ಮಂಗಳೂರು: ಹೊಸದಿಲ್ಲಿಯಲ್ಲಿ ಶನಿವಾರ ಜರಗಿದ ವಾರ್ಷಿಕ ಎನ್‌ಸಿಸಿ ರ್ಯಾಲಿಯಲ್ಲಿ ಭಾಗವಹಿಸಿದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿನ ಎನ್‌ಸಿಸಿ ನೌಕಾದಳದ ಕೆಡೆಟ್ ಆಶ್‌ನಾ ರೈ ಅವರು ಅ. ಭಾ. ಮಟ್ಟದ ಅತ್ಯುತ್ತಮ ಕೆಡೆಟ್ ಅವಾರ್ಡ್ (ಚಿನ್ನದ ಪದಕ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸ್ವೀಕರಿಸಿದರು.
ಆಶ್‌ನಾ ರೈ ಅವರು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೇ ಅವರಿಗೆ ಎನ್‌ಸಿಸಿ ಸೇರಬೇಕೆಂಬ ಆಸಕ್ತಿ. ಕೆನರಾ ಸಿಬಿಎಸ್‌ಇ ಶಾಲೆಯಲ್ಲಿ ಎಂಟನೇ ತರಗತಿ ಕಲಿಯುತ್ತಿರುವಾಗ ಎನ್‌ಸಿಸಿಗೆ ಸೇರಿದ್ದರು. ಬಳಿಕ ಇದೇ ಕ್ಷೇತ್ರದಲ್ಲಿ ಮುಂದುವರಿದಿದ್ದರು. ಈ ಹಿಂದೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆದ ಆಯ್ಕೆ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ ಎನ್‌ಸಿಸಿ ರ್ಯಾಲಿಗೆ ಆಯ್ಕೆಯಾಗಿದ್ದರು. ಈ ಸಾಧನೆಗೆ ಮಾಜಿ ಎನ್‌ಸಿಸಿ ಕೆಡೆಟ್‌ಗಳಾದ ಅನೀಶ್ ರಾಹುಲ್, ಅತಿಕ್ ಡಿ.ಬಿ., ರೂಪಿತ್ ಡಿ’ಸೋಜಾ ಮತ್ತು ಮನೀಶ್ ಅವರು ಸಹಕಾರ ಮತ್ತು ವಿಂಗ್ ಕಮಾಂಡರ್ ಚಂದನ್ ಗರ್ಗ್, ಆಲ್ವಿನ್ ಮಿಸ್ಕಿತ್ ಅವರ ಮಾರ್ಗದರ್ಶನ ಕಾರಣ. ಆಶ್‌ನಾ ರೈ ಅವರು ಮಂಗಳೂರಿನ ಕದ್ರಿ ಕಂಬಳದ ಉದ್ಯಮಿ ರಾಮಣ್ಣ ರೈ ಮತ್ತು ಶಿಕ್ಷಕಿ ಅಕ್ಷತಾ ರೈ ದಂಪತಿ ಪುತ್ರಿ.
ಇದನ್ನೂ ಓದಿ: ಕ್ಷತ್ರಿಯ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ: ಸಿಎಂ ಭರವಸೆ