Advertisement

ಮಾವಿನ ಮಿಡಿಗೆ ಬಂಗಾರ ಬೆಲೆ; ಹವಾಮಾನ ವೈಪರೀತ್ಯದಿಂದ ಇಳುವರಿ ಕುಂಠಿತ

03:59 PM May 22, 2023 | Team Udayavani |

ಕಾರ್ಕಳ: ಉಪ್ಪಿನಕಾಯಿ ಎಂದೊಡನೆ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಉಪ್ಪಿನಕಾಯಿ ಅನ್ನು ಇಷ್ಟಪಡದವರೇ ಇರಲಾರರು. ಅದರಲ್ಲೂ ಮಾವಿನ‌ಕಾಯಿ ಮಿಡಿ ಉಪ್ಪಿನಕಾಯಿ ಎಂದರೆ ಪಂಚಪ್ರಾಣ. ಅಂತಹ ಮಾವಿನ ಮಿಡಿಗೆ ಈ ಬಾರಿ ಭಾರೀ ಕೊರತೆ ಎದುರಾಗಿದೆ. ಮಾರುಕಟ್ಟೆಯಲ್ಲಿ ಮಿಡಿಗೆ ಬಂಗಾರ ಬೆಲೆ ಬಂದಿದೆ. ಎಷ್ಟೇ ಕಾಸು ಕೊಡುತ್ತೇವೆ ಎಂದರೂ ಮಿಡಿ ಸಿಗುತಿಲ್ಲ.

Advertisement

ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಾವು ಇಳುವರಿ ತೀರಾ ಕುಠಿತವಾಗಿದೆ. ವಾತಾವರಣದಲ್ಲಿನ ವೈಪರೀತ್ಯದಿಂದ ಮಾವಿನ ಮರಗಳು ಹೂ ಬಿಟ್ಟಿಲ್ಲ. ಮಿಡಿಯಷ್ಟೇ ಅಲ್ಲ ಮಾರುಕಟ್ಟೆಗಳಲ್ಲಿ ಹೊರ ರಾಜ್ಯದ ಮಾವುಗಳಿಗೆ ಈಗ ಬೇಡಿಕೆಯಿದೆ. ಸ್ಥಳೀಯ ಮಾವಿನ ಮಿಡಿಗಳು ಇಷ್ಟರಲ್ಲೇ ಅಧಿಕ ದರಕ್ಕೆ ಮಾರಾಟವಾಗಿವೆ. ಆದರೂ ಜನ ಮಿಡಿಗಾಗಿ ಹುಡುಕಾಡುತ್ತಿದ್ದಾರೆ. ಬೇಡಿಕೆಯ ಮಾವಿನ ಕಾಯಿಗಳು ಸಿಗದೇ ಮಾವು ಪ್ರಿಯರಿಗೆ ನಿರಾಶೆಯಾಗಿದೆ.

ಕೃಷಿಕರಿಗೆ ಭರ್ಜರಿ ಆದಾಯವನ್ನು ನೀಡುತ್ತಿದ್ದ ಮಾವಿನ ಬೆಳೆಯಲ್ಲಿ ಇಳುವರಿ ಕುಂಠಿತವಾಗಿದ್ದರಿಂದ ಆದಾಯದ ನಿರೀಕ್ಷೆಯಲ್ಲಿದ್ದ ರೈತರು ಹತಾಶೆಯಲ್ಲಿದ್ದಾರೆ. ಉಭಯ ಕರಾವಳಿ ಜಿಲ್ಲೆಗಳ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಮಾವಿನ ಇಳುವರಿಯಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಗಣನೀಯ ಪ್ರಮಾಣದಲ್ಲಿ ಕುಸಿತವಾಗಿರುವುದು. ಪ್ರಸಕ್ತ ವರ್ಷದಲ್ಲಿ ಹವಾಮಾನದಲ್ಲಿನ ಬದಲಾವಣೆಯ ಪರಿ ಣಾಮವಾಗಿ ಇಳುವರಿಯಲ್ಲಿ ಬಹುತೇಕ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಮಿಡಿ ಕಾಯಿಗೆ ದರ ದುಪ್ಪಟ್ಟು
ಗ್ರಾಮೀಣ ಭಾಗದಲ್ಲಿ ಮಾವಿನ ಕಾಯಿ ಭರ್ಜರಿ ಬೇಡಿಕೆಯಿಂದ ಅತ್ಯಧಿಕ ದರಗಳಿಗೆ ಮಾರಾಟವಾಗುತ್ತಿದೆ. ಕಾಟು ಮಾವಿನ ಮಿಡಿಗಳು ಒಂದಕ್ಕೆ 4ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದೆ. ಗ್ರಾಮೀಣ ಹಳ್ಳಿ ಪ್ರದೇಶದಲ್ಲಿ 500 ಮಾವಿನ ಮಿಡಿಗಳಿಗೆ 1,500ರಿಂದ 2,000 ರೂ. ತನಕದ ದರಕ್ಕೆ ಮಾರಾಟವಾದರೆ ಪಟ್ಟಣ, ನಗರ ಪ್ರದೇಶದಲ್ಲಿ ಸುಮಾರು 2 ಸಾವಿರದಿಂದ 2,500 ಸಾವಿರ ರೂ.ಗೆ ಮಾರಾಟವಾಗುತ್ತದೆ. ಹೆಚ್ಚು ಕ್ರಯ ನೀಡಿ ಖರೀದಿಸಲು ಖರೀದಿಗಾರರು ಎಷ್ಟೇ ಹಣ ಪಾವತಿಸಿ ಖರೀದಿಸಲು ಸಿದ್ಧರಿದ್ದರೂ ಮಿಡಿ ಸಿಗುತಿಲ್ಲ. ಪ್ರತಿ ವರ್ಷ ಮಾವಿನ ಮರಗಳಲ್ಲಿ ಹೂ ಬಿಟ್ಟು, ಮಿಡಿ ಕಟ್ಟುವ ಆರಂಭದ ಹೊತ್ತಲ್ಲಿ ಮಾವಿನ ಕಾಯಿಯನ್ನು ಕೀಳಿ ತಂದು ಸಂಗ್ರಹಿಸಿ ಉಪ್ಪಿನಕಾಯಿಯನ್ನು ತಯಾರಿಸುವ ಮಂದಿ ಈ ಬಾರಿ ಬೇಡಿಕೆಯ ಮಾವಿನ ಮಿಡಿಗಳು ಸಿಗದೆ ನಿರಾಸೆಗೊಂಡಿದ್ದಾರೆ. ಇದರಿಂದಾಗಿ ಕಾಟು ಮಾವಿನಕಾಯಿಗೆ ಮೊರೆ ಹೋಗಿದ್ದಾರೆ.

ಮಾವಿನಕಾಯಿ ಮಿಡಿ ಸಿಗದ ಹಿನ್ನೆಲೆಯಲ್ಲಿ ಬೇಡಿಕೆಗೆ ಮಣಿದು ಕಳೆದ ವರ್ಷ ಉಪ್ಪಿನಲ್ಲಿ ಹಾಕಿಟ್ಟ ಕಾಯಿಗಳು ಪ್ರಸ್ತುತ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಯಯಲ್ಲಿ ವಿವಿಧ ತಳಿಯ ಮಾವು ಮಾರುಕಟ್ಟೆಗೆ ಪ್ರವೇಶಿಸಿ, ಭರ್ಜರಿ ವ್ಯಾಪಾರವು ನಡೆಯುತ್ತಿದೆ. ಸ್ಥಳೀಯವಾಗಿ ಬೆಳೆಯುವ ಮಾವಿಗೆ ಭರ್ಜರಿ ಬೇಡಿಕೆ ಇದ್ದರೂ ಇಳುವರಿ ಕುಂಠಿತದಿಂದ ಬೇಡಿಕೆಯಷ್ಟು ಮಾವು ದೊರಕುತ್ತಿಲ್ಲ. ಜಿಲ್ಲೆಯ ಮಾರುಕಟ್ಟೆಗೆ ಬಹುತೇಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೇ ಮಾವುಗಳ ಪೂರೈಕೆಯಾಗುತ್ತದೆ. ದ.ಕ. ಹಾಗೂ ಉಡುಪಿ ಜಿಲ್ಲೆಯ ರೈತರು ಮಾವು ಬೆಳೆಯನ್ನು ಪ್ರಮುಖ ಆದಾಯ ಬೆಳೆಯಾಗಿ ಪರಿಗಣಿಸಿಲ್ಲ ಹೀಗಾಗಿ ಕೆಲವೇ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಮಾವು ಬೆಳೆಯನ್ನು ಬೆಳೆಯಲಾಗುತ್ತದೆ.

Advertisement

ಹಣ್ಣುಗಳಿಗೂ ಹೆಚ್ಚಿದ ಬೇಡಿಕೆ
ನಗರದ ಮಾರುಕಟ್ಟೆಯಲ್ಲಿ ರತ್ನಗಿರಿ, ರಸಪುರಿ, ಬೆನೆಟಾ ಅಪೂಸ್‌, ಬಾದಾಮಿ, ಮಲ್ಲಿಕಾ, ತೋತಾಪುರಿ, ಸಿಂಡುಲಾ, ಬೇನಿಶಾ, ಮುಂಡಪ್ಪ, ನೀಲಂ ಮೊದಲಾದ ಹಣ್ಣುಗಳು ಮಾರಾಟವಾಗುತ್ತಿದೆ. ಪ್ರಸ್ತುತ ಹಾಸನ, ಮಹಾರಾಷ್ಟ್ರ, ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಶ್ರೀನಿವಾಸ್‌ಪುರ, ಚಿಂತಾಮಣಿ, ಆಂಧ್ರಪ್ರದೇಶ, ಭಾಗದಿಂದ ಮಾವಿನ ಹಣ್ಣು ಉಡುಪಿ ಹಾಗೂ ದ.ಕ. ಜಿಲ್ಲೆಗಳ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ.

ಕಾರಣವೇನು?
ವಾತಾವರಣದಲ್ಲಿ ವಿಪರೀತ ಬದ ಲಾವಣೆ, ಇನ್ನೊಂದೆಡೇ ತಾಪಮಾನದಲ್ಲಿ ಏರಿಕೆ. ಮರದಲ್ಲಿ ಬಿಟ್ಟ ಹೂವುಗಳು ಸುಟ್ಟು ಹೋಗಿದೆ. ಕರಾವಳಿಯಲ್ಲಿ 40 ಡಿಗ್ರಿ ಅಧಿಕ ತಾಪಮಾನದ ತನಕ ಏರಿಕೆಯಾಗಿದ್ದು, ಇದು ಮಾವು ಬೆಳೆಗೆ ಹೊಡೆತ ನೀಡಿದೆ. ಇಳುವರಿಯಲ್ಲಿ ಗಣನೀಯ ಪ್ರಮಾಣದಲ್ಲಿ ಕುಂಠಿತವಾಗಿದೆ. ಮಾವು ಕೊರತೆಯಿಂದ ಮುಂದಿನ ದಿನಗಳಲ್ಲಿ ದರಮತ್ತಷ್ಟೂ ಏರಿಕೆಯಾಗುವ ಮುನ್ಸೂಚನೆಗಳು ದೊರಕಿವೆ.

ಮರಗಳು ಪೂರ್ಣವಾಗಿ ಹೂ ಬಿಟ್ಟಿಲ್ಲ!
ವಾತಾವರಣದಲ್ಲಿ ಹವಾಮಾನದ ವೈಪರೀತ್ಯದಿಂದ ಇಳುವರಿಗೆ ಹೊಡೆತ ನೀಡಿದೆ.ಗಣನೀಯ ಪ್ರಮಾಣದಲ್ಲಿ ಇಳುವರಿ ಈ ಬಾರಿ ಕುಂಠಿತಗೊಂಡಿದೆ. ಈ ಬಾರಿ ಹಲವು ಮರಗಳು ಈವರೆಗೂ ಹೂವು ಬಿಟ್ಟಿಲ್ಲ
-ಶ್ರೀನಿವಾಸ್‌, ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ

– ಬಾಲಕೃಷ್ಣ ಭೀಮಗುಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next