ಗೋಕಾಕ: ಮಾಜಿ ಮುಖ್ಯಮಂತ್ರಿ ದಿ|ಜಿ. ಎಚ್.ಪಟೇಲ್ ಸಂಪುಟದಲ್ಲಿ ಸಚಿವವರಾಗಿದ್ದ ಉಮೇಶ್ ಕತ್ತಿ ಅವರಿಗೆ ಗೋಕಾಕ ಜಿಲ್ಲಾ ಹೋರಾಟ ವಿಷಯ ಗೊತ್ತಿದ್ದರೂ ಸಹ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಉಪವಿಭಾಗಗಳನ್ನು ಹೊಸ ಜಿಲ್ಲೆ ಮಾಡಬೇಕೆಂದು ಹೇಳಿಕೆ ನೀಡಿರುವುದು ಅಸಮಂಜಸವಾಗಿದೆ ಎಂದು ಗೋಕಾಕ ಜಿಲ್ಲಾ ಚಾಲನಾ ಸಮಿತಿ ಅಧ್ಯಕ್ಷರೂ ಆದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.
ಬುಧವಾರ ನಗರದ ಶೂನ್ಯ ಸಂಪಾದನ ಮಠದಲ್ಲಿ ಕರೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿ, ಕಳೆದ 4 ದಶಕಗಳಿಂದ ನಡೆದುಬಂದ ಹೋರಾಟಗಳನ್ನು ಪರಿಗಣಿಸದೆ ರಾಜಕೀಯ ಕುಮ್ಮಕ್ಕಿನಿಂದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕತ್ತಿ ಅವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸರಕಾರ ಚಿಕ್ಕೋಡಿ, ಬೈಲಹೊಂಗಲ ಸೇರಿದಂತೆ ಯಾವುದೇ ತಾಲೂಕನ್ನು ಜಿಲ್ಲೆ ಮಾಡಲಿ ನಮ್ಮ ತಕರಾರು ಇಲ್ಲ, ಆದರೆ ಗೋಕಾಕ ಮಾತ್ರ ಹೊಸ ಜಿಲ್ಲೆಯಾನ್ನಾಗಿ ಮಾಡಲೇ ಬೇಕು ಎಂದು ಆಗ್ರಹಿಸಿದರು.
ಪಿ.ಸಿ ಗದ್ದಿಗೌಡರ, ಹುಂಡೇಕರ ಮತ್ತು ವಾಸುದೇವ ಮೂರೂ ಆಯೋಗಗಳು ಗೋಕಾಕ ಜಿಲ್ಲೆ ಆಗಬೇಕು ಎಂದು ಶಿಫಾರಸು ಮಾಡಿವೆ ಅದನ್ನು ಆಧರಿಸಿ ಮೊದಲು ಗೋಕಾಕ ಜಿಲ್ಲೆಯಾಗಿ ಮಾಡಬೇಕು. ಸರಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಶ್ರೀಗಳು ಎಚ್ಚರಿಸಿದರು.
ವಕೀಲ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ ಮಾತನಾಡಿ, ಸಚಿವ ಕತ್ತಿ ಹೇಳಿಕೆ ಅಸಮಂಜಸವಾಗಿದ್ದು, ನೂತನ ಜಿಲ್ಲೆಗಳನ್ನು ವಿಭಾಗೀಯವಾಗಿ ವಿಗಂಡಿಸಬೇಕು ಎಂದು ಹೇಳಿದ್ದಾರೆ ಬಹುಶಃ ಸಚಿವ ಕತ್ತಿ ಅವರಲ್ಲಿ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಗೋಕಾಕ ನೂತನ ಜಿಲ್ಲೆಯಾಗದಿದ್ದರೆ ತಾಲೂಕಿನಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ನ್ಯಾಯವಾದಿಗಳಾದ ಶಶಿಧರ ದೇಮಶೆಟ್ಟಿ, ಸಿ.ಬಿ.ಗಿಡ್ಡನವರ, ಶಂಕರ ಗೋರೋಶಿ, ಎಲ್. ಎಂ ಬುದಿಗೋಪ್ಪ, ವಾಯ್.ಕೆ ಕೌಜಲಗಿ, ಜಿ.ಎಸ್.ನಂದಿ, ಯು.ಬಿ.ಶಿಂಪಿ, ರಾಜು ಕೊಟಗಿ, ಸುಭಾಷ ಪಾಟೀಲ, ಎ.ಎ ಪಾಟೀಲ, ಎಚ್.ಎ ಕಲ್ಲೋಳಿ, ಸಂಘಟನೆಗಳ ಮುಖಂಡರುಗಳಾದ ಬಸವರಾಜ ಖಾನಪ್ಪನವರ, ಕಿರಣ ಢಮಾಮಗರ, ಪವನ ಮಹಾಲಿಂಗಪೂರ, ಮಲ್ಲಿಕಜಾನ ತಲವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು