ಕಿನ್ನಿಗೋಳಿ: ಇಲ್ಲಿನ ಬಳ್ಕುಂಜೆ ನೀರಳಿಕೆಯ ಮನೆಯೊಂದಕ್ಕೆ ಕಳ್ಳರು ನುಗ್ಗಿ ನಗ ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ.
ಬಳ್ಕುಂಜೆ ನೀರಳಿಕೆ ನಿವಾಸಿ ಶೇಖಬ್ಬ ಪತ್ನಿ ಮತ್ತು ಮಕ್ಕಳು ರಾತ್ರಿ ಮನೆಯ ಎದುರು ಭಾಗದ ಚಾವಡಿಯಲ್ಲಿ ಮಲಗಿದ್ದು ಕಳ್ಳರು ಹಿಂಭಾಗದ ಬಾಗಿಲಿನ ಚಿಲಕವನ್ನು ಒಡೆದು ಮನೆಯ ಒಳಗೆ ಪ್ರವೇಶಿಸಿ ಕಬ್ಬಿಣದ ಕಪಾಟನ್ನು ಜಾಲಾಡಿ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 5 ಸಾವಿರ ರೂ. ನಗದು ಕಳವು ಮಾಡಿದ್ದಾರೆ
ಆ ಬಳಿಕ ಮನೆ ಎದುರು ಭಾಗದ ತೋಟದಲ್ಲಿ ವ್ಯಾನಿಟಿ ಬ್ಯಾಗ್ ಹಾಗೂ ಕಳವು ಮಾಡಿದ ಆಭರಣಗಳ ಪೆಟ್ಟಿಗೆ ಬಿಸಾಡಿದ್ದು ಪೊಲೀಸರಿಗೆ ಸಿಕ್ಕಿದೆ.
ಕಳವು ನಡೆದ ಕೋಣೆಯ ಬದಿಯಲ್ಲಿ ಇನ್ನೊಂದು ಕೋಣೆಯಲ್ಲಿದ್ದ ಕಬ್ಬಿಣದ ಕಪಾಟಿನ ಬೀಗ ತೆಗೆಯಲು ಪ್ರಯತ್ನಿಸಿದ್ದು ಬೀಗದ ಕೀ ಸಿಗದ ಕಾರಣ ಆಗಿಲ್ಲ. ಮುಂಜಾನೆ 4.30ಕ್ಕೆ ಶೇಖಬ್ಬ ಅವರ ಪುತ್ರಿ ಶೌಚಾಲಯಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ.
ಈ ನಡುವೆ ಕಳ್ಳರು ಇದೇ ಪರಿಸರದ ವಿಜಿತ್ ಶೆಟ್ಟಿ ಅವರ ಮನೆಯ ಕಿಟಿಕಿ ಬದಿಯಲ್ಲಿಟ್ಟಿದ್ದ ಮಹಿಳೆಯ ವ್ಯಾನಿಟ್ ಬ್ಯಾಗ್‌ನಲ್ಲಿದ್ದ ಹಣವನ್ನು ಕಳವು ಮಾಡಿದ್ದಾರೆ. ಯಾರೋ ಗೊತ್ತಿದ್ದವರೇ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದ್ದು ಸ್ಥಳಕ್ಕೆ ಬೆರಳಚ್ಚು ತಜ್ಜರು, ಶ್ವಾನ ದಳ, ಮೂಲ್ಕಿ ಪೊಲೀಸ್ ಇನ್‌ಸ್ಪೆಕ್ಟರ್ ವಿದ್ಯಾಧರ್, ಜಾಗತಿಕ ಬಂಟರ ಸಂಘದ ಒಕ್ಕೂಟದ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾಂಗ್ರೆಸ್ ನಾಯಕ ಶಾಹುಲ್ ಹಮೀದ್ ಬಜ್ಪೆ ಭೇಟಿ ನೀಡಿದ್ದಾರೆ.