸರು, ಈಗಲೂ ಮುಂದುವರೆದಿದೆ. “ನ್ಯಾಯವೇ ದೇವರು’ ಚಿತ್ರದಿಂದ ಹೊನ್ನವಳ್ಳಿ ಕೃಷ್ಣ ಆದ ಕೃಷ್ಣ, ಈಗ 1004 ಚಿತ್ರಗಳನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.  ಅವರ ಸಾವಿರದ ಚಿತ್ರ “ಭೂತಯ್ಯನ ಮೊಮ್ಮಗ ಅಯ್ಯು’. ಅಲ್ಲಿಂದ ಶುರುವಾದ 
ಪ್ರಯಾಣ ಇನ್ನೂ ಯಶಸ್ವಿಯಾಗಿ ಮುಂದುವರೆಯುತ್ತಲೇ ಇದೆ. ಆದರೆ, ಒಂದಿಷ್ಟು ಚಿತ್ರಗಳು ಮತ್ತು ಪಾತ್ರಗಳನ್ನು ಬಿಟ್ಟರೆ, ಮಿಕ್ಕಂತೆ ಎಲ್ಲವೂ ಹೀಗೆ ಬಂದು, ಹಾಗೆ ಹೋಗುವ ಪಾತ್ರಗಳೇ ಅಂತ ಬೇಸರವೂ ಇದೆ. ಅದರ ಪ್ರಮಾಣ ಕಡಿಮೆ. ಅದಕ್ಕಿಂತ ಹೆಚ್ಚಾಗಿ ಜನ ಇವತ್ತಿಗೂ ತಮ್ಮನ್ನು ಗುರುತಿಸುತ್ತಾರೆ, ಎಲ್ಲೇ ಹೋದರೂ ಮಾತನಾಡಿಸುತ್ತಾರೆ ಎಂಬ ಸಂತೋಷ ಕೃಷ್ಣ ಅವರಿಗೆ ಇದೆ.

“ಸಾವಿರ ಸಿನಿಮಾ ಮಾಡಿದ್ದೇನೆ. ಅದರಲ್ಲಿ ಕಣ್ಣಿಗೆ ಕಾಣುವ ಸಿನಿಮಾ ಕೆಲವೇ. ಇನ್ನೆಲ್ಲಾ ಮಾಯ. “ಗಜಪತಿ ಗರ್ವಭಂಗ’, “ಶ್ರುತಿ’, “ಗಣೇಶನ ಮದುವೆ’, “ಮುತ್ತಣ್ಣ’ … ಹೀಗೆ ಒಂದಿಷ್ಟು ಚಿತ್ರಗಳಲ್ಲಿ ಬಹಳ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಜನ ಈಗಲೂ ಅದರಿಂದಲೇ ಗುರುತಿಸುತ್ತಾರೆ ಮತ್ತು ಅದೇ ಪಾತ್ರಗಳಿಗಾಗಿ ಗೌರವಿಸುತ್ತಾರೆ. ಒಂದು ಸಮಾರಂಭದಲ್ಲಿ ಐಪಿಎಸ್‌ ಆಫೀಸರ್‌ಗಳು ಇದ್ದರು. ನಾನು ಹೋದಾಗ ಬಹಳ ಜನ ಮಾತಾಡಿಸಿದರು. ಆಗ ಐಪಿಎಸ್‌ ಆಫೀಸರ್‌ಗಳು ಹೇಳಿದ್ರು. ನೋಡಿ ನಾವು ಐಪಿಎಸ್‌ ಮಾಡಿದ್ದೀವಿ. ಯಾರೂ ನಮ್ಮನ್ನ ಕಂಡು ಹಿಡಿಯಲಿಲ್ಲ. ನಿಮ್ಮನ್ನ ಇಷ್ಟು ಜನ ಬಂದು ಮಾತಾಡಿಸಿದರಲ್ಲ, ಇದಕ್ಕಿಂತ ಸಾಧನೆ ಏನು ಬೇಕು ಅಂತ ಅವರೇ ಕೇಳಿದರು. ಎಷ್ಟು ಸರಿಯಾದ ಮಾತಲ್ವಾ? ಓದು ಬರಹ ಇಲ್ಲದ ಒಬ್ಬ ಸಣ್ಣ ಹಳ್ಳಿಯ ಹುಡುಗ, ಇವತ್ತು 45 ವರ್ಷಗಳ ಕಾಲ ಇಷ್ಟೊಂದು ಸಿನಿಮಾ ಮಾಡಿದ್ದೀನಿ, ಇನ್ನೂ ಚಿತ್ರರಂಗದಲ್ಲಿದ್ದೀನಿ ಅನ್ನೋದೇ ಖುಷಿಯ ವಿಚಾರವಲ್ವಾ?’ ಎನ್ನುತ್ತಾರೆ ಅವರು.

ಅಂದಹಾಗೆ, ಹೊನ್ನವಳ್ಳಿ ಕೃಷ್ಣಗೆ ಚಿತ್ರರಂಗಕ್ಕೆ ಹೋಗಬೇಕು, ನಟನಾಗಬೇಕು ಎನ್ನುವ ಯಾವ ಆಸೆಯೂ ಇರಲಿಲ್ಲವಂತೆ. ಇದ್ದಿದ್ದು ಒಂದೇ ಆಸೆ. ಅದು ಡಾ. ರಾಜಕುಮಾರ್‌ ಅವರನ್ನು ನೋಡಬೇಕು ಎಂದು. ರಾಜಕುಮಾರ್‌ ಬೆಂಗಳೂರಿನಲ್ಲಿರುತ್ತಾರೆ ಎಂದು ಹೊನ್ನವಳ್ಳಿಯಿಂದ ಹೊರಟು ಬೆಂಗಳೂರಿಗೆ ಬಂದಿದ್ದಾರೆ. ಅವರು ಇಲ್ಲಿಲ್ಲ, ಮದರಾಸಿನಲ್ಲಿದ್ದಾರೆ ಎಂದು ಗೊತ್ತಾದಾಗ, ಅಲ್ಲಿಗೆ ಹೋಗಿದ್ದಾರೆ. ಕೊನೆಗೆ ಅವರು ಗೋಲ್ಡನ್‌ ಸ್ಟುಡಿಯೋದಲ್ಲಿ ಚಿತ್ರೀಕರಣದಲ್ಲಿದ್ದಾರೆ ಅಂತ ಗೊತ್ತಾಯ್ತಂತೆ. “ಆಗ ಗೋಲ್ಡನ್‌ ಸ್ಟುಡಿಯೋದಲ್ಲಿ “ರೌಡಿ ರಂಗಣ್ಣ’ ಚಿತ್ರದ ಚಿತ್ರೀಕರಣ ನಡೆಯುತಿತ್ತು. ರಾಜಾಶಂಕರ್‌, ಚಂದ್ರಕಲಾ ಎಲ್ಲಾ ಇದ್ದರು. ಅಷ್ಟೊತಿಗೆ ರಾಜಣ್ಣ ಬಂದರು. 

ನಾನು ಹೋಗಿ ಅವರಿಗೆ ನಮಸ್ಕಾರ ಮಾಡಿದೆ. ನೋಡಿ, ಮಾತಾಡಿಸಿ, ಹೊರಡುತ್ತೀನಿ ಎಂದೆ. ಅವರು, ಬಾಪ್ಪಾ ಕಾಫಿ ಕುಡಿ ಎಂದರು. ನನಗೆ ಅದ್ಯಾವ ಆಸಕ್ತಿಯೂ ಇರಲಿಲ್ಲ. ಅವರನ್ನು ನೋಡಬೇಕಿತ್ತು, ನೋಡಿ ಹೊರಟುಬಿಟ್ಟೆ. ಅದಕ್ಕೆ ಕಾರಣಾನೂ ಇತ್ತು. ನಾನು ಸೈಕಲ್‌ನ ಆರಾಣೆಗೆ ಬಾಡಿಗೆ ಪಡೆದು ಅವರನ್ನು ನೋಡೋಕೆ ಹೋಗಿದ್ದೆ. ಸಮಯ ಮೀರುತಿತ್ತು. ಅಂಗಡಿಯವನ್ನು ಎಲ್ಲಿ ಜಾಸ್ತಿ ಕೇಳುತ್ತಾನೋ ಎಂಬ ಧಾವಂತ. ಅದೇ ಕಾರಣಕ್ಕೆ ಬೇಗ ಹೋಗಬೇಕು ಅಂತ ಹೊರಟೇಬಿಟ್ಟೆ’ ಎನ್ನುತ್ತಾರೆ ಹೊನ್ನವಳ್ಳಿ.
ಹೀಗೆ ಶುರುವಾದ ಡಾ. ರಾಜಕುಮಾರ್‌ ಅವರ ಗೆಳೆತನ, ನಂತರ ಅವರ ಚಿತ್ರಗಳಲ್ಲಿ ಸಹನಿರ್ದೇಶಕನಾಗಿ, ನಟನಾಗಿ, ಮನೆಯಲ್ಲಿ ಮತ್ತು ಆಫಿಸಿನಲ್ಲಿ ಒಬ್ಬರಾಗಿ ಇಷ್ಟು ದೂರ ಸಾಗಿ ಬಂದಿದ್ದಾರೆ. ಡಾ ರಾಜಕುಮಾರ್‌ ಅವರನ್ನು ಬಹಳವಾಗಿ ನೆನಪಿಸಿಕೊಳ್ಳುವ
ಕೃಷ್ಣ, “200 ಸಿನಿಮಾಗಳಲ್ಲಿ ಹೀರೋ ಆಗಿ ಮಾಡೋದು ಅಂದ್ರೆ ಸುಮ್ನೆನಾ? ಕೊನೆಯವರೆಗೂ ರಾಜಣ್ಣ ಅದೇ ತರಹ ಇದ್ದರು. ಇವತ್ತು ನೀವು ನೋಡಬೇಕು. ಒಂದು ಸಿನಿಮಾ ಮಾಡಿಲ್ಲ, ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ತಾನೆ. ಸ್ವಲ್ಪ ಯಶಸ್ಸು ಬಂದರೆ
ಮೈಮನ ಮರೀತಾರೆ. ಫೋನ್‌ ಬಿಟ್ಟರೆ ಪ್ರಪಂಚಾನೇ ಇಲ್ಲ ಅಂತಾಗಿದೆ. ಸದಾ ಫೋನ್‌ನಲ್ಲಿ ಇರ್ತಾರೆ ಕೆಲವರು. ಆಗ ಒಂದು ವಾರದ ಮುನ್ನವೇ ಡೈಲಾಗ್‌ ಶೀಟ್‌ ಕೊಡೋರು. ಎಲ್ಲರಿಗೂ ಅವತ್ತೇನು ಕೆಲಸ ಅಂತ ತಲೇಲಿ ತುಂಬಿರೋದು. ಈಗ ಸ್ಪಾಟ್‌ಗೆ
ಹೋದರೂ, ಅವತ್ತೇನು ಅಂತ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಬಹುಶಃ ಅದೇ ಕಾರಣಕ್ಕೆ ಆಗ ಚಿತ್ರಗಳು ಚೆನ್ನಾಗಿ ಬರೋದು. ಹಾಗಂತ ಈಗ ಚೆನ್ನಾಗಿಲ್ಲ ಅಂತಲ್ಲ. “ಕಿರಿಕ್‌ ಪಾರ್ಟಿ’ ಯಾಕೆ ಓಡ್ತು ಹೇಳಿ? ಮೊದಲು ಚಿತ್ರತಂಡದವರೆಲ್ಲಾ ಒಟ್ಟಿಗೆ ಕುಳಿತು ಚರ್ಚೆ ಮಾಡಬೇಕು. ವಾದ ಮಾಡಿದಾಗ ಒಂದಿಷ್ಟು ಒಳ್ಳೆಯದು ಹುಟ್ಟುತ್ತೆ’ ಎನ್ನುತ್ತಾರೆ ಹೊನ್ನವಳ್ಳಿ.

Advertisement

ಸುಮಾರು 40 ಚಿತ್ರಗಳಿಗೆ ಸಹನಿರ್ದೇಶಕರಾಗಿರುವ ಹೊನ್ನವಳ್ಳಿ, ಕೊನೆಗೆ ನಿ ರ್ದೇಶನ ಯಾಕೆ ಮಾಡಲಿಲ್ಲ? “ಅದೃಷ್ಟ
ಅದ್ಕೊಂದು ಅದರಿಷ್ಟ. ಅ ದು ನಮ್ಮಿಷ್ಟವಲ್ಲ. “ಶಿವ ಮೆಚ್ಚಿದ ಕಣ್ಣಪ್ಪ’ವರೆಗೂ ಪುನೀತ್‌ಗೊಸ್ಕರ ಸಹ ನಿರ್ದೇಶನ ಮಾಡಿ
ದೆ. ಆಮೇಲೆ ನಿಲ್ಲಿಸಿಬಿಟ್ಟೆ. ಅದಕ್ಕೂ ಮುಂಚೆಯೇ ನಾನು ಸಹನಿರ್ದೇಶನ ಬೇಡ ಅಂತ ಬಿಟ್ಟುಬಿಟ್ಟಿದ್ದೆ. ನಾನು ಗಂಧ ತೇಯುತ್ತಲೇ ಇದ್ದೆ. ಬಂದೋರೆಲ್ಲ ಹಚ್ಚಿಕೊಂಡ್ರೇ ವಿನಃ ನನಗೆ ಸಿಗಲೇ ಇಲ್ಲ. ಅದೇ ಕಾರಣಕ್ಕೆ ಸುಮ್ಮನಾಗಿಬಿಟ್ಟೆ. ಆಗ “ಬೆಟ್ಟದ ಹೂವು’ ಚಿತ್ರ ಶುರುವಾಗಬೇಕಿತ್ತು. ಮೈಸೂರಿನಿಂದ ಕರೆಸಿದರು ನನ್ನ. “ಬೆಟ್ಟದ ಹೂವು’ ಒಂದು ಮಾಡು ಎಂದರು. ಆ ಚಿತ್ರ ಯಶಸ್ವಿಯಾಯ್ತು. 
ಎನ್‌. ಲಕ್ಷ್ಮೀನಾರಾಯಣ್‌ ಅವರು ನನ್ನ ಸಹಕಾರ ನೆನೆದು ಒಂದು ಪತ್ರವನ್ನೂ ಬರೆದಿದ್ದರು. ನಾನು ಮುಂಚಿನಿಂದಲೂ ಅಷ್ಟೇ. ಇಷ್ಟು
ಹೇಳಿದರೆ, ಅಷ್ಟು ಮಾಡುತ್ತಿದ್ದೆ. ಎಲ್ಲರಿಂದ ಸೈ ಎನಿಸಿಕೊಳ್ಳಬೇಕು ಎಂಬ ಆಸೆ ಮುಂಚಿನಿಂದ. ಮಾಡಿದ ಕೆಲಸ ಜನ ಮೆಚ್ಚಬೇಕು, ಮೆಚ್ಚಿ ಚಪ್ಪಾಳೆ ತಟ್ಟಿದರೆ ಅದಕ್ಕಿಂತ ರೋಮಾಂಚನ ಸಿಗುವುದಿಲ್ಲ’ ಎಂದು ಮಾತು ಮುಗಿಸಿದರು ಹೊನ್ನವಳ್ಳಿ.

ಚೇತನ್‌

Advertisement

Udayavani is now on Telegram. Click here to join our channel and stay updated with the latest news.

Next