ಬೆಂಗಳೂರು: ಕದ್ದ ಚಿನ್ನಾಭರಣಗಳನ್ನು ಗುಜರಿಗೆ ಹಾಕಿದ್ದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಸುಬ್ರತೋ ಮಂಡಲ್(23) ಬಂಧಿತ. ಆರೋಪಿಯಿಂದ 7 ಲಕ್ಷ ರೂ. ಮೌಲ್ಯದ 130 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪಶ್ಚಿಮ ಬಂಗಾಳದಿಂದ 6 ತಿಂಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ನೌಕರಿ ಸಿಗದಿದ್ದರಿಂದ ಜೀವನ ನಿರ್ವಹಣೆಗಾಗಿ ಮನೆಗಳ ಮುಂದೆ ಮತ್ತು ಬೀದಿಗಳಲ್ಲಿ ಅಳವಡಿಸಿದ್ದ ಕಬ್ಬಿಣದ ನಲ್ಲಿಗಳನ್ನು ಕಳ್ಳತನ ಮಾಡಿ, ಅವುಗಳನ್ನು ಗುಜರಿಗೆ ಹಾಕಿ, ಬಂದ ಹಣದಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಹೀಗೆ 25ಕ್ಕೂ ಹೆಚ್ಚು ನಲ್ಲಿಗಳನ್ನು ಕಳವು ಮಾಡಿ ಮಾರಾಟ ಮಾಡಿದ್ದಾನೆ. ಮಾ.13ರಂದು ಯಶವಂತಪುರದ ಮತ್ತಿಕೆರೆಯ ಎಚ್‌ಎಂಟಿ ಲೇಔಟ್‌ನ ಮನೆ ಬಳಿ ಕಬ್ಬಿಣದ ನಲ್ಲಿ ಕಳ್ಳತನ ಮಾಡಲು ಹೋಗಿದ್ದಾನೆ. ಆಗ ಸಮೀಪದ ಮನೆ ಬಾಗಿಲು ತೆರೆದಿರುವುದನ್ನು ಗಮನಿಸಿ ಒಳಗೆ ನುಗ್ಗಿ ಬೀರು ಮತ್ತು ವಾಲ್ಡ್‌ರೂಬ್ ನಲ್ಲಿಟ್ಟಿದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
30 ಸಾವಿರ ರೂ.ಗೆ ಮಾರಾಟ: ಕದ್ದ ಚಿನ್ನಾಭರಣಗಳನ್ನು ಯಾವ ಅಂಗಡಿಯಲ್ಲಿ ಅಡಮಾನ ಇಡಬೇಕೆಂದು ಗೊತ್ತಾಗದೆ, ಕಬ್ಬಿಣದ ನಲ್ಲಿಗಳನ್ನು ಮಾರಾಟ ಮಾಡುತ್ತಿದ್ದ ಗುಜರಿ ಅಂಗಡಿಗೆ ಹೋಗಿ, ಚಿನ್ನಾಭರಣ ಕೊಟ್ಟಿದ್ದಾನೆ. ಗುಜರಿ ಮಾಲೀಕ 130 ಗ್ರಾಂ ಚಿನ್ನಾಭರಣ ಪಡೆದು ಕೇವಲ 30 ಸಾವಿರ ರೂ. ಕೊಟ್ಟು ಕಳುಹಿಸಿದ್ದಾನೆ. ಮನೆ ಕಳ್ಳತನವಾಗಿರುವ ಬಗ್ಗೆ ನಿಜೇಶ್ ಎಂಬುವರು ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಸ್ಥಳೀಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.
ಬಳಿಕ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಕದ್ದ ಚಿನ್ನಾಭರಣಗಳನ್ನು ಜಾಲಹಳ್ಳಿ ಕ್ರಾಸ್ ಬಳಿಯ ಗುಜರಿ ಅಂಗಡಿಗೆ ಹಾಕಿರುವುದಾಗಿ ತಿಳಿಸಿದ್ದಾನೆ. ಈತನ ಮಾಹಿತಿಯ ಮೇರೆಗೆ ಗುಜರಿ ಮಾಲೀಕನಿಂದ ಚಿನ್ನಾಭರಣಗಳನ್ನು ಜಪ್ತಿ ಮಾಡಿ, ಸುಬ್ರತೊ ಮಂಡಲ್‌ನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.