Advertisement

ಅಭೌತಿಕ ರೂಪದಲ್ಲಿ ಚಿನ್ನ ಖರೀದಿ,ಕಳ್ಳರ ಕಾಟವೂ ಇಲ್ಲ;ಟ್ರೇಡಿಂಗ್ ಸುಲಭ

12:30 AM Feb 11, 2019 | udayavani editorial |

ಗೋಲ್ಡ್ ಇಟಿಎಫ್ ಸ್ಕೀಮಿನಡಿ ಚಿನ್ನವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಅಭೌತಿಕ ರೂಪದಲ್ಲಿ ಖರೀದಿಸಲಾಗುವುದರಿಂದ ಅತ್ಯಂತ ಕಡಿಮೆ ಪ್ರಮಾಣದ ಚಿನ್ನವನ್ನು, ಶುದ್ಧತೆ – ತೂಕಕ್ಕೆ ಮೋಸವಿಲ್ಲದೆ ಅತ್ಯಂತ ಪಾರದರ್ಶಕ ವಹಿವಾಟಿನ ಮೂಲಕ ಕೊಳ್ಳಬಹುದಾಗಿದೆ. 

Advertisement

ಚಿನ್ನವನ್ನು ಆನ್‌ಲೈನ್‌ ನಲ್ಲಿ  ಅಭೌತಿಕ ರೂಪದಲ್ಲಿ ಖರೀದಿಸುವ ಪ್ರಕ್ರಿಯೆಯನ್ನು ನಾವು ಗೋಲ್ಡ್ ಇಟಿಎಫ್ ಎಂದು ಕರೆಯುತ್ತೇವೆ. ಜನಸಾಮಾನ್ಯರಿಗೆ ಆನ್‌ಲೈನ್‌ ನಲ್ಲಿ  ಅಭೌತಿಕ ರೂಪದಲ್ಲಿ ಚಿನ್ನವನ್ನು ಖರೀದಿಸುವ ಸೌಕರ್ಯದ ಬಗ್ಗೆ ಅಷ್ಟಾಗಿ ತಿಳಿಯದಿರುವುದಕ್ಕೆ ಹಲವಾರು ಕಾರಣಗಳಿವೆ.

ಮೊದಲನೇಯದಾಗಿ ಆನ್‌ಲೈನ್‌ ವ್ಯವಹಾರಕ್ಕೆ ಕಂಪ್ಯೂಟರ್, ಸ್ಮಾರ್ಟ್ ಪೋನ್ ಬೇಕು; ಎರಡನೇಯದಾಗಿ ಇಂಟರ್ನೆಟ್ ಬೇಕು; ಮೂರನೇಯದಾಗಿ ಬ್ಯಾಂಕ್ ಉಳಿತಾಯ ಕಡ್ಡಾಯವಾಗಿ ಇರಬೇಕು; ನಾಲ್ಕನೇಯದಾಗಿ ಒಂದು ಡಿಮ್ಯಾಟ್ ಖಾತೆ ಇರಬೇಕು. 

ಇವೆಲ್ಲ ಜಂಜಾಟಕ್ಕಿಂತ ನೇರವಾಗಿ ಚಿನ್ನಾಭರಣಗಳ ಮಳಿಗೆಗೆ ಹೋಗಿ ಅಲ್ಲಿ ಚಿನ್ನ ಅಥವಾ ಚಿನ್ನಾಭರಣ ಖರೀದಿಸುವುದೇ ಸುಲಭವಲ್ಲವೇ ? ಎಂಬ ಪ್ರಶ್ನೆ ಜನಸಾಮಾನ್ಯರಿಗೆ ಎದುರಾಗುವುದು ಸಹಜವೇ. ಅದು ತಪ್ಪಲ್ಲ. ಯಾವುದು ಸುಲಭವೋ ಅದನ್ನು ಶೀಘ್ರವೇ ಮಾಡುವುದು ಲಾಭಕರ ಎಂಬ ಅಭಿಪ್ರಾಯ ಜನರಲ್ಲಿ ಇರುತ್ತದೆ. 

ಆದರೂ ಈ ಡಿಜಿಟಲ್ ಜಮಾನಾದಲ್ಲಿ ಇಂಟರ್ನೆಟ್/ಕಂಪ್ಯೂಟರ್/ಸ್ಮಾರ್ಟ್ ಫೋನ್ ಬಳಕೆ ಒಗ್ಗಿತೆಂದರೆ ಅದುವೇ ಅತ್ಯಂತ ಸುಲಭ ವ್ಯಾವಹಾರಿಕ ಮಾರ್ಗ ಎಂಬ ಅಭಿಪ್ರಾಯ ಬರುವುದು ನಿಶ್ಚಿತ.

Advertisement

ಆದುದರಿಂದ ಚಿನ್ನವನ್ನು ಅಭೌತಿಕ ರೂಪದಲ್ಲಿ ಆನ್‌ಲೈನ್‌ ಮೂಲಕ ಖರೀದಿಸುವುದರಲ್ಲಿ ಇರುವ ಸೌಕರ್ಯ ಮತ್ತು ಲಾಭವನ್ನು ನಾವು ಮನದಟ್ಟು ಮಾಡಿಕೊಳ್ಳುವುದು ವಿವೇಕಯುತವೇ ಆಗಿರುತ್ತದೆ. ಅಂತೆಯೇ ನಾವು ಆ ಸೌಕರ್ಯ ಮತ್ತು ಲಾಭಗಳು ಯಾವುವು ಎಂಬುದನ್ನು ಇಲ್ಲಿ ಪರಿಶೀಲಿಸೋಣ : 

1. ಚಿನ್ನ ಖರೀದಿ – ಮಾರಾಟದ ಪ್ರಮಾಣ : ಭೌತಿಕ ರೂಪದಲ್ಲಿ ಖರೀದಿಸುವ ಚಿನ್ನ ಸಾಮಾನ್ಯವಾಗಿ ಸ್ಟಾಂಡರ್ಡ್ ಡಿನಾಮಿನೇಶನ್  ಅಥವಾ ನಿಗದಿತ ಪ್ರಮಾಣದಲ್ಲಿ ಲಭ್ಯವಿರುತ್ತದೆ. ಈ ರೀತಿಯ ನಿರ್ದಿಷ್ಟ ಪ್ರಮಾಣದಲ್ಲಿ ಚಿನ್ನ ಖರೀದಿಸುವುದಕ್ಕೆ ಭಾರೀ ಮೊತ್ತದ ಹೂಡಿಕೆ ಅಗತ್ಯವಿರುತ್ತದೆ.

ಆದರೆ ಗೋಲ್ಡ್ ಇಟಿಎಫ್ ನಲ್ಲಿ ಅತ್ಯಂತ ಸಣ್ಣ ಪ್ರಮಾಣದ ಚಿನ್ನವನ್ನೂ ಅಭೌತಿಕವಾಗಿ ಖರೀದಿಸುವುದಕ್ಕೆ ಅವಕಾಶ ಇರುತ್ತದೆ ಮತ್ತು ಇದಕ್ಕೆ ಅಲ್ಪ ಪ್ರಮಾಣದ ಹೂಡಿಕೆಯು ಸಾಕಾಗುತ್ತದೆ. ಅಥವಾ ನಮ್ಮಲ್ಲಿರುವಷ್ಟು  ಮೊತ್ತದ ಹಣದೊಳಗೆ ಲಭ್ಯವಿರುವ ಚಿನ್ನವನ್ನು ಖರೀದಿಸಬಹುದಾಗಿರುತ್ತದೆ. 

2. ದಾಸ್ತಾನು ವಿಧಾನ : ಭೌತಿಕ ರೂಪದಲ್ಲಿ ನಾವು ಖರೀದಿಸುವ ಚಿನ್ನವು ಬಾರ್ ರೂಪದಲ್ಲಿರುತ್ತದೆ. ಹಾಗಾಗಿ ನಾವದನ್ನು ಜೋಪಾನವಾಗಿ, ಭಧ್ರವಾಗಿ, ಲಾಕರ್ಗಳಲ್ಲಿ ಅಥವಾ ಸೇಫ್ಟಿ ವಾಲ್ಟ್  ಗಳಲ್ಲಿ ಇರಿಸಬೇಕಾಗುತ್ತದೆ.

ಆದರೆ ಗೋಲ್ಡ್ ಇಟಿಎಫ್ ನಡಿ ನಾವು ಚಿನ್ನವನ್ನು ಅಭೌತಿಕ ರೂಪದಲ್ಲಿ ಖರೀದಿಸುವುದರಿಂದ ಅದನ್ನು ಭದ್ರವಾಗಿ ಜೋಪಾನಾವಗಿ ಇರಿಸಿಕೊಳ್ಳಬೇಕಾದ ಪ್ರಮೇಯ ಎದುರಾಗುವುದಿಲ್ಲ. ಅಂತೆಯೇ ಗೋಲ್ಡ್ ಇಟಿಎಫ್ ನ ನಮ್ಮ ಅಭೌತಿಕ ಚಿನ್ನ ಕಳ್ಳತನ, ದರೋಡೆಗೆ ಗುರಿಯಾಗುವ ಅಪಾಯ, ಸಾಧ್ಯತೆ ಇರುವುದಿಲ್ಲ.  

3. ಅನುಕೂಲತೆಗಳು : ಭೌತಿಕ ರೂಪದ ಚಿನ್ನವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವುದು ಅತ್ಯಂತ ಅಪಾಯಕಾರಿ ಮತ್ತು ಅಸುರಕ್ಷಿತ.

ಆದರೆ ಗೋಲ್ಡ್ ಇಟಿಫ್ ನಲ್ಲಿ ಚಿನ್ನವು ಅಭೌತಿಕ ರೂಪದಲ್ಲಿ ಎಂದರೆ ವಿದ್ಯುನ್ಮಾನ ರೂಪದಲ್ಲಿ ಇರುತ್ತದೆ. ಹಾಗಾಗಿ ಅಭೌತಿಕ ಚಿನ್ನದ ವಿಷಯದಲ್ಲಿ ಸಾರಿಗೆ ಸವಾಲಿನ ಪ್ರಶ್ನೆ ಎದುರಾಗುವುದೇ ಇಲ್ಲ. ಕಳೆದುಕೊಳ್ಳುವ, ನಷ್ಟವಾಗುವ, ಕಳವಾಗುವ ಸಮಸ್ಯೆಗಳಿಲ್ಲ.

4. ಚಿನ್ನದ ದರ : ಭೌತಿಕ ರೂಪದಲ್ಲಿ ಚಿನ್ನವನ್ನು ಖರೀದಿಸುವಾಗ ಅದರ ದರ ಒಂದು ಚಿನ್ನದ ಮಳಿಗೆಯಿಂದ ಇನ್ನೊಂದು ಚಿನ್ನದ ಮಳಿಗೆಗೆ ಬೇರೆ ಬೇರೆಯೇ ಇರುತ್ತದೆ. ಭೌತಿಕ ಚಿನ್ನವನ್ನು ಖರಿದಿಸುವಾಗ ದರ ಏಕರೂಪತೆಯನ್ನು ಕಾಣುವ ಸಾಧ್ಯತೆ ಕಡಿಮೆ.

ಆದರೆ ಇಟಿಎಫ್ ಗೋಲ್ಡ್ ಖರೀದಿಸುವಲ್ಲಿ ಅಂತಾರಾಷ್ಟ್ರೀಯ ಏಕರೂಪತೆಯ ದರ ಇರುತ್ತದೆ ಮತ್ತು ಇದರಲ್ಲಿ ಪಾರದರ್ಶಕತೆಯೂ ಇರುತ್ತದೆ. ಹಾಗಾಗಿ ಚಿನ್ನದ ದರದಲ್ಲಿ  ನನಗೆ ಮೋಸವಾಯಿತು ಎಂದು ಕೂಗಾಡುವ ಪ್ರಶ್ನೆಯೇ ಇಲ್ಲ. 

5. ಶುದ್ಧತೆ : ಭೌತಿಕ ರೂಪದಲ್ಲಿ ಚಿನ್ನವನ್ನು ಖರೀದಿಸುವಾಗ ಅದರ ಶುದ್ಧತೆ ಬಗ್ಗೆ ಯಾವತ್ತೂ ಸಂದೇಹ, ಶಂಕೆ ಇರುವುದು ಸಹಜ ಮತ್ತು ಸಾಮಾನ್ಯ. ಆದರೆ ಗೋಲ್ಡ್ ಇಟಿಎಫ್ ನಲ್ಲಿ ಚಿನ್ನದ ಶುದ್ಧತೆಯನ್ನು ಫಂಡ್ ಹೌಸ್‌ ಗಳು ಪಾರದರ್ಶಕವಾಗಿ ಕಾಪಿಡುತ್ತವೆ. 

6. ಚಾರ್ಜಸ್ :  ನಮಗೆಲ್ಲ ತಿಳಿದಿರುವ ಹಾಗೆ ಭೌತಿಕ ರೂಪದಲ್ಲಿ ಚಿನ್ನವನ್ನು ಒಡವೆಯಾಗಿ ಖರೀದಿಸುವಾಗ ಮೇಕಿಂಗ್ ಚಾರ್ಜಸ್, ತೇಮಾನು ಇತ್ಯಾದಿಗಳು ಗ್ರಾಹಕರ ಮೇಲೆ ಬೀಳುತ್ತದೆ. ಗೋಲ್ಡ್ ಇಟಿಎಫ್ ನಲ್ಲಿ  ಚಿನ್ನವನ್ನು ವಿದ್ಯುನ್ಮಾನ ಮಾಧ್ಯಮದ ಮೂಲಕ ಅಭೌತಿಕ ರೂಪದಲ್ಲಿ ಖರೀದಿಸುವುದರಿಂದ ಇಟಿಎಫ್ ಮ್ಯಾನೇಜ್ಮೆಂಟ್ ಶುಲ್ಕ ಮತ್ತು ಬ್ರೋಕರೇಜ್ ಶುಲ್ಕ ಮಾತ್ರವೇ ಅನ್ವಯವಾಗುತ್ತವೆ. 

7. ತೆರಿಗೆ : ಭೌತಿಕ ರೂಪದಲ್ಲಿ ಚಿನ್ನವನ್ನು ಖರೀದಿಸುವಾಗ ಸಂಪತ್ತು ತೆರಿಗೆ ಅನ್ವಯವಾಗುತ್ತದೆ. ಆದರೆ ಗೋಲ್ಡ್ ಇಟಿಎಫ್ ನಲ್ಲಿ ಇದು ಲಗಾವಾಗುವುದಿಲ್ಲ. ಹಾಗಿದ್ದರೂ ಗೋಲ್ಡ್ ಇಟಿಎಫ್ ನಲ್ಲಿ  ಚಿನ್ನವನ್ನು ಮೂರು ವರ್ಷ ಮೀರಿ ಹೊಂದಿದ ಸಂದರ್ಭದಲ್ಲಿ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್  ಅನ್ವಯವಾಗುತ್ತದೆ. ಏಕೆಂದರೆ ಗೋಲ್ಡ್ ಇಟಿಎಫ್ ನ ಚಿನ್ನವನ್ನು ಶೇರುಗಳಂತೆ ಪರಿಗಣಿಸಲಾಗುತ್ತದೆ; ಅಂತೆಯೇ ಒಂದು ವರ್ಷ ಮೀರಿದ ಅವಧಿಗೆ ಅಭೌತಿಕ ಚಿನ್ನವನ್ನು ಹೊಂದಿ ಅದನ್ನು ಮಾರುವಾಗ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ವಯವಾಗುತ್ತದೆ. 

8. ಹೂಡಿಕೆ ಶಿಸ್ತು : ಗೋಲ್ಡ್‌ ಇಟಿಎಫ್ ನಲ್ಲಿ ನಾವು ಮ್ಯೂಚುವಲ್‌ ಫ‌ಂಡ್‌ ನಂತೆ ಸಿಸ್ಟಮ್ಯಾಟಿಕ್‌ ಇನ್‌ವೆಸ್ಟ್‌ಮೆಂಟ್‌ ಪ್ಲಾನ್‌ ಅನುಸರಿಸಬಹುದಾಗಿದೆ. ತಿಂಗಳ ಸಿಪ್‌ ಕಂತನ್ನು ನಮೂದಿಸಿ ನಿರ್ದಿಷ್ಟ ದಿನದಂದು ಉಳಿತಾಯ ಖಾತೆಗೆ ಆ ಮೊತ್ತವನ್ನು ಡೆಬಿಟ್‌ ಮಾಡಲು ಬ್ಯಾಂಕಿಗೆ ಆದೇಶಿಸಿದರೆ, ಚಿನ್ನ ಖರೀದಿ ಪ್ರಕ್ರಿಯೆ ತನ್ನಂತಾನೇ ಎಗ್ಗಿಲ್ಲದೆ ಸಾಗುತ್ತಿರುತ್ತದೆ. ಇದು ಶಿಸ್ತುಬದ್ಧ ಚಿನ್ನದ ಹೂಡಿಕೆಗೆ ಅನುಕೂಲಕರವಾಗಿರುತ್ತದೆ. 

ಒಟ್ಟಾರೆಯಾಗಿ ಹೇಳುವುದಾದರೆ ನಾವು ಶೇರುಗಳನ್ನು ಆನ್‌ಲೈನ್‌ ನಲ್ಲಿ 
ಅಭೌತಿಕ ರೂಪದಲ್ಲಿ  ಹೇಗೆ ಖರೀದಿ – ಮಾರಾಟ ಮಾಡುವೆವೋ ಹಾಗೆಯೇ ಚಿನ್ನವನ್ನು ಕೂಡ ಅಭೌತಿಕ ರೂಪದಲ್ಲಿ, ಅತ್ಯಂತ ಕಡಿಮೆ ಪ್ರಮಾಣದಲ್ಲಿ, ಬೇಕೆಂದಾಗ ಖರೀದಿಸಿ ಬೇಕೆಂದಾಗ ಮಾರಲು ಸಾಧ್ಯವಿರುತ್ತದೆ.

ಎಂದರೆ ಇಲ್ಲಿ ಚಿನ್ನ ಖರೀದಿಸಲು ಮತ್ತು ಮಾರಲು ಯಾವುದೇ ಜ್ಯುವೆಲರ್ ಬಳಿ ಹೋಗುವ ಅಗತ್ಯ ಇರುವುದಿಲ್ಲ. ನೀವಾಯಿತು ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಮತ್ತು ಇಂಟರ್ನೆಟ್ ಸೌಕರ್ ಇದ್ದರಾಯಿತು; ಹಾಗೆಯೇ ಒಂದು ಟ್ರೇಡಿಂಗ್ ಅಕೌಂಟ್ ಮತ್ತು ಡಿಮ್ಯಾಟ್ ಅಕೌಂಟ್ ಇದ್ದರಾಯಿತು; ಉಳಿದದ್ದೆಲ್ಲವೂ ಸುಲಭ, ಸುಲಲಿತ.

Advertisement

Udayavani is now on Telegram. Click here to join our channel and stay updated with the latest news.

Next