Advertisement
ಮಧುರ ಕಂಠದ ಗಾಯಕಿ ಆಶಾ ಭೋಂಸ್ಲೆ ಇತ್ತೀಚೆಗೆ ಒಂದು ಫೋಟೋವನ್ನು ಟ್ವೀಟಿಸಿದ್ದರು. ಬಾಗೊªàಗ್ರಾದಿಂದ ಕೋಲ್ಕತ್ತಾಕ್ಕೆ ಹೊರಟಿದ್ದ ಅವರಿಗೆ ವಿಮಾನಕ್ಕೆ ಕೆಲ ಹೊತ್ತು ಕಾಯಬೇಕಿತ್ತು. ಏರ್‌ಪೋರ್ಟ್‌ನ ವೇಟಿಂಗ್ ರೂಮ್‌ನಲ್ಲಿ ಸೋಫಾದ ಮೇಲೆ ಒರಗಿದರು. ಅವರ ಅಕ್ಕಪಕ್ಕದಲ್ಲಿ ನಾಲ್ವರು ತರುಣರು ಕುಳಿತು, ಅದೇ ವಿಮಾನಕ್ಕೆಂದೇ ಕಾಯುತ್ತಿದ್ದರು. ಇನ್ನೂ ನಲ್ವತ್ತೋ ಐವತ್ತೋ ನಿಮಿಷ ಕಾಯಬೇಕಿತ್ತು. ಅಲ್ಲಿದ್ದ ನವತರುಣರು ಯಾರೂ ಯಾರ ಬಳಿಯೂ ಮಾತಾಡುತ್ತಿಲ್ಲ ಎಂಬಂಥ ವಿಚಿತ್ರ ಮೌನ ಆ ಕೋಣೆಯನ್ನು ಆಳುತ್ತಿತ್ತು. ಅದಕ್ಕೆ ಕಾರಣ, ಆ ನಾಲ್ವರ ಕೈಯಲ್ಲಿದ್ದ ಸ್ಮಾರ್ಟ್‌ಫೋನು. ಮೊಬೈಲ್ ಪರದೆಯಲ್ಲಿ ಅವರೆಲ್ಲ ಏನನ್ನೋ, ನೋಡುತ್ತಾ, ಕೇಳುತ್ತಾ, ಮಾಯಾಲೋಕದಲ್ಲಿ ಮುಳುಗಿದ್ದಾರೆ. ಆ ಯುವಕರ ಅವಸ್ಥೆ ಕಂಡು ಆಶಾ ಭೋಂಸ್ಲೆ, ಎರಡೂ ಕೈಯನ್ನು ಕೆನ್ನೆಗೆ ಕಂಬವಾಗಿಸಿ, ಸುಮ್ಮನೆ ಕುಳಿತುಬಿಟ್ಟಿದ್ದರು.
Related Articles
Advertisement
ಮೊನ್ನೆ ಕೆಫೆಯೊಂದರ ಹುಡುಗನೊಬ್ಬ ಹೇಳುತ್ತಿದ್ದ… “ಚಹಾ ಕುಡಿಯಲೆಂದೋ, ಒಟ್ಟಿಗೆ ಊಟ ಮಾಡಲೆಂದೋ ಬರುತ್ತಾರೆ. ಆದರೆ, ಇಲ್ಲಿ ಪರಸ್ಪರ ಮಾತಿಗಿಂತ ಹೆಚ್ಚಾಗಿ ಅವರೆಲ್ಲ ತಮ್ಮ ಮೊಬೈಲಿನೊಳಗೆ ಮುಳುಗಿರುತ್ತಾರೆ. ಟೈಟಾನಿಕ್ ಹಡಗಿನಂತೆ ಅವರೆಲ್ಲ, ಮುಳುಗಿ ಹೋಗೋದನ್ನು ನಿತ್ಯವೂ ನೋಡುತ್ತಿರುತ್ತೇನೆ. ಎಷ್ಟೋ ಸಲ ಅವರ ಮಾತಿರಲಿ, ನಾನೇ “ಬೇರೇನು ಬೇಕು ಸರ್?’ ಅಂತ ಕೇಳಿದಾಗಲೂ, ತಲೆ ತಗ್ಗಿಸಿಯೇ ಕೂತಿರುತ್ತಾರೆ. ಮತ್ತೆ ನಾನೇ ಎರಡನೇ ಸಲ ಕೇಳಿ, ಮೊಬೈಲೊಳಗಿಂದ ಅವರನ್ನು ಮೇಲಕ್ಕೆತ್ತಬೇಕು’ ಎನ್ನುವ ಅವನ ಮಾತಿನಲ್ಲಿ, ದೈನಂದಿನ ಸಾಹಸದ ದಣಿವಿತ್ತು. ಇನ್ನೊಬ್ಬರಾರೋ ಮೊಬೈಲ್ ನೋಡುತ್ತಾ, ಇಡ್ಲಿ ಸಾಂಬಾರ್ ಆರ್ಡರ್ ಮಾಡಿ, ಕೊನೆಗೆ “ಮಸಾಲೆ ದೋಸೆ ಯಾಕೆ ತರ್ಲಿಲ್ಲ?’ ಅಂತ ಜಗಳಕ್ಕೂ ನಿಂತುಬಿಟ್ಟರಂತೆ.
ಹಿಂದೆ ಘೋರ ತಪಸ್ವಿಗಳೆಲ್ಲ ಓಂಕಾರದ ಹೊರತಾಗಿ, ಮಾತೇ ಆಡುತ್ತಿರಲಿಲ್ಲ ಎನ್ನುವುದನ್ನು ಕೇಳಿದ್ದೇವೆ. ಅಂತರಂಗದ ಪರದೆ ಮೇಲೆ ಪ್ರತ್ಯಕ್ಷಗೊಂಡ, ದೇವರ ಜತೆಗಷ್ಟೇ ಸಂವಹಿಸುತ್ತಿದ್ದರಂತೆ. ಆದರೆ, ಈ ಕಾಲದಲ್ಲಿ ದೇವರನ್ನು ಹುಡುಕುವ ಅಂಥ ಘೋರ ತಪಸ್ವಿಗಳು ಕಾಣಿಸುತ್ತಿಲ್ಲ. ಮೊಬೈಲಿನಲ್ಲಿ ಇಣುಕುವುದೇ ಈ ದಿನಗಳ ಧ್ಯಾನ. ಮೇನಕೆ ನರ್ತಿಸಿದರೂ, ತಪಸ್ಸು ಭಗ್ನಗೊಳ್ಳದ ವಿಶ್ವಾಮಿತ್ರರು ಇಲ್ಲಿರುವರು. ಯಾರೂ ಯಾರನ್ನೂ ಅಲುಗಾಡಿಸಲೂ ಆಗ ಮಹಾನ್ ತಪಸ್ವಿಗಳ ಯುಗವಿದು. ವಾಯು ದೇವನ ಗಾಳಿಯ ದಾಳಿಗೂ, ಅಗ್ನಿಯೇ ಕೆನ್ನಾಲಿಗೆ ಚಾಚಿದರೂ, ವರುಣದೇವ ಚಂಡಿ ಹಿಡಿಸುವ ಮಳೆಗೈದರೂ, ವಿಚಲಿತರಾಗದ “ಮಹಿಷಿ ಸಂಕಲ್ಪ’ದಂತೆ ಅನೇಕರ ಡಿಜಿಟಲ್ ಧ್ಯಾನ. ಅವರ ಸಂವಹನ ಏನಿದ್ದರೂ, ಅದೇ ಸ್ಮಾರ್ಟ್ ಪರದೆಯ ದೇವರ ಜತೆ. ಕೇಳಿದ್ದನ್ನೆಲ್ಲ ತೋರಿಸುತ್ತಾನೆ, ಬಯಸಿದ್ದಕ್ಕೆಲ್ಲ ಪರಿಹಾರ ಕೊಡುತ್ತಾನೆ, ಅವನನ್ನು ಓಲೈಸಿಕೊಳ್ಳಲು ಗಡ್ಡ ಬಿಟ್ಟು, ಹತ್ತಾರು ವರುಷ ಕಾಯಬೇಕಿಲ್ಲ; ನಿಮಿಷ ಸಾಕಷ್ಟೇ.
ಹಾಗೆ ನೋಡಿದರೆ, ಈ ಸ್ಮಾರ್ಟ್‌ಫೋನ್ ಕಣ್ಣಿಗೆ ಕಾಣದ ಉಗ್ರನಿದ್ದಂತೆ. ಬಗಲಲ್ಲಿ ಬಂದೂಕು ತೂಗಿಸಿಕೊಳ್ಳದೇ, ಬೆದರಿಕೆಯಿಂದ ಬೆಚ್ಚಿ ಬೀಳಿಸದೇ, ಮನಸ್ಸುಗಳನ್ನು ಕ್ಷಣಮಾತ್ರದಲ್ಲೇ ಅಪಹರಿಸಿಬಿಡುವ ಸ್ಮಾರ್ಟ್‌ಫೋನ್, ಮಹಾ ಪಾಕಡಾ. ಈ ಸೂಕ್ಷ¾ ನಿಮಗೂ ತಟ್ಟಿರಬಹುದು. ಮನೆಯಲ್ಲಿ ಹಿರಿಯರೇನೋ ಹೇಳುತ್ತಿರುತ್ತಾರೆ, ಕಿರಿಯರು ಅದನ್ನು ಕಿವಿಯಲ್ಲೂ ಬಿಟ್ಟುಕೊಳ್ಳದೇ, ವಾಟ್ಸಾéಪ್‌ನಿಂದ ಬಂದ ಇನ್ನಾವುದೋ ಸಂದೇಶಕ್ಕೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.
ನಿಜ ಅಲ್ವಾ? ಕಣ್ಮುಂದೆ ಯಾವುದೋ ಗುಂಡಿ ಇದ್ದರೆ, ಅಲ್ಲಿಗೆ ಬೇಲಿಯನ್ನೋ, ತಡೆಗೋಡೆಯನ್ನೋ ಕಟ್ಟಿ, ಅದರೊಳಗೆ ಮನುಷ್ಯರು ಧೊಪ್ಪನೆ ಬೀಳುವ ಅಪಾಯವನ್ನು ತಪ್ಪಿಸಬಹುದಿತ್ತು. ಆದರೆ, ಅಂಗೈಯಲ್ಲಿ ಪ್ರಪಂಚ ಹಬ್ಬಿಸಿಕೊಂಡಿರುವ ಮೊಬೈಲಲ್ಲೇ ಒಂದು ಕಾಣದ ಪ್ರಪಾತವಿದೆ. ಅದಕ್ಕೆ ಮಹಾಗೋಡೆ ಕಟ್ಟುವ “ಶಿ ಹುವಾಂಗ್ ಟಿ’ ಇಲ್ಲಾéರೂ ಇಲ್ಲ. ಕಣ್ತೆರೆದೇ ಆ ಪ್ರಪಾತದೊಳಗೆ ಬೀಳುವ ಸುಖದಲ್ಲಿದ್ದೇವೆ ಎಲ್ಲರೂ.
ಅಂದಹಾಗೆ, ಆಶಾ ಭೋಂಸ್ಲೆಯ ಅಕ್ಕಪಕ್ಕ ಕುಳಿತವರೆಲ್ಲ ಬೇರೆಲ್ಲೂ ಹೋಗಿರಲಿಲ್ಲ. ಕೆಫೇ ಹುಡುಗ ಕಂಡ ಟೈಟಾನಿಕ್ಕೊಳಗೇ ಇದ್ದರು! ನಾವೂ ಅಲ್ಲೇ ಇದ್ದೇವಾ?ಕೀರ್ತಿ ಕೋಲ್ಗಾರ್