ಮಣಿಪಾಲ: ಲಾಕ್‌ಡೌನ್ ವೇಳೆ ಇಳಿಕೆ ದಾರಿ ಹಿಡಿದಿದ್ದ ಹಳದಿ ಬಂಗಾರದ ದರ ಲಾಕ್ ಡೌನ್ ಬಳಿಕದ ದಿನಗಳಲ್ಲಿ ಏರುಗತಿಯತ್ತ ಸಾಗುತ್ತಿದೆ.
ಇದೀಗ ಮತ್ತೆ ಬುಧವಾರ ಚಿನ್ನದ ದರ ಗರಿಷ್ಠ ಮಟ್ಟಕ್ಕೇರುವ ಮೂಲಕ ದಾಖಲೆ ಬರೆದಿದ್ದು, ಬೆಳಗ್ಗೆ ಪ್ರತಿ ಹತ್ತು ಗ್ರಾಮ್ ಗೆ 48,333 ರೂ.ಗಳಿಗೆ ವಹಿವಾಟು ನಡೆದಿದೆ.
ಕಳೆದೆರೆಡು ತಿಂಗಳಲ್ಲಿ ಸುಮಾರು ಹತ್ತು ಸಾವಿರದಷ್ಟು ಏರಿಕೆ ಕಂಡಿರುವ ಚಿನ್ನ ಕಳೆದ ಮಾರ್ಚ್‌ನಲ್ಲಿ 10 ಗ್ರಾಮ್‌ಗೆ 38,500 ರೂ.ಗಳಷ್ಟು ಇದ್ದಿದ್ದು, ಈ ತಿಂಗಳು 48,333 ರೂ.ಗಳಿಗೆ ಏರುವ ಮೂಲಕ ಶೇ.25ರಷ್ಟು ಏರಿಕೆ ದಾಖಲಿಸಿದೆ.
ಇನ್ನು ಎಂಸಿ ಎಕ್ಸ್ ನಲ್ಲಿ ಜುಲೈ ತಿಂಗಳ ಬೆಳ್ಳಿಯ ದರ ಒಂದು ಕೇಜಿಗೆ 48,770 ರೂ.ಗಳಷ್ಟಿದ್ದು, ಯು.ಎಸ್.ನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗಿರುವುದರಿಂದ ಹೂಡಿಕೆದಾರರು ಚಿನ್ನದ ಮೇಲೆ ಹಣ ಹಾಕಲು ಆಸಕ್ತಿ ತೋರಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಜತೆಗೆ ಯು.ಎಸ್.- ಚೀನ ಮಧ್ಯೆ ಮತ್ತೆ ತಲೆದೋರಿರುವ ವ್ಯಾಪಾರ ಬಿಕ್ಕಟ್ಟು ಹಾಗೂ ದುರ್ಬಲವಾಗಿರುವ ಡಾಲರ್ ಕಾರಣಕ್ಕೆ ಚಿನ್ನದ ದರ ಗಗನಕ್ಕೇರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಚಿನ್ನದ ಬೆಲೆ 48,600ರಿಂದ 48,800ರೂ.ಗಳವರೆಗೆ ಹೆಚ್ಚಳವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.