Advertisement

ಬದನೆ ಎಂಬ ಬಂಗಾರ

11:42 AM Nov 13, 2017 | |

ಎಲ್ಲಾ ಋತುಗಳಲ್ಲೂ, ಎಲ್ಲಾ ಬಗೆಯ ಮಣ್ಣಿನಲ್ಲೂ ಬೆಳೆಯಬಹುದಾದ ತರಕಾರಿ ಬದನೆ. ನೆಟ್ಟು ಎರಡೂವರೆ ತಿಂಗಳಲ್ಲಿ ಇದು ಇಳುವರಿ ನೀಡುತ್ತದೆ. ಮಂಡ್ಯ ತಾಲೂಕಿನ ಬೆಳಗೊಳ ಗ್ರಾಮದ ಚಂದ್ರಪ್ಪರವರು ಕಳೆದ ಐದು ವರ್ಷಗಳಿಂದ ಬದನೆ ಬೆಳೆಯುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲೇ ಬದನೆ ಬೆಳೆಯುವ ಇವರು, ಆರಂಭದಲ್ಲಿ ನರ್ಸರಿಯಿಂದ  ಒಂದು ಸಸಿಗೆ 1ರೂ. ನಂತೆ ನೀಡಿ ಗಿಡಗಳನ್ನು ತಂದಿದ್ದಾರೆ. 

Advertisement

ಇದರ ನಾಟಿ ತುಂಬಾ ಸುಲಭ. ಗದ್ದೆಗೆ ಕೊಟ್ಟಿಗೆ ಗೊಬ್ಬರ ಹಾಕಿ ಏರು ಪದ್ಧತಿ ವಿಧಾನದಲ್ಲಿ ನಾಟಿ ಮಾಡಿದ್ದಾರೆ. ಬದನೆ ಗಿಡವು ಎರಡು ವರ್ಷಗಳವರೆಗೆ ಇಳುವರಿ ನೀಡುತ್ತದೆ ಎನ್ನುವ ಚಂದ್ರಪ್ಪ, ಗಿಡದಿಂದ ಗಿಡಕ್ಕೆ ಮೂರು ಅಡಿ, ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರ ಬಿಟ್ಟು ಹದಿನೈದು ಗುಂಟೆಯಲ್ಲಿ 1,500 ಬದನೆ ಗಿಡಗಳನ್ನು ನೆಟ್ಟಿದ್ದಾರೆ. ನೆಟ್ಟು ಹದಿನೈದು ದಿನಗಳ ನಂತರ ಇಳುವರಿ ಲಭ್ಯ.

ಒಂದು ವರ್ಷದ ಹಿಂದೆ ಬಿತ್ತಿದ ಗಿಡಗಳು ಇದೀಗ ಮೂರು ದಿನಕ್ಕೊಂದು ಬಾರಿ ಇಳುವರಿ ನೀಡುತ್ತಿವೆ. ಒಮ್ಮೆ ಕಟಾವು ಮಾಡುವಾಗ ಮೂರು ಕ್ವಿಂಟಾಲ್‌ ಬದನೆ ದೊರೆಯುತ್ತಿದೆ. ಕೆ.ಜಿ.ಗೆ  30-ರಿಂದ 35 ರವರೆಗೆ ಬೆಲೆ ಇದೆ. ದಿನಕ್ಕೆ ಹೆಚ್ಚಾ ಕಡಿಮೆ ಮೂರು ಸಾವಿರ ಆದಾಯ. ತಿಂಗಳಿಗೆ ಹೆಚ್ಚಾ ಕಡಿಮೆ ಮೂವತ್ತು ಸಾವಿರ ಆದಾಯ ದೊರೆಯುತ್ತಿದೆ. ಚಂದ್ರಪ್ಪ ತಾವು ಬೆಳೆದ ಬದನೆಯನ್ನು ಮಂಡ್ಯ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತಿದ್ದಾರೆ.

ಹಿಂದೆ ಕಬ್ಬು, ಟೊಮೆಟೊ ಬೆಳೆಯುತ್ತಿದ್ದ ಜಮೀನಿನಲ್ಲಿ ಇದೀಗ ಬದನೆ ಭರಪೂರ ಇಳುವರಿ ನೀಡುತ್ತಿದೆ. ಇತರ ತರಕಾರಿಗಳಿಗೆ ಹೋಲಿಸಿದರೆ ಬದನೆಗೆ ರೋಗ ಬಾಧೆಗಳು ಕಡಿಮೆ. ಗದ್ದೆಯಲ್ಲಿ ನೀರಿನಂಶ ಇರುವುದರಿಂದ ವಾರದಲ್ಲೊಂದು ಬಾರಿ ಒಂದು ದಿನ ಪೂರ್ತಿ ನೀರು ನೀಡಿದರೆ ಸಾಕಾಗುತ್ತದೆ. ವರ್ಷದಲ್ಲಿ ಎರಡರಿಂದ ಮೂರು ಬಾರಿ ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಿದ್ದಾರೆ.

ಸಾವಯವ ಪದ್ಧತಿಯಲ್ಲಿ ಬೆಳೆದರೆ ರೋಗಗಳು ಬಾಧಿಸುವುದು ಅಪರೂಪ. ಮಾರುಕಟ್ಟೆಯಲ್ಲಿ ಎಲ್ಲಾ ಋತುಗಳಲ್ಲೂ ಬದನೆಗೆ ಬೇಡಿಕೆ ಇದ್ದೇ ಇರುತ್ತದೆ. ಇತರ ತರಕಾರಿಗಳಿಗೆ ಹೋಲಿಸಿದರೆ ಆಗಾಗ ಕಳೆ ತೆಗೆಯುವ, ಔಷಧ ಸಿಂಪಡಿಸುವ ಕೆಲಸವೂ ಕಡಿಮೆ. ಕಟಾವು ಕೂಡಾ ಸುಲಭ. ಇವರು ಹೆಚ್ಚಿನ ಕೆಲಸಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಮಂಜುನಾಥ ಸ್ವಾಮಿ’ ಪ್ರಗತಿಬಂಧು ತಂಡದ ಮೂಲಕ ಮಾಡಿ ಮುಗಿಸುತ್ತಾರೆ. 

Advertisement

* ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next