ಗೋಲ್ಡ್‌ಕೋಸ್ಟ್: ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ಗೆ ವರ್ಣ ರಂಜಿತ ತೆರೆ ಬಿದ್ದಿದೆ. ಸಮಾರೋಪದ ಪಥ ಸಂಚಲನದಲ್ಲಿ ಎಂ.ಸಿ. ಮೇರಿ ಕೋಮ್ ಭಾರತದ ತ್ರಿವರ್ಣ ಧ್ವಜ ಹಿಡಿದು ಮುಂದೆ ಸಾಗುತ್ತಿರುವಾಗ ದೇಶದ ಆ್ಯತ್ಲೀಟ್‌ಗಳ ಮೊಗದಲ್ಲಿ ಸಮಾಧಾನಕರ ನಿರ್ವಹಣೆಯ ತೃಪ್ತಿ ಹೊರಹೊಮ್ಮಿದ್ದನ್ನು ಕಾಣಬಹುದಿತ್ತು.
ಗೋಲ್ಡ್‌ಕೋಸ್ಟ್‌ನಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಹಾಗೂ 20 ಕಂಚಿನ ಪದಕಗಳ ಸಹಿತ ಒಟ್ಟು 66 ಪದಕ ಗೆದ್ದು ತೃತೀಯ ಸ್ಥಾನ ಅಲಂಕರಿಸಿತು. ಆತಿಥೇಯ ಆಸ್ಟ್ರೇಲಿಯ (198) ಮತ್ತು ಇಂಗ್ಲೆಂಡ್ (136) ಮೊದಲೆರಡು ಸ್ಥಾನಗಳಲ್ಲಿ ವಿರಾಜಮಾನವಾದವು.
ಇದು ತೃತೀಯ ಸ್ಥಾನದಲ್ಲಿ ಭಾರತದ 3ನೇ ಅತ್ಯುತ್ತಮ ನಿರ್ವಹಣೆಯಾಗಿದೆ. ಹೊಸದಿಲ್ಲಿ ಕೂಟದಲ್ಲಿ 101 ಪದಕ ಗೆದ್ದಾಗಲೂ ಭಾರತ 3ನೇ ಸ್ಥಾನವನ್ನು ಪಡೆದಿತ್ತು. 2002ರ ಮ್ಯಾಂಚೆಸ್ಟರ್ ಕೂಟದಲ್ಲಿ 69 ಪದಕ ಜಯಿಸಿದಾಗಲೂ 3ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಈಗ ಗೋಲ್ಡ್‌ಕೋಸ್ಟ್‌ನಲ್ಲೂ ಇದು ಪುನರಾವರ್ತನೆಗೊಂಡಿದೆ.
ಭಾರತವಿಲ್ಲಿ ಕಳೆದ ಗ್ಲಾಸೊYà ಗೇಮ್ಸ್ ಗಿಂತ 2 ಹೆಚ್ಚು ಪದಕಗಳನ್ನು ಜಯಿಸಿತು. ಸುಮಾರು 200ರಷ್ಟು ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿದ್ದರು. ಅತೀ ಹಿರಿಯ ಮೇರಿ ಕೋಮ್ ಅವರಿಂದ ಮೊದಲ್ಗೊಂಡು ಕಿರಿಯರಾದ ಮಣಿಕಾ ಬಾತ್ರಾ, ಮನು ಭಾಕರ್, ಅನೀಶ್ ಭನ್ವಾಲ್, ನೀರಜ್ ಚೋಪ್ರಾ ಅವರೆಲ್ಲ ಗೋಲ್ಡ್‌ಕೋಸ್ಟ್‌ನಲ್ಲಿ ಭಾರತದ ಕ್ರೀಡಾ ಗೌರವವನ್ನು ಎತ್ತಿ ಹಿಡಿದರು. ಅಂತಿಮ ದಿನ ಸೈನಾ ನೆಹ್ವಾಲ್ ಅವರ ಅಮೋಘ ಗೆಲುವಿನೊಂದಿಗೆ ಭಾರತ ತನ್ನ ಚಿನ್ನದ ಅಭಿಯಾನವನ್ನು 26ಕ್ಕೆ ಕೊನೆಗೊಳಿಸಿತು.
2022ನೇ ಗೇಮ್ಸ್ ಬರ್ಮಿಂಗಂನಲ್ಲಿ ನಡೆಯಲಿದೆ. ಇದರಲ್ಲಿ ಶೂಟಿಂಗ್ ಸ್ಪರ್ಧೆಯನ್ನು ಕೈಬಿಟ್ಟಿರುವುದು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸುವುದು ಖಚಿತ. ಇದಕ್ಕೂ ಮುನ್ನ ಇದೇ ವರ್ಷದ ಏಶ್ಯಾಡ್, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ದೊಡ್ಡ ಸವಾಲು ಕಾದಿರುವುದನ್ನು ಮರೆಯುವಂತಿಲ್ಲ.