Advertisement

ಗೋಕಾಕ: ಕರದಂಟು ನಾಡಲ್ಲಿ ರಮೇಶ್‌ ಅವರಿಗೆ ಎದುರಾಳಿ ಯಾರು?

01:05 AM Mar 07, 2023 | Team Udayavani |

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಗೋಕಾಕ ಎಲ್ಲರ ಗಮನ ಸೆಳೆಯುವ ಕ್ಷೇತ್ರ. ಕಾರಣ ಇಲ್ಲಿರುವ ಜಾರಕಿಹೊಳಿ ಕುಟುಂಬದ ಪ್ರಭಾವ ಮತ್ತು ಪ್ರಾಬಲ್ಯ. 1999ರಿಂದ ಈ ಕ್ಷೇತ್ರದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿರುವ ರಮೇಶ ಜಾರಕಿ ಹೊಳಿ ಅಂದಿನಿಂದ ಇದುವರೆಗೆ ಒಮ್ಮೆಯೂ ಹಿಂತಿರುಗಿ ನೋಡಿಲ್ಲ.

Advertisement

ಕಳೆದ ಚುನಾವಣೆ ಅನಂತರ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ರಮೇಶ ಜಾರಕಿಹೊಳಿ ಒಮ್ಮೆಲೇ ರಾಷ್ಟ್ರ ರಾಜ ಕಾರಣಿಗಳು ತಮ್ಮ ಕಡೆ ತಿರುಗಿ ನೋಡುವಂತೆ ಮಾಡಿದರು. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನ ಮಾಡುವುದಾಗಿ ಪಣ ತೊಟ್ಟ ರಮೇಶ ತಮ್ಮ ಹಠದಲ್ಲಿ ಯಶಸ್ವಿಯಾದರು. ಆಗಿನಿಂದ ಗೋಕಾಕ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿತು.

ಗೋಕಾಕ ಕ್ಷೇತ್ರದಲ್ಲಿ ಜಾರಕಿಹೊಳಿ ಅವರಿಗೆ ಪಕ್ಷ ಮುಖ್ಯವಲ್ಲ. ಬದಲಾಗಿ ಪಕ್ಷಗಳಿಗೆ ಇವರು ಬಹಳ ಅಗತ್ಯ. ಇದೇ ಕಾರಣಕ್ಕೆ ಪ್ರಮುಖ ರಾಷ್ಟ್ರೀಯ ಪಕ್ಷ­ಗಳು ಇವರಿಗೆ ಜೋತು ಬಿದ್ದಿವೆ. ಜಾರಕಿ­ಹೊಳಿ­ಯವರ ಭದ್ರ ಕೋಟೆ ಭೇದಿಸಲು ಅನೇಕರು ಹಲವು ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಆದರೆ ಅದು ಇದುವರೆಗೂ ಫಲ ಕೊಟ್ಟಿಲ್ಲ. ಇಲ್ಲಿ ಜಾತಿ ಲೆಕ್ಕಾಚಾರದ ಮಾತುಗಳು ನಡೆಯುತ್ತಿವೆ­ಯಾದರೂ ಕೊನೆಗೆ ಬರುವ ಫಲಿತಾಂಶವೇ ಬೇರೆ. ಪ್ರತೀ ಬಾರಿ ರಮೇಶ ಅವರು ಅದೃಷ್ಟ ಪರೀಕ್ಷೆಗೆ ಒಳಗಾಗುತ್ತಾರೆ. ಇಂತಹ ಸಂದರ್ಭ­ದಲ್ಲಿ ಕೆಲವರು ಜಾತಿ ಲೆಕ್ಕಾಚಾರ ಹಾಕಿ ಈ ಬಾರಿ ಜಾರಕಿಹೊಳಿ ಅವರಿಗೆ ಕಷ್ಟ ಎನ್ನುವ ಮಾತು ಆಡುತ್ತಾರೆ. ಆದರೆ ಫಲಿತಾಂಶ ಪ್ರಕಟವಾದಾಗ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿರುತ್ತವೆ.

1999ರಿಂದ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಒಮ್ಮೆಯೂ ಆತಂಕದ ಪೈಪೋಟಿ ಎದುರಿಸಿಲ್ಲ. ಸತತ ಐದು ಬಾರಿ ಕಾಂಗ್ರೆಸ್‌ ಶಾಸಕರಾಗಿದ್ದ ರಮೇಶ ಜಾರಕಿಹೊಳಿ 2018­ರಲ್ಲಿ ಆಪರೇಷನ್‌ ಕಮಲದಿಂದ ಬಿಜೆಪಿ ಸೇರ್ಪಡೆಯಾಗಿ ಉಪ ಚುನಾವಣೆ ಎದುರಿಸಿ ಶಾಸಕರಾದರು. ಉಪಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದರೂ ರಮೇಶ ಅವರ ನಿರಾಯಾಸ ಗೆಲುವಿಗೆ ಇದು ಅಡ್ಡಿಯಾಗಲಿಲ್ಲ.

ಈಗಿನ ರಾಜಕೀಯ ಚಿತ್ರಣದಲ್ಲಿ ಗೋಕಾಕ ಕ್ಷೇತ್ರದಲ್ಲಿ ಟಿಕೆಟ್‌­ಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಪೈಪೋಟಿ ಕಾಣುತ್ತಿಲ್ಲ. ಬಿಜೆಪಿಯಿಂದ ಮತ್ತೆ ರಮೇಶ ಜಾರಕಿಹೊಳಿ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಅಶೋಕ ಪೂಜಾರಿ ಹೆಸರು ಬಹುತೇಕ ಅಂತಿಮಗೊಂಡಿದೆ. ಜೆಡಿಎಸ್‌ನಿಂದ ಇದುವರೆಗೆ ಯಾವ ಹೆಸರೂ ಅಂತಿಮವಾಗಿಲ್ಲ. ರಮೇಶ ಜಾರಕಿಹೊಳಿ ಅವರಿಗೆ ಸಿಡಿ ಪ್ರಕರಣದಿಂದ ಇನ್ನೂ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ. ಇದೇ ಕಾರಣದಿಂದ ಬಿಜೆಪಿ ಟಿಕೆಟ್‌ ಕೊಡಲು ಹಿಂದೇಟು ಹಾಕಿದರೆ ಆಗ ರಮೇಶ ಜಾರಕಿಹೊಳಿ ಅವರ ಪುತ್ರ ಅಮರನಾಥ ಇಲ್ಲವೇ ಅಳಿಯ ಆಂಬಿರಾವ್‌ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಮಾತು ಕೇಳಿಬಂದಿದೆ.

Advertisement

ಸಹೋದರರ ಪ್ರಚಾರದ ಕುತೂಹಲ: ವಿಧಾನ ಪರಿಷತ್‌ ಸದಸ್ಯ, ಸಹೋದರ ಲಖನ್‌ ಜಾರಕಿಹೊಳಿ ರಮೇಶ ಅವರ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೊಂದು ಕಡೆ ಮತ್ತೊಬ್ಬ ಸಹೋದರ ಸತೀಶ ಈ ಬಾರಿಯೂ ರಮೇಶ ವಿರುದ್ಧ ಪ್ರಚಾರ ಕಣಕ್ಕೆ ಇಳಿದಿದ್ದಾರೆ. ಬಾಲಚಂದ್ರ ಮತ್ತು ಲಖನ್‌ ಅವರು ರಮೇಶ ಪರ ಪ್ರಚಾರ ನಡೆಸಲಿದ್ದಾರೆ. ಈ ಸಹೋದರರ ಪ್ರಚಾರ ಪೈಪೋಟಿಯಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಈ ಬಾರಿ ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರಗೊಂಡಿದೆ. ಮೀಸಲಾತಿ ಹೋರಾಟಗಾರರು ಬಿಜೆಪಿ ಹಿಡಿತವಿರುವ ಕ್ಷೇತ್ರ ಗಳಲ್ಲಿಯೇ ಸಮಾವೇಶಗಳನ್ನು ಮಾಡುವ ಮೂಲಕ ರಮೇಶ ಜಾರಕಿಹೊಳಿ ಹಿಡಿತವನ್ನು ಬೇಸೆಯುವ ನಿಟ್ಟಿನಲ್ಲಿ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇದರ ಲಾಭ ತಮಗೆ ಆಗಲಿದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ.

ಅಶೋಕ ಪೂಜಾರಿಗೆ ಸ್ವಪಕ್ಷೀಯರ ಕಾಟ
ರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌ ಸ್ಪರ್ಧಿ ಯಾರು ಎಂಬ ಚರ್ಚೆ ನಡೆದಿರುವಾಗಲೇ ಈ ಪಕ್ಷದಲ್ಲಿ ಕೆಲ ಕಾರ್ಯಕರ್ತರು ಮೂಡಿಸುತ್ತಿರುವ ಗೊಂದಲ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಟಿಕೆಟ್‌ ಖಚಿತಪಡಿಸಿಕೊಂಡೇ ಕಾಂಗ್ರೆಸ್‌ ಸೇರ್ಪಡೆಯಾಗಿ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ನಡೆಸಿರುವ ಅಶೋಕ ಪೂಜಾರಿ ವಿರುದ್ಧ ಕಾಂಗ್ರೆಸ್‌ನ ಕೆಲವು ಅತೃಪ್ತರು ಚುನಾವಣೆಗೆ ಮೊದಲೇ ಪೂಜಾರಿ ಅವರಿಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅವರ ವಿರುದ್ಧ ಪ್ರಚಾರ ನಡೆಸಿದ್ದಾರೆ. ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕ್ಷೇತ್ರದ ಉಸ್ತುವಾರಿ ತೆಗೆದುಕೊಂಡಿರುವ ಸತೀಶ ಜಾರಕಿಹೊಳಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

-ಕೇಶವ ಆದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next