Advertisement

ಅಪಘಾತದ ಗಾಯಾಳುಗಳ ಚಿನ್ನ ದೋಚಿದವನ ಸೆರೆ

11:35 AM Nov 29, 2017 | Team Udayavani |

ಬೆಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಸಹಾಯ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರ ನಿವಾಸಿ ಕಾರು ಚಾಲಕ ಸೋಮಶೇಖರ್‌ ಬಂಧಿತ. ಈತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Advertisement

ಆರೋಪಿ ನ.3ರಂದು ಕುಣಿಗಲ್‌ ರಸ್ತೆಯ ಅಮೃತ್ತೂರು ಠಾಣೆ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಬಳಿ ವೇಣುಗೋಪಾಲ ಎಂಬುವರ ಇನೋವಾ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಈ ವೇಳೆ ತನ್ನ ಸ್ನೇಹಿತರ ಜತೆ ಗಾಯಾಳುಗಳ ನೆರವಿಗೆ ಬಂದಿದ್ದ ಆರೋಪಿ, ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯರ ಸರ ಹಾಗೂ ಪುರುಷರ ಬ್ರಾಸ್‌ಲೆಟ್‌, ಉಂಗುರ ಸೇರಿದಂತೆ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ.3ರಂದು ಚನ್ನರಾಯಪಟ್ಟಣದಿಂದ ನಗರಕ್ಕೆ  ವೇಣುಗೋಪಾಲ್‌  ಕುಟುಂಬ ಕಾರಿನಲ್ಲಿ ಬರುತ್ತಿದ್ದಾಗ ಕುಣಿಗಲ್‌ ರಸ್ತೆ ಬಳಿ ನಡೆದ ಲಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ  ಸ್ನೇಹಿತರೊಂದಿಗೆ ಪ್ರವಾಸ ಮುಗಿಸಿ ಟೆಂಪೊ ಟ್ರಾವೆಲರ್‌ನಲ್ಲಿ ಬರುತ್ತಿದ್ದ ಸೋಮಶೇಖರ್‌ ಗಾಯಾಳುಗಳಿಗೆ ನೆರವಾಗುವ ನೆಪದಲ್ಲಿ 288.03 ಗ್ರಾಂ. ಚಿನ್ನಾಭರಣ ದೋಚಿ, ಕೆಲ ದಿನಗಳ ಕಾಲ ಆಭರಣಗಳನ್ನು ಮನೆಯಲ್ಲಿ ಇರಿಸಿಕೊಂಡಿಸಿದ್ದ. ಈ ವಿಷಯ ಆತನ ಜೊತೆಗಿದ್ದ ಸ್ನೇಹಿತರಿಗೂ ತಿಳಿದಿರಲಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಗಿರಿವಿ ಇಡುವಾಗ ಸಿಕ್ಕಿಬಿದ್ದ: ಸುಮಾರು 23 ದಿನಗಳ ಕಾಲ ಆಭರಣಗಳನ್ನು ಮನೆಯಲ್ಲೇ ಇರಿಸಿಕೊಂಡಿದ್ದ ಆರೋಪಿ, ನ.26ರಂದು ಹುಣಸೆಮಾರನಹಳ್ಳಿಯಲ್ಲಿರುವ ಗಿರವಿ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಗಿರವಿ ಇಡಲು ಮುಂದಾಗಿದ್ದ. ಈ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಆರೋಪಿ ಸಿಕ್ಕಿ ಬಿದಿದ್ದಾನೆ. ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next