Advertisement

ಮಹಾಲಿಂಗೇಶ್ವರ ದೇವರ ಕೊಡಿಮರಕ್ಕೆ ಚಿನ್ನದ ಕವಚ!

10:15 AM Dec 22, 2018 | |

ಪುತ್ತೂರು: ಪುತ್ತೂರು ಸೀಮೆಯ ಒಡೆಯ, ಲಕ್ಷಾಂತರ ಭಕ್ತರ ಆರಾಧ್ಯಮೂರ್ತಿ ಶ್ರೀ ಮಹಾಲಿಂಗೇಶ್ವರ ದೇಗುಲದ ಕೊಡಿಮರ ಸ್ವರ್ಣ ಕವಚದಿಂದ ಇನ್ನಷ್ಟು ಕಂಗೊಳಿಸಲಿದೆ. ದೇವರ ಅನುಗ್ರಹ ಪ್ರಾಪ್ತಿಯಾದರೆ ದೇಗುಲದ ಕೊಡಿಮರಕ್ಕೆ ಕಂಚಿನ ಬದಲು ಚಿನ್ನದ ಕವಚ ಅಳವಡಿಕೆ ಆಗಲಿದೆ. ಹಲವು ಭಕ್ತರು ಇಂಗಿತ ವ್ಯಕ್ತಪಡಿಸಿದ್ದು, ವ್ಯವಸ್ಥಾನ ಸಮಿತಿಯೂ ಆಸಕ್ತಿ ವಹಿಸಿದೆ.

Advertisement

ದೇಗುಲದ ಕೊಡಿಮರಕ್ಕಾಗಿ 65 ಅಡಿ ಕಿರಾಲ್‌ಬೋಗಿ ಮರವನ್ನು ಕುಕ್ಕುಜಡ್ಕ ಆನೆಕಾರಿನಿಂದ ಅ. 29ಕ್ಕೆ ತರಲಾಗಿತ್ತು. ಮರಕ್ಕೆ ತೈಲಾಭ್ಯಂಜನ ನಡೆಸಿ ಈಗ ತೈಲದಲ್ಲಿ ಹಾಕಿ ಇಡಲಾಗಿದೆ. 48 ದಿನಗಳ ಬಳಿಕ ಕೊಡಿಮರ ಅಳವಡಿಕೆ ಕೆಲಸ ನಡೆಯಲಿದೆ. ಎ. 10ರ ಬಳಿಕ ನಡೆಯುವ ಪುತ್ತೂರು ಜಾತ್ರೆಗೆ ಮುಂಚಿತವಾಗಿ ಕೊಡಿಮರವನ್ನು ಅಳವಡಿಸುವ ಉದ್ದೇಶವನ್ನು ದೇಗುಲದ ಆಡಳಿತ ಮಂಡಳಿ ಹೊಂದಿದೆ.

ಕವಚ ಬದಲಾವಣೆ
ಹಿಂದೆ ದೇಗುಲದಲ್ಲಿ ಕೊಡಿಮರ ಮಾತ್ರ ಇದ್ದು, ಅನಂತರದಲ್ಲಿ ತಾಮ್ರದ ಕವಚವನ್ನು ಅಳವಡಿಸಲಾಗಿತ್ತು. 2013ರಲ್ಲಿ ನಡೆದ ಬ್ರಹ್ಮಕಲಶೋತ್ಸವದ ಸಂದರ್ಭ ಕೊಡಿಮರಕ್ಕೆ ಕಂಚಿನ ಕವಚವನ್ನು ಅಳವಡಿಸಲಾಗಿತ್ತು. ಐದು ವರ್ಷಗಳ ಬಳಿಕ ಪ್ರಶ್ನಾಚಿಂತನೆ ನಡೆಸಿ ಕೊಡಿಮರದ ಬದಲಾವಣೆ ಮಾಡಲಾಗುತ್ತಿದ್ದು, ಚಿನ್ನದ ಕವಚವನ್ನು ಅಳವಡಿಸುವ ಪ್ರಸ್ತಾವನೆ ಮುನ್ನಲೆಗೆ ಬಂದಿದೆ.

1. 50 ಕೋಟಿ ರೂ.
ಕೊಡಿಮರಕ್ಕೆ ಚಿನ್ನದ ಕವಚ ಅಳವಡಿಸಲು ಸುಮಾರು 3.75 ಕೆ.ಜಿ. ಚಿನ್ನ ಬೇಕಾಗಬಹುದು. ಒಟ್ಟು ಚಿನ್ನದ ಕವಚ ಅಳವಡಿಕೆಗೆ ಅಂದಾಜು ಸುಮಾರು 1.50 ಕೋಟಿ ರೂ. ವೆಚ್ಚವಾಗಬಹುದು ಎಂದು ವಾಸ್ತುತಜ್ಞ ಪಿ.ಜಿ. ಜಗನ್ನಿವಾಸ್‌ ರಾವ್‌ ಹೇಳಿದ್ದಾರೆ.

ಇಲ್ಲಿ ಎಲ್ಲವೂ ಸಾಧ್ಯ
ಮಹತೋಭಾರ ಮಹಾಲಿಂಗೇಶ್ವರ ದೇಗುಲದ ಪುನರ್‌ ನಿರ್ಮಾಣ ಕಾರ್ಯ 2012ರಲ್ಲಿ ಆರಂಭಗೊಂಡು ಸಾವಿರಾರು ಭಕ್ತರ ಅಭೂತಪೂರ್ವ ಕರಸೇವೆಯೊಂದಿಗೆ ಕೇವಲ 327 ದಿನಗಳಲ್ಲಿ ಪೂರ್ಣಗೊಂಡು 2013ರ ಮಾರ್ಚ್‌ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು. ದಾನಿಗಳು, ಭಕ್ತರ ಸಹಕಾರದೊಂದಿಗೆ ದೇಗುಲದ ಪುನರ್‌ ನಿರ್ಮಾಣ ಹಾಗೂ ಬ್ರಹ್ಮಕಲಶೋತ್ಸವವು ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನಡೆದಿತ್ತು. ಈಗ ಕೊಡಿಮರಕ್ಕೆ ಸ್ವರ್ಣ ಕವಚ ಅಳವಡಿಕೆ ಸಂಬಂಧಿಸಿದಂತೆಯೂ ಭಕ್ತರು ಮನಸ್ಸು ಮಾಡಿದರೆ ವೇಗವಾಗಿ ನಡೆಯಬಹುದು ಎನ್ನುವುದು ಎಲ್ಲರ ಅಭಿಪ್ರಾಯ.

Advertisement

ಭಕ್ತರ ಇಂಗಿತ ಈಡೇರಬಹುದು
ಅತ್ಯಂತ ಕಾರಣಿಕ ಶಕ್ತಿಯನ್ನು ಹೊಂದಿರುವ ಪುತ್ತೂರು ಮಹಾಲಿಂಗೇಶ್ವರನಿಗೆ ದೇಶ, ವಿದೇಶಗಳಲ್ಲೂ ಭಕ್ತರಿದ್ದಾರೆ. ದೇಗುಲದ ಪುನರ್‌ನಿರ್ಮಾಣ ಕಾರ್ಯ ಭಕ್ತರ ಸಹಕಾರ, ನೆರವಿನಿಂದಲೇ ನಡೆದಿತ್ತು. ಕೊಡಿಮರಕ್ಕೆ ಚಿನ್ನದ ಕವಚ ಅಳವಡಿಸುವ ಭಕ್ತರ ಇಂಗಿತ ಖಂಡಿತವಾಗಿಯೂ ಈಡೇರಬಹುದು. 
ಪಿ.ಜಿ. ಚಂದ್ರಶೇಖರ್‌,
 ದೇಗುಲಗಳ ಅಧ್ಯಯನಕಾರ 

ನಿರ್ಧಾರ ಕೈಗೊಂಡಿಲ್ಲ
ಕೊಡಿಮರಕ್ಕೆ ಚಿನ್ನದ ಕವಚವನ್ನು ಅಳವಡಿಸುವ ಇಂಗಿತವನ್ನು ಭಕ್ತರು ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿರ್ಧಾರವನ್ನು ಕೈಗೊಂಡಿಲ್ಲ. ಮಹಾಲಿಂಗೇಶ್ವರನ ಅನುಗ್ರಹದಿಂದ, ಭಕ್ತರ ಸಹಕಾರ ದೊರೆತರೆ ಜಾತ್ರೆಯ ಸಂದರ್ಭ ಚಿನ್ನದ ಕವಚವನ್ನು ಹೊಂದಿರುವ ಕೊಡಿಮರವೇ ಎದ್ದು ನಿಲ್ಲಬಹುದು.
-ಎನ್‌. ಸುಧಾಕರ ಶೆಟ್ಟಿ,
ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next