Advertisement

Gokarana; ಮಹಾಬಲೇಶ್ವರ ಗರ್ಭಗುಡಿಯ ನಂದಿ ಪೂಜೆ ವಿವಾದ: ಪ್ರತಿಭಟನೆ!

07:23 PM May 09, 2024 | Team Udayavani |

ಗೋಕರ್ಣ : ಶ್ರೀ ಕ್ಷೇತ್ರ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿರುವ ನಂದಿಗೆ ತೀರ್ಥ ಪ್ರಸಾದ ಉಪಾಧಿ ನೀಡುವ ಕಾರ್ಯ ಹಲವು ಶತಮಾನಗಳಿಂದ ಎರಡು ಕುಟುಂಬಗಳಿಗೆ ವಹಿಸಲಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಒಂದೇ ಕುಟುಂಬದವರು ವರ್ಷವಿಡೀ ತಾವೇ ಕರ್ತವ್ಯ ನಿರ್ವಹಿಸಿ ಇನ್ನೊಂದು ಮನೆತನಕ್ಕೆ ಅವಕಾಶ ನೀಡದಿರುವುದಕ್ಕೆ ಗುರುವಾರ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆದವು.

Advertisement

ಶಂಕರ ಗೋಪಿ ಮನೆತನ ಹಾಗೂ ಜಂಬೆ ಬಾಲಕೃಷ್ಣ ಮನೆತನದವರು ಆರು, ಆರು ತಿಂಗಳು ಮಹಾಬಲೇಶ್ವರ ಗರ್ಭಗುಡಿಯ ನಂದಿವಿಗ್ರಹ ಪೂಜೆ ಹಾಗೂ ತೀರ್ಥ ಪ್ರಸಾದಗಳನ್ನು ಭಕ್ತರಿಗೆ ವಿತರಿಸುತ್ತಿದ್ದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶ್ರೀ ಮಹಾಬಲೇಶ್ವರ ದೇವಸ್ಥಾನವನ್ನು ಶ್ರೀ ರಾಮಚಂದ್ರಾಪುರ ಮಠಕ್ಕೆ ವಹಿಸಿತ್ತು. ಅದಾದ ನಂತರವೂ ಶಂಕರ ಗೋಪಿ ಮನೆತನದವರು ತಮ್ಮ ಜವಾಬ್ದಾರಿಯನ್ನು ಮುಂದುವರೆಸಿಕೊಂಡು ಬಂದಿದ್ದರು. ಯಾವಾಗ ಕೋರ್ಟಿನಲ್ಲಿ ರಾಮಚಂದ್ರಾಪುರ ಮಠಕ್ಕೆ ಹಿನ್ನಡೆಯಾಯಿತೋ ಆಗ ಶಂಕರ ಗೋಪಿ ಕುಟುಂಬ ಸೇರಿದಂತೆ ಈ ಹಿಂದೆ ಅಧಿಕಾರ ಚಲಾಯಿಸುತ್ತಿದ್ದ ಕೆಲವರ ಅಧಿಕಾರ ಕಿತ್ತು, ಆರು ತಿಂಗಳು ಮಾಡುತ್ತಿದ್ದ ಶಂಕರ ಗೋಪಿ ಅವರಿಗೆ ಅವಕಾಶ ಇಲ್ಲದಂತೆ ಮಾಡಲಾಯಿತು ಎಂದು ಸ್ವತಃ ಶಂಕರ ಗೋಪಿ ಅವರೇ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ರಾಮಚಂದ್ರಾಪುರ ಮಠದಿಂದ ದೇವಸ್ಥಾನವನ್ನು ಬಿಡುಗಡೆಗೊಳಿಸಿ ಅದನ್ನು ನ್ಯಾಯಾಲಯ ಸರಕಾರಕ್ಕೆ ವಹಿಸಿದಾಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ, ಉಪವಿಭಾಗಾಧಿಕಾರಿಯಾಗಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು. ತಮ್ಮ ಪಾಳಿ ಪ್ರಕಾರ ಬರುವ ಜವಾಬ್ದಾರಿಯನ್ನು ಶಂಕರ ಗೋಪಿ ಮನೆತನದವರು ಮಾಡಲು ಮುಂದಾದಾಗ ಅವರಿಗೆ ಮಾಡಲು ಬಿಡದೇ ಈ ಹಿಂದಿನವರೇ ಮುಂದುವರೆಸಿಕೊಂಡು ಬರುವಂತೆ ಮಾಡಲಾಯಿತು. ಹೀಗಾಗಿ ಶಂಕರ ಗೋಪಿ ಕುಟುಂಬದವರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಅವರಿಗೆ ಅವಕಾಶ ನೀಡಿರಲಿಲ್ಲ. ಪ್ರತಿವರ್ಷ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಇದುವರೆಗೂ ನ್ಯಾಯ ಸಿಗಲಿಲ್ಲ ಎನ್ನುವ ಆಕ್ರೋಶದಲ್ಲಿ ಗುರುವಾರ ಶಂಕರ ಗೋಪಿ ಮನೆತನದವರು ಸಾಮಾಜಿಕ ಕಾರ್ಯಕರ್ತರು, ಉಪಾಧಿವಂತರು ಸೇರಿ ದೇವಸ್ಥಾನದ ಒಳಗಡೆ ಪ್ರತಿಭಟನೆ ನಡೆಸಿದರು.

ಮುಂದಾಗಬಹುದಾದ ಅನಾಹುತವನ್ನು ಅರಿತ ಪೊಲೀಸರು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ಮಾಹಿತಿ ನೀಡಿದರು. ನಂತರ ಅವರು ಬಂದು ಸಭೆ ನಡೆಸಿದರು. ತಮ್ಮ ಅಭಿಪ್ರಾಯವನ್ನು ಶಂಕರ ಗೋಪಿ ಮನೆತನದವರು ದಾಖಲೆ ಸಮೇತ ಹೇಳುತ್ತಿದ್ದಂತೆಯೇ ಪದೇ ಪದೇ ಉಪವಿಭಾಗಾಧಿಕಾರಿಗಳು ನೀವು ಸುಳ್ಳು ಮಾಹಿತಿ ನೀಡುತ್ತಿದ್ದಿರಿ ಎಂದು ಹೇಳಿದಾಗ ಘರ್ಷಣೆಗೆ ಕಾರಣವಾಯಿತು.

ಹೀಗಾಗಿ ಸಭೆಯಲ್ಲಿದ್ದ ಬಹುತೇಕರನ್ನು ಹೊರ ಹಾಕುವಂತೆ ಉಪವಿಭಾಗಾಧಿಕಾರಿ ಪೊಲೀಸರಿಗೆ ಸೂಚಿಸಿದರು. ಅದರಂತೆ ಬಲವಂತವಾಗಿ ಪೊಲೀಸರು ವರ್ತಿಸಿ ಹಲವರನ್ನು ಹೊರ ಹಾಕಿದರು. ಇದು ಇನ್ನೊಂದು ಘರ್ಷಣೆಗೆ ಕಾರಣವಾಯಿತು. ಮಾಧ್ಯಮದವರನ್ನು ಕೂಡ ಪೊಲೀಸರು ತಳ್ಳುವ ಮೂಲಕ ತಮ್ಮ ವಿಕೃತಿಯನ್ನು ಮೆರೆದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಗಡೆ, ರವಿ ಅಡಿ ಹಾಗೂ ಎರಡು ಕುಟುಂಬಸ್ಥರು ಉಪಸ್ಥಿತರಿದ್ದರು.

Advertisement

ನೀಡದ ದಾಖಲೆ : ಪೂಜೆಗೆ ಸಂಬಂಧಿಸಿದಂತೆ ಶಂಕರ ಗೋಪಿ ಕುಟುಂಬದವರು ತಮ್ಮಲ್ಲಿರುವ ಎಲ್ಲ ದಾಖಲೆಗಳನ್ನು ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಅವರಿಗೆ ನೀಡಿದರು. ಆದರೆ ಜಂಬೆ ಮನೆತನದವರು ಯಾವುದೇ ಕಾಗದ ಪತ್ರವನ್ನು ನೀಡದೇ ಸಮಯ ತೆಗೆದುಕೊಂಡಿರುವುದು ಗೊಂದಲಕ್ಕೂ ಕಾರಣವಾಗಿತ್ತು. ತಮ್ಮಲ್ಲಿರುವ ದಾಖಲೆಗಳನ್ನು ತಕ್ಷಣ ಒದಗಿಸುವಂತೆ ಉಪವಿಭಾಗಾಧಿಕಾರಿಗಳು ಸೂಚಿಸಿದರು.

ಪ್ರಸಾದ ವಿತರಣೆಗೆ ತಾತ್ಕಾಲಿಕ ತಡೆ
ಉಪವಿಭಾಗಾಧಿಕಾರಿಗಳ ಸಭೆಯಲ್ಲಿ ಶಂಕರ ಗೋಪಿಯವರು ಆರು ತಿಂಗಳು ನಂದಿ ವಿಗ್ರಹದ ಪೂಜೆ ನಮಗೆ ಹಾಗೂ ಇನ್ನಾರು ತಿಂಗಳ ಜಂಬೆ ಬಾಲಕೃಷ್ಣ ಕುಟುಂಬದವರಿಗೆ ಇರುವುದರ ಬಗ್ಗೆ ದಾಖಲೆಯನ್ನು ಉಪವಿಭಾಗಾಧಿಕಾರಿಗಳಿಗೆ ನೀಡಿದರು. ಆದರೆ ಜಂಬೆ ಬಾಲಕೃಷ್ಣ ಮನೆತನದವರು ಯಾವುದೇ ದಾಖಲೆಯನ್ನು ನೀಡಲಿಲ್ಲ. ಹಾಗೇ ಜಂಬೆ ಬಾಲಕೃಷ್ಣ ಕುಟುಂಬದವರು ತೀರ್ಥ ಪ್ರಸಾದದ ಜತೆಗೆ ಹಣಕ್ಕಾಗಿ ಪ್ರಸಾದವನ್ನು ಮಾರಾಟ ಮಾಡುತ್ತಿದ್ದಾರೆ. ಇದನ್ನು ಕೂಡ ತತ್ ಕ್ಷಣ ನಿಲ್ಲಿಸುವಂತೆ ಉಪವಿಭಾಗಾಧಿಕಾರಿಗಳಿಗೆ ವಿನಂತಿಸಿದರು. ಅದರಂತೆ ಅವರು ಕೂಡ ಪ್ರಸಾದ ವಿತರಣೆಗೆ ತಾತ್ಕಾಲಿಕ ತಡೆವೊಡ್ಡಿದರು.

*ಈ ವರ್ಷ ಗುರುವಾರದಿಂದ ಆರು ತಿಂಗಳು ಸಂದರ್ಭಕ್ಕೆ ನಮ್ಮ ಪಾಳಿ ಬರುತ್ತದೆ. ಮತ್ತು ಕೇವಲ ಪೂಜೆ ಮಾಡಿ ತೀರ್ಥ ಪ್ರಸಾದ ನೀಡುವ ವಾಡಿಕೆಯಿತ್ತು. ಆದರೆ ಇಲ್ಲಿ ಈಗ ಪ್ರಸಾದವನ್ನು ಕೂಡ ಮಾರಾಟ ಮಾಡುತ್ತಿದ್ದಾರೆ. ಇದೆಲ್ಲವೂ ಹಣಕ್ಕಾಗಿ ಭಕ್ತರಿಗೆ ಮೋಸ ಮಾಡುತ್ತಿದ್ದಾರೆ. ಎರಡೆರಡು ಕಡೆ ಪ್ರಸಾದ ನೀಡುವ ಪದ್ಧತಿಯಿಲ್ಲ. ಈ ಬಗ್ಗೆ ತನಿಖೆ ಮಾಡುವುದರೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೇ ನಮ್ಮ ಕುಟುಂಬಕ್ಕಿರುವ ಅಧಿಕಾರವನ್ನು ನೀಡಬೇಕು.
– ಶಂಕರ ಗೋಪಿ, ನಂದಿ ಗರ್ಭಗುಡಿಯ ತೀರ್ಥ ಪ್ರಸಾದ ಉಪಾಧಿವಂತ ಮನೆತನ

*ಇಲ್ಲಿಯ ಶಂಕರ ಗೋಪಿ ಮನೆತನದವರು ನೀಡಿರುವ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದು, ಒಂದು ವಾರದ ಒಳಗಾಗಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಅಲ್ಲಿಯವರೆಗೆ ಯಾರೂ ಗಲಾಟೆಗೆ ಅವಕಾಶ ನೀಡಬಾರದು. ಈಗಾಗಲೇ ನಂದಿ ವಿಗ್ರಹದಲ್ಲಿ ಕೇವಲ ತೀರ್ಥ ಪ್ರಸಾದ ವಿತರಣೆಗೆ ಮಾತ್ರ ಅವಕಾಶ ನೀಡಿದ್ದು, ಪ್ರಸಾದ ನೀಡದಂತೆ ಸೂಚಿಸಿದ್ದೆನು. ಹಾಗೇ ಈಗಾಗಲೇ ಗೊಂದಲಕ್ಕೆ ಕಾರಣವಾಗಿರುವ ಶ್ರೀ ಮಹಾಬಲೇಶ್ವರ ದೇವಸ್ಥಾನದ ಜಾಗವನ್ನು ಅದರ ಹೆಸರಿಗೆ ಮಾಡಲಾಗುವುದು.
– ಕಲ್ಯಾಣಿ ಕಾಂಬ್ಳೆ, ಕುಮಟಾ ಉಪವಿಭಾಗಾಧಿಕಾರಿ

*ದೇಶದಲ್ಲಿಯೇ ಗೋಕರ್ಣ ಕ್ಷೇತ್ರಕ್ಕೆ ತನ್ನದೇ ಆದ ಕೀರ್ತಿ ಇದೆ. ಆದರೆ ಕೆಲವರಿಂದ ಅಪಕೀರ್ತಿ ಉಂಟಾಗುತ್ತಿದೆ. ಅಧಿಕಾರಿಗಳು ಸತ್ಯದ ಪರವಾಗಿ ಇರಬೇಕೆ ಹೊರತು ಯಾರನ್ನು ಮೆಚ್ಚಿಸಲು ಹೋಗಬಾರದು. ಶ್ರೀ ಮಹಾಬಲೇಶ್ವರ ದೇವರು ತನ್ನ ಕ್ಷೇತ್ರದಲ್ಲಿ ಯಾರೇ ಸ್ವಾರ್ಥ ಬಯಸಿದರೂ ಅವರನ್ನು ಕ್ಷಮಿಸುವುದಿಲ್ಲ. ಈಗಾಗಲೇ ಅದು ಸಾಬೀತು ಕೂಡ ಆಗಿದೆ. ನ್ಯಾಯವಾಗಿ ದುಡಿದು ಬದುಕವವರಿಗೆ ಅಡೆತಡೆ ಉಂಟು ಮಾಡಿದರೆ ಆ ದೇವರೆ ಶಿಕ್ಷೆ ನೀಡುತ್ತಾನೆ. ಶಂಕರ ಗೋಪಿ ಮನೆತನದವರಿಗೆ ಈ ಹಿಂದೆ ಇದ್ದ ಹಕ್ಕನ್ನು ಮತ್ತೆ ದೊರೆಯಬೇಕು. ಇಲ್ಲದಿದ್ದಲ್ಲಿ ಭಕ್ತರೇ ಬಂದು ಪ್ರತಿಭಟನೆ ಮಾಡುವ ಕಾಲ ದೂರವಿಲ್ಲ.
-ರಾಜಗೋಪಾಲ ಅಡಿ, ಅಧ್ಯಕ್ಷರು ಶ್ರೀ ಮಹಾಬಲೇಶ್ವರ ದೇವರ ಪ್ರಧಾನ ಅರ್ಚಕರು ಹಾಗೂ ಅನುವಂಶೀಯ ಉಪಾಧಿವಂತ ಮಂಡಳ

Advertisement

Udayavani is now on Telegram. Click here to join our channel and stay updated with the latest news.

Next