Advertisement
ಇದು ಸಿನೆಮಾ ಕಥೆಯೆ? ಪೌರಾಣಿಕ ಕಥೆಯೆ? ಹೀಗೆಲ್ಲ ಹೇಳಿದಂತೆ ನಡೆಯಲು ಸಾಧ್ಯವೆ? ಎಂದು ಪ್ರಶ್ನೆ ಬರಬಹುದು. ಒಂದೋ ಇದೆಲ್ಲಕ್ಕೂ ಸಾಕ್ಷಿಯಾಗಿರುವ 85ರ ವಯೋವೃದ್ಧೆ ಮುಗೆœ ನರ್ಸಿ ಮಾತನ್ನು ಒಪ್ಪಬೇಕು, ಇಲ್ಲವೆ ಇವರ, ಪರಿಸರದವರ, ಮನೆಯವರ ಸಾಕ್ಷಿಗಳನ್ನು ಅಲ್ಲಗಳೆಯಬೇಕು. ಈ ವಂಡರ್ ಭೇದಿಸುವವರಿದ್ದರೆ ನರ್ಸಿಯವರನ್ನು ಭೇಟಿಯಾಗಬಹುದು.***
ಕಾಸರಗೋಡು ಜಿಲ್ಲೆ ಮಂಜೇಶ್ವರದ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ಹಿಂದೆ ದರ್ಶನ ಪದ್ಧತಿ ಇತ್ತು. ಇದು ಸುಮಾರು 1930ರಲ್ಲಿ ನಿಂತು ಹೋಯಿತು. ಅದು ಸಹಜವಾಗಿ ನಿಂತುಕೊಂಡು ಮಾಡುತ್ತಿದ್ದ ದರ್ಶನವಲ್ಲ. ಕಾಲ ಹೆಬ್ಬೆರಳ ತುದಿಯಲ್ಲಿ ನಿಂತುಕೊಂಡು ಮಾಡುತ್ತಿದ್ದ ದರ್ಶನ. ರಾತ್ರಿ ಇಡೀ ಸುಮಾರು 10 ಕೆ.ಜಿ. ತೂಕದ ದೇವರ ವಿಗ್ರಹವನ್ನು ತಲೆ ಮೇಲೆ ಹೊತ್ತು ನಡೆಯುತ್ತಿದ್ದ “ದೇವದರ್ಶನ’. ಮಾತಿರಲಿಲ್ಲ. ಕೈಸನ್ನೆ ಮೂಲಕ ಹೇಳುವುದನ್ನು ಅನುವಾದಿಸಲು ನುರಿತವರು ಇರುತ್ತಿದ್ದರು. 1850ರ ಸುಮಾರಿಗೆ ಹಿಂದೊಮ್ಮೆ ದರ್ಶನ ನಿಂತು ಹೋಗಿತ್ತು. ದರ್ಶನ ಮತ್ತೆ ಬರುವಂತೆ ಆಗಲು ಆಗಿನ ಶ್ರೀಕಾಶೀ ಮಠಾಧೀಶರಾದ ಶ್ರೀಭುವನೇಂದ್ರತೀರ್ಥ ಸ್ವಾಮೀಜಿಯವರು ಮೊಣಕಾಲಿನಲ್ಲಿ ರಕ್ತ ಸುರಿಯುತ್ತಿದ್ದರೂ (ಒಳಸುತ್ತಿನಲ್ಲಿ ಈಗಲೂ ಮಣ್ಣಿನ ನೆಲ) ಸುಮಾರು 600-700 ಸುತ್ತು ಬಂದು (ಪ್ರತಿ ಸುತ್ತಿಗೆ ಒಂದು ಬಾರಿ ವಿಷ್ಣುಸಹಸ್ರನಾಮ ಪಾರಾಯಣ ಮಾಡುತ್ತ) ಪ್ರಾರ್ಥಿಸಿದಾಗ ಪಾತ್ರಿಗೆ ಆವೇಶ ಬಂದು “ಮುಂದಿನ ದಿನಗಳಲ್ಲಿ ಸಂಸ್ಥಾನದಿಂದ ಹೀಗೆ ಒತ್ತಡ ತರಬಾರದು. ಧರ್ಮಸಂಕಟಕ್ಕೆ ಸಿಲುಕಿಸಿದಂತೆ ಆಗುತ್ತದೆ’ ಎಂದು ನುಡಿದರಂತೆ. ಅನಂತರ ಸುಮಾರು 1930ರಲ್ಲಿ ದರ್ಶನದ ನುಡಿಯ ಸಮರ್ಪಕ ಅನುಷ್ಠಾನವಾಗದ ಕಾರಣ ನಿಂತದ್ದು ಮತ್ತೆ ಬರಲಿಲ್ಲ, ಆಗ “18 ಪೇಟೆಯ ಜನರು ಕಷ್ಟಕಾಲದಲ್ಲಿ ಅಂತಃಕರಣಪೂರ್ವಕವಾಗಿ ಪ್ರಾರ್ಥನೆ ಮಾಡಿದರೆ ಮತ್ತೆ ಬರುತ್ತೇನೆ, ಈಗಲೂ ಸಂಕಷ್ಟದಲ್ಲಿ ಪ್ರಾರ್ಥಿಸಿದರೆ ಅಭಯ ನೀಡುತ್ತೇನೆ’ ಎಂದು ನಿಂತು ಹೋಯಿತು. “ಮತ್ತೆ ದರ್ಶನವನ್ನು ಬರಿಸಲು ನಿರಂತರ ಪ್ರಯತ್ನ ನಡೆಯುತ್ತಲೇ ಇದೆ. ಒಂದು ವೇಳೆ ದರ್ಶನ ಬಂದರೂ ಪಾತ್ರಿಗಳ ಕೈಸನ್ನೆಯನ್ನು ಡೀಕೋಡ್ ಮಾಡುವವರ ಕೊರತೆಯೂ ಇದೆ’ ಎನ್ನುತ್ತಾರೆ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದ ಕೊಂಚಾಡಿ ಗುರುದತ್ ಕಾಮತ್.
***
ಇಂತಹ ಅನೇಕ “ಸಿದ್ಧಿ ಸಾಧನೆ’ ಪಾತ್ರಿಗಳು ವಿವಿಧ ಸಮುದಾಯಗಳಲ್ಲಿದ್ದರು. ಇಂತಹವರಲ್ಲಿ ಇತ್ತೀಚಿನ ದಶಕಗಳಲ್ಲಿದ್ದ ಸಾಲಿಗ್ರಾಮ ಕಾರ್ಕಡದ ಬೋಳಪ್ಪಯ್ಯ (ನರಸಿಂಹ ಉಪಾಧ್ಯ) ಅವರನ್ನು ಉಲ್ಲೇಖೀಸಬಹುದು. ಇಂತಹ ಗಟ್ಸ್ (ಸವಾಲೆಸೆಯುವ ಧೈರ್ಯ) ಸಗ್ರಿ ಅನಂತ ಸಾಮಗರಿಗೆ (ಈಗಿನವರ ಅಜ್ಜ), ಅಲ್ತಾರು ಉಡುಪರು ಮೊದಲಾದವರಿಗೆ ಇತ್ತು. ದಲಿತರಿಂದ ಹಿಡಿದು ಬ್ರಾಹ್ಮಣರ ವರೆಗೆ ಒಂದೇ ತೆರನಾದ ಜೀವನದ “ಆಂತರಿಕ ಶಕ್ತಿ ಪ್ರವಾಹ’ ಹರಿಯುತ್ತಿತ್ತು ಎಂದು ನಿರ್ಧಾರಕ್ಕೆ ಬರಲು ಮೇಲಿನ ಕೆಲವು ಉದಾಹರಣೆಗಳು ಸಾಕಾಗಬಹುದು. ಹಿಂದು-ಮುಸ್ಲಿಮರ ಏಕತೆಗೆ ಕಾರಣವಾದ ಅಥವಾ ಎರಡರ ಸಂಸ್ಕೃತಿಯನ್ನೂ ಒಳಗೊಂಡ ಸೂಫಿತಣ್ತೀದ (ಸೂಫಿಸಂ) ಸಂತರ ಬದುಕಿನಲ್ಲಿಯೂ ಇಂತಹ ಶಕ್ತಿಗಳಿದ್ದವು ಎಂಬುದನ್ನು ಹಂಪಿ ವಿ.ವಿ. ಹಿರಿಯ ಪ್ರಾಧ್ಯಾಪಕ, ಚಿಂತಕ ಡಾ|ರಹಮತ್ ತರಿಕೆರೆ ಅವರು “ಕರ್ನಾಟಕದ ಸೂಫಿಗಳು’ ಪುಸ್ತಕದಲ್ಲಿ ವಿವರಿಸಿದ್ದಾರೆ. ಇವುಗಳ ಹಿಂದಿನ ಗುಟ್ಟು ಏನು?
***
ಡಾ|ಶಿವರಾಮ ಕಾರಂತರು ಪುತ್ತೂರಿನಲ್ಲಿ 1930, 40ರ ದಶಕದಲ್ಲಿದ್ದಾಗ ವೃದ್ಧ ದಂಪತಿ ಬೇಡಲು ಬರುತ್ತಿದ್ದರು. ಗುರುವಾರ ಬರುತ್ತಿದ್ದ ಕಾರಣ ಅವರನ್ನು “ಗುರುವ’ ಎಂದು ಕರೆಯುತ್ತಿದ್ದರು. ಗುರುವಾರ ಮಧ್ಯಾಹ್ನ ಅವರಿಗೆ ಕಾರಂತರ ಮನೆಯಲ್ಲಿ ಊಟ ನಡೆಯುತ್ತಿತ್ತು. ಮುಂದೊಂದು ದಿನ ಒಬ್ಬರೇ ಬರುವಾಗ ಕೇಳಿದ ಪ್ರಶ್ನೆಗೆ ಉತ್ತರ ಹೀಗಿತ್ತು: “ಪತ್ನಿಯನ್ನು ಕಳುಹಿಸಿಕೊಟ್ಟ’ನಂತೆ.
Related Articles
***
ಇಂದು ಏನಾಗಿದೆ? ಯಾವುದಕ್ಕೂ ಕರೆನ್ಸಿ ನೋಟುಗಳಿಗೆ ಕೊರತೆ ಇಲ್ಲ, ನೋಟು ಬ್ಯಾನ್ ಮಾಡಿದರೂ! ಕೊರತೆ ಇರುವುದು ಕಾರಂತರ ಭಾಷೆಯಲ್ಲಿ ಹೇಳುವುದಾದರೆ “ಆಂತರಿಕ ಸಜ್ಜನಿಕೆ’. ಎಲ್ಲ ವರ್ಗಗಳಲ್ಲಿಯೂ ಆಂತರಿಕ ಶಕ್ತಿ ಜರ್ರನೆ ಉಡುಗಿ ಹೋಗಿದೆ. ಆಗಲೂ ಈ ವಿಷಯದಲ್ಲಿ ಸಮಾನತೆ ಇತ್ತು/ ಈಗಲೂ ಇದೆ ಅಂದರೆ ಆಗ ಎಲ್ಲ ವರ್ಗದ ಬಹುತೇಕರಲ್ಲಿ ಸಜ್ಜನಿಕೆ ಇತ್ತು, ಈಗ ಎಲ್ಲ ವರ್ಗದ ಬಹುತೇಕರಲ್ಲಿ ಇಲ್ಲ ಎಂಬುದಕ್ಕೆ ಆಕ್ಷೇಪಗಳಿರಲಾರದು. ಸಜ್ಜನಿಕೆ ಹಿಂದೆ ಸರಾಸರಿಗಿಂತ ಹೆಚ್ಚಿಗೆ ಇತ್ತು, ಈಗ ಸರಾಸರಿಗಿಂತ ತೀರಾ ಕಡಿಮೆ ಇದೆ. ವಿಭಿನ್ನ ಸಿದ್ಧಾಂತವಾದಿಗಳು ಹೇಳುವ “ಬಹುತ್ವ’= “ಬಹುಸಂಸ್ಕೃತಿಗಳು’ ಮತ್ತು “ವಿವಿಧತೆಯಲ್ಲಿ ಏಕತೆ’ ಈ ಘೋಷವಾಕ್ಯಗಳ ಸಾರ ಒಂದೇ ತೆರನಾಗಿ ಕಾಣುತ್ತದೆ. ಆದರೆ ಇವೆಲ್ಲ ಆಯಾ ಸಿದ್ಧಾಂತಿಗಳಲ್ಲಿ ಆಚರಣೆಗಿಂತ ವಾದಗಳಿಗೆ ಬಳಕೆಯಾಗುತ್ತಿದೆ. ಮನೆಗಳಿರಲಿ, ಪೂಜಾ ಸ್ಥಾನಗಳಿರಲಿ ಎಲ್ಲವೂ ಹಣಬಲದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ನಿಸರ್ಗಕ್ಕೆ ನಮ್ಮ ಅಂತಸ್ತು, ಘನಸ್ತಿಕೆ ಎಲ್ಲವೂ ತೃಣಸಮಾನ. “ಭೂಮಿಗೆ ನಿಮ್ಮ ಪ್ರೀತಿ, ಅನುಕಂಪ ಬೇಡ. ಅದು ನಮ್ಮಂತಹ ಕೋಟಿ ಕೋಟಿ ಜನರನ್ನು ಕಂಡಿದೆ, ಮುಂದೆಯೂ ಕಾಣುತ್ತದೆ. ಭೂಮಿಯ ಒಂದು ಭಾಗ ನಾವು ಎಂಬ ಭಾವನೆ ಇದ್ದರೆ ಸಾಕು’ ಎಂದು ವನ್ಯಜೀವಿತಜ್ಞರಾದ ಕೃಪಾಕರ ಮತ್ತು ಸೇನಾನಿ ಇತ್ತೀಚಿಗೆ ಹೇಳಿದ್ದರು. ಕಾರಂತ- ಗುರುವರ ಘಟನೆಯಲ್ಲಿ ಕೇವಲ ಪ್ರಾಮಾಣಿಕತೆ ಕುತೂಹಲದ ವಿಷಯವಲ್ಲ, ಸಾವನ್ನು ಮುಂಚಿತವಾಗಿ ಅರಿತ ಗುರುವರ ಆಂತರಿಕ ಸಾಮರ್ಥ್ಯ ಬೆಳೆದದ್ದು ಪ್ರಾಮಾಣಿಕತೆಯ ಫಲ/ಬಲದಿಂದ ಎಂಬ ತರ್ಕ ಹುಟ್ಟಿಕೊಳ್ಳುತ್ತದೆ, ಇಂಥವು ಒಂದರ್ಥದಲ್ಲಿ “ಅಬ್ಸರ್ವೇಶನ್ ಸೈನ್ಸ್’ ಇದ್ದಂತೆ.
Advertisement
ಮೇಲೆ ಉದಾಹರಿಸಿದ ಎಲ್ಲರೂ ಅಥವಾ ಇಂತಹ ಗುಣಧರ್ಮದವರೆಲ್ಲರೂ ಆರ್ಥಿಕ ಮನ್ನಣೆ ಇದ್ದವರಲ್ಲ. ಇವರೇ ನಿಜವಾಗಿ ದೇವರಿಗೂ, ನಿಸರ್ಗಕ್ಕೂ ಪ್ರೀತಿಪಾತ್ರರು, ನಾವು ತಿಳಿದುಕೊಂಡ ಸೋ ಕಾಲ್ಡ್ ಪ್ರತಿಷ್ಠಿತರಲ್ಲ ಎಂಬ ಸಿದ್ಧಾಂತವೂ ತೆರೆದುಕೊಳ್ಳುತ್ತದೆ. ನಿಷ್ಕಳಂಕ ಮನಸ್ಸಿನ ಈ ಪಾಸಿಟಿವ್ ಗುಣಗಳೂ ಇಳಿಮುಖವಾಗುತ್ತಿರುವುದನ್ನು ಕಂಡಾಗ ಈ ಗುಣಗಳಿಗೂ ಆಗಸದಿಂದ ಸುರಿಯುವ ಮಳೆಗೂ ಏನಾದರೂ ಲಿಂಕ್ ಇದೆಯೆ? ಇಂತಹ ಮನಸ್ಸುಗಳು ಕಾಡು, ನದಿ, ಗುಡ್ಡ ಬೆಟ್ಟಗಳ ಮೇಲೆರಗಿ ಅದರಿಂದ ಮಳೆ ಮೇಲೆ ಪರಿಣಾಮ ಉಂಟು ಮಾಡುವ “ನೈಸರ್ಗಿಕ (ಮನೋ)ವಿಜ್ಞಾನ”ದ ಕಾರ್ಯಾಚರಣೆ ಇದು ಆಗಿರಬಹುದೆ ಎಂಬ ಸಂಶಯ ಮೂಡುತ್ತದೆ.
– ಮಟಪಾಡಿ ಕುಮಾರಸ್ವಾಮಿ