ಬೆಂಗಳೂರು: ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಗಡಿ ರಸ್ತೆಯ ಮುತ್ತೂಟ್ ಫೈನಾನ್ಸ್ ಕಂಪನಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಬರೋಬ್ಬರಿ 7 ಕೆ.ಜಿಗೂ ಅಧಿಕ ಚಿನ್ನದ ರಹಸ್ಯ ಭೇದಿಸಲು ಪೊಲೀಸರು, ಇಬ್ಬರು ಆರೋಪಿಗಳ ಮಂಪರು ಪರೀಕ್ಷೆ ನಡೆಸಿದ್ದಾರೆ.
ಪ್ರಕರಣದ ಆರೋಪಿಗಳಾದ ರವಿಶಂಕರ್ ಗೌಡ ಹಾಗೂ ಚಿರಂತ್‌ರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಗುಜರಾತ್‌ನ ಅಹ್ಮದ್‌ಬಾದ್‌ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಫೆ.25ರಿಂದ ಮಾ. 8ರವರೆಗೆ ಮಂಪರು ಪರೀಕ್ಷೆಗೆ ಒಳಪಡಿಸಲಾಗಿದೆ. ಮಂಪರು ಪರೀಕ್ಷೆಯ ವರದಿ ಬರಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಫೆ.25ರಂದು ನಡೆದ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಾದ ರವಿಶಂಕರ್ ಗೌಡ ಹಾಗೂ ಚಿರಂತ್‌ನನ್ನು ಬಂಧಿಸಲಾಗಿತ್ತು. ಮೂರುವರೆ ಕೆ.ಜಿ ಚಿನ್ನಾಭರಣ ಜಪ್ತಿ ಮಾಡಲಾಗಿತ್ತು. ಆದರೆ, ಆರೋಪಿಗಳು 12 ಕೆ.ಜಿಗೂ ಅಧಿಕ ಚಿನ್ನಾಭರಣ ಕದ್ದೊಯ್ದ ಆರೋಪವಿದೆ. ಹೀಗಾಗಿ, ಉಳಿದ ಚಿನ್ನಾಭರಣದ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿರಲಿಲ್ಲ. ಕದ್ದ ಚಿನ್ನಾಭರಣ ಎಲ್ಲಿಟ್ಟಿದ್ದಾರೆ ಎಂಬುದರ ಬಗ್ಗೆ ಗೊಂದಲದ ಹೇಳಿಕೆ ನೀಡುತ್ತಿದ್ದರು. ಹೀಗಾಗಿ , ಮಂಪರು ಪರೀಕ್ಷೆಗೆ ಗುರಿಪಡಿಸುವ ನಿರ್ಧಾರಕ್ಕೆ ಬರಲಾಯಿತು ಎನ್ನಲಾಗಿದೆ.
ಆರೋಪಿಗಳಿಬ್ಬರನ್ನು ಮಂಪರು ಪರೀಕ್ಷೆಗೆ ಗುರಿಪಡಿಸಲು ಅವಕಾಶ ನೀಡುವಂತೆ ಕೋರಿ ಬೆಂಗಳೂರು ಗ್ರಾಮಾಂತ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು, ಕೋರ್ಟ್ ಅನುಮತಿ ನೀಡಿತ್ತು. ಸದ್ಯ ಆರೋಪಿಗಳ ಮಂಪರು ಪರೀಕ್ಷೆಯ ವರದಿ ಬರಬೇಕಿದೆ. ಬಂದ ಬಳಿಕ ಉಳಿದ ಚಿನ್ನದ ಬಗ್ಗೆ ನಿಖರ ಮಾಹಿತಿ ಲಭ್ಯವಾಗುವ ವಿಶ್ವಾಸವಿದೆ ಹಿರಿಯ ಅಧಿಕಾರಿಗಳು ತಿಳಿಸಿದರು.
ದರೋಡೆ ಕೇಸ್‌ನಲ್ಲಿ ಅಪರೂಪ!: ಸಾಮಾನ್ಯವಾಗಿ ಕೊಲೆ ಸೇರಿದಂತೆ ಗಂಭೀರ ಅಪರಾಧ ಪ್ರಕರಣಗಳ ಆರೋಪಿಗಳನ್ನು ಅನಿವಾರ್ಯ ಸಂದರ್ಭಗಳಲ್ಲಿ ಸತ್ಯ ಬಾಯ್ಬಿಡಿಸುವ ಸಲುವಾಗಿ ಮಂಪರು ಪರೀಕ್ಷೆಗೆ ಗುರಿಪಡಿಸಲಾಗುತ್ತದೆ. ಕಳ್ಳತನ ಪ್ರಕರಣದಲ್ಲಿ ತೀರಾ ಅಪರೂಪ, ಆದರೆ, ಈ ಕೇಸ್‌ನಲ್ಲಿಯೂ ಅಗತ್ಯವಿದ್ದರಿಂದ ಗುರಿಪಡಿಸಲಾಗಿದೆ ಎಂದು ಅಧಿಕಾರಿ ಅಭಿಪ್ರಾಯ ಹಂಚಿಕೊಂಡರು.
ನಕಲಿ ಕೀ ಬಳಸಿ ದರೋಡೆ!: ಡಿ.25ರ ರಾತ್ರಿ ನಕಲಿ ಕೀಗಳನ್ನು ಬಳಸಿ ಮುತ್ತೂಟ್ ಫೈನಾನ್ಸ್ ಕಚೇರಿ ಪ್ರವೇಶಿಸಿದ್ದ ಆರೋಪಿಗಳು, ಸ್ಟ್ರಾಂಗ್ ರೂಂನಲ್ಲಿಯೇ ಮದ್ಯ, ಸಿಗರೇಟ್ ಸೇದಿ ಪಾರ್ಟಿ ಮಾಡಿದ್ದರು. ಬಳಿಕ ಲಾಕರ್ ತೆರೆದು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ತಮ್ಮ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಸಿಸಿಟಿವಿ ಡಿವಿಆರ್ ಅನ್ನು ಕದ್ದೊಯ್ದಿದ್ದರು. ಮಾರನೇ ದಿನ ಕಚೇರಿ ಸಿಬ್ಬಂದಿ ಬೀಗ ತೆಗೆಯಲು ಬಂದಾಗ ಕೃತ್ಯ ಬೆಳಕಿಗೆ ಬಂದಿತ್ತು.