ಸಂಕೇಶ್ವರ (ಬೆಳಗಾವಿ): ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಚಿನ್ನ ಅಪಹರಣ ಪ್ರಕರಣದಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯಾಗಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಜಪ್ತಿ ಮಾಡಿ ಇಟ್ಟಿದ್ದ ಕಾರಿನಲ್ಲಿಯ 4 ಕೆ.ಜಿ. 900 ಗ್ರಾಂ. ಚಿನ್ನ ಎಗರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್ ಪಿನ್ ಕಿರಣ ವೀರಣಗೌಡ ಎಂಬಾತನನ್ನು ಸಂಕೇಶ್ವರ ಪೊಲೀಸರು ಸೋಮವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ಜಾಡು ಹಿಡಿದಿರುವ ಪೊಲೀಸರು ಕಿರಣ ವೀರನಗೌಡನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ. ಸಿಐಡಿ ಪೊಲೀಸರು ಕೂಡಾ ಠಾಣೆಯಲ್ಲಿ ಮೊಕ್ಕಾಂ ಹೂಡಿ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬೆಳಗ್ಗೆಯಿಂದಲೂ ಆರೋಪಿಯ ವಿಚಾರಣೆಯಲ್ಲಿ ತೊಡಗಿರುವ ಸಿಐಡಿ ಪೊಲೀಸರು, ಚಿನ್ನ ಎಗರಿಸಿದ್ದು ಯಾರು ಎಂಬ ಮಹಿತಿ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಂಕೇಶ್ವರದಲ್ಲಿಯೇ ಹಣ ಡೀಲ್ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಸಂಕೇಶ್ವರ ಠಾಣೆಯಲ್ಲಿಯೇ ಸಿಐಡಿ ಪೊಲೀಸರು ದೂರು ನೀಡಿದ್ದರು. ಅದರಂತೆ ಕಿರಣನನ್ನು ವಶಕ್ಕೆ ಪಡೆದುಕೊಂಡು ಸಂಕೇಶ್ವರಕ್ಕೆ ಕರೆ ತಂದಿದ್ದಾರೆ. ಆದರೆ ಈ ಬಗ್ಗೆ ಮಾಹಿತಿ ನೀಡಲು ಸಂಕೇಶ್ವರ ಪೊಲೀಸರು ನಿರಾಕರಿಸಿದ್ದಾರೆ.
ಇದನ್ನೂ ಓದಿ:ಭಿಕ್ಷೆ ಬೇಡಿ ಮಂತ್ರಿಯಾದವರು ಯಡಿಯೂರಪ್ಪ ಬಗ್ಗೆ ಮಾತನಾಡುತ್ತಾರೆ: ರೇಣುಕಾಚಾರ್ಯ ಕಿಡಿ
2021ರ ಜ. 9ರಂದು ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಹೊರಟಿದ್ದ ಕಾರು ತಪಾಸಣೆ ಮಾಡುವಂತೆ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಸೂಚನೆ ನೀಡಿದ್ದರು. ಅದರಂತೆ ಯಮಕನಮರಡಿ ಠಾಣೆ ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಕಾರು ತಡೆದು ತಪಾಸಣೆ ನಡೆಸಿದ್ದರು. ಮಂಗಳೂರಿನ ಉದ್ಯಮಿಗೆ ಸೇರಿದ್ದ ಈ ಅರ್ಟಿಗಾ ಕಾರಿನಲ್ಲಿ ಮಾರ್ಪಾಡುಗಳನ್ನು ಮಾಡಿ ಕಳ್ಳ ಬಾಕ್ಸ್ ಗಳನ್ನು ಮಾಡಲಾಗಿತ್ತು. ಹೀಗಾಗಿ ಆರ್‌ಟಿಒ ನಿಯಮ ಉಲ್ಲಂಘಿಸಿದ್ದಕ್ಕೆ ಕಾರು ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿತ್ತು. ಕೇಸು ದಾಖಲಿಸಿ ಕೋರ್ಟಿನಿಂದ ಕಾರು ಬಿಡಿಸಿಕೊಳ್ಳುವಂತೆ ಮಾಲೀಕರಿಗೆ ಪೊಲೀಸರು ತಿಳಿಸಿದ್ದರು.
ಆದರೆ ಕಾರಿನ ಏರ್ ಬ್ಯಾಗ್‌ನಲ್ಲಿದ್ದ 4 ಕೆ.ಜಿ. 900 ಗ್ರಾಂ. ಚಿನ್ನ ಪತ್ತೆ ಆಗುವುದಿಲ್ಲ. ಚಿನ್ನ ಇದೆ ಎಂಬುದು ಪಿಎಸ್‌ಐಗೂ ಗೊತ್ತಿರುವುದಿಲ್ಲ. ಕಾರಿನ ಮಾಲೀಕರು ಕಾರು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಕಾರು ಬಿಡಿಸಲು ಪ್ರಕರಣದ ಕಿಂಗ್ ಮಾಸ್ಟರ್ ಕಿರಣ ವೀರನಗೌಡ ಎಂಬ ಮಧ್ಯವರ್ತಿಯನ್ನು ಸಂಪರ್ಕಿಸಿ 30 ಲಕ್ಷ ರೂ.ಗೆ ಡೀಲ್ ಕುದುರಿಸುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕಿರಣನನ್ನು ವಶಕ್ಕೆ ಪಡೆಯಲಾಗಿದ್ದು, ಚಿನ್ನ ಎಗರಿಸಿದ್ದು ಯಾರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಬೆಳಗ್ಗೆಯಿಂದ ವಿಚಾರಣೆ ನಡೆದಿದ್ದು, 3-4 ಸಿಐಡಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.