ಕಾಲೇಜಿನಲ್ಲಿ ಯಾವ ಹುಡುಗಿಯನ್ನು ನೋಡಿದರೂ ಅವರ ಮೇಲೆ ಪ್ರೀತಿ ಹುಟ್ಟುವುದು ಅಥವಾ ಕ್ರಶ್ ಆಗುವುದು ಮಾಮೂಲಿ. ಆದರೆ, ಈಕೆಯನ್ನು ನೋಡಿದಾಗ- ತಂಗ್ಯಮ್ಮಾ ಎಂದು ಕರೆಯಬೇಕೆಂಬ ಮನಸ್ಸಾಯಿತು…
ಡಿಗ್ರಿ ಅಂದ್ರೆ ಕೇವಲ ಓದು, ಆಟ, ಪಡ್ಡೆ ಹುಡುಗರ ಕಾಟ, ಚೆಂದುಳ್ಳಿ ಚೆಲುವೆಯರ ನೋಟ, ಪ್ರೇಮ ಪಕ್ಷಿಗಳ ಹಾರಾಟ. ಇವುಗಳ ಮಧ್ಯೆ ಕ್ಲಾಸ್‌ಗೆ ಬಂಕ್ ಹಾಕಿ ಎಂಜಾಯ್ ಮಾಡೋಣ ಎಂದರೆ ಹಾಳಾದ್ ಅಟೆಂಡೆನ್ಸ್ ಶಾಟೇìಜ್ ಕಾಟ! ಇವಷ್ಟೇ ಕಾಲೇಜ್ ಲೈಫ್ ಅಂದುಕೊಂಡಿದ್ದ ನನಗೆ, ಅವಳು ಸಿಗುತ್ತಾಳೆಂಬ ಅಂದಾಜು ಖಂಡಿತಾ ಇರಲಿಲ್ಲ. ಅವಳು ಯಾರು ಗೊತ್ತಾ? ದೇವರು ಕೊಟ್ಟ ನನ್ನ ತಂಗಿ!
ನಾನು ಆಕೆಯನ್ನ ಮೊದಲು ನೋಡಿದ್ದು ಎರಡು ವರ್ಷದ ಹಿಂದೆ ಮ್ಯೂಸಿಕ್ ಕ್ಲಾಸಲ್ಲಿ. ಅವಳು ಅಲ್ಲಿಯವರೆಗೂ ನನಗೆ ಅಪರಿಚಿತಳು. ಈ ವಯಸ್ಸಿನಲ್ಲಿ ಯಾವ ಹುಡುಗಿಯರನ್ನು ನೋಡಿದರೂ ಅವರ ಅಂದಕ್ಕೆ ಸೋತು ಪ್ರೀತಿ ಹುಟ್ಟುವುದು ಹಾಗೂ ಕ್ರಶ್ ಆಗುವುದು ಮಾಮೂಲಿ. ನನಗೆ ಹಾಗಲ್ಲ. ಅವಳನ್ನ ನೋಡಿದ ಮರುಕ್ಷಣವೇ ತಂಗಿ ಎಂದು ಅವಳನ್ನು ಬಾಯ್ತುಂಬಾ ಕರೆಯಬೇಕೆನಿಸಿತ್ತು. ಆದರೆ, ನಾನು ತಂಗಿ ಎಂದು ಕರೆದರೆ ಅವಳೇನು ಅಂದುಕೊಂಡುಬಿಡುತ್ತಾಳ್ಳೋ ಎಂಬ ಭಯದಲ್ಲಿ, ಮನಸ್ಸಿಲ್ಲದಿದ್ದರೂ ಅವಳ ಹೆಸರು ಹೇಳಿ ಮಾತನಾಡಿಸುತ್ತಿದ್ದೆ. ಆ ದೇವರಿಗೆ ನನ್ನ ನೋವು ಅರ್ಥವಾಯಿತೋ ಏನೋ, ಆಕೆಗೆ ತಂಗಿ ಎನ್ನಲು ಆ ರಾಖೀ ಹಬ್ಬದಂದು ನನಗೆ ಲೈಸೆನ್ಸ್ ಕೊಡಿಸಿಯೇಬಿಟ್ಟ. ಇಂದಿಗೂ ಆಕೆ ಕಟ್ಟಿದ ಮೊದಲ ರಾಖೀಯನ್ನು ನಾನು ನನ್ನಲ್ಲಿಯೇ ಜೋಪಾನವಾಗಿ ಇಟ್ಟುಕೊಂಡಿದ್ದೇನೆ.
ನಾನು ಹೈಸ್ಕೂಲಿನಲ್ಲಿರುವಾಗ ಅದೆಷ್ಟೋ ಹುಡುಗಿಯರು ರಾಖೀ ಕಟ್ಟಿ ಅಣ್ಣ ಎಂದಿದ್ದರೂ ಅವರನ್ನು ತಂಗಿ ಎಂದು ಕರೆದಿರಲಿಲ್ಲ. ಆದರೆ, ಈಕೆ ಕಟ್ಟಿದ ರಾಖೀ, ನನ್ನ ಅವಳ ಅಣ್ಣ- ತಂಗಿ ಸಂಬಂಧವನ್ನು ಅಷ್ಟು ಗಟ್ಟಿಮಾಡಿತ್ತು. ಅವಳಿಗೆ ಈ ಮೊದಲು ಅಣ್ಣ ಎನ್ನಲು ಬಹಳಷ್ಟು ಮಂದಿ ಇದ್ದರು. ಆದರೆ, ನನಗೆ ತಂಗಿ ಎನ್ನಲು ಇರುವುದು ಅವಳೊಬ್ಬಳೇ. ಹಾಗಾಗಿ, ಅವಳನ್ನ ನೋಡಿದಾಗಲೆಲ್ಲಾ ಈಕೆ ನನ್ನ ಸ್ವಂತ ತಂಗಿ ಎಂಬ ಭಾವ ಮೂಡುವುದು ತಪ್ಪಲ್ಲ. ಒಂದು ವೇಳೆ ಏನಾದರೂ ನನಗೆ ಸ್ವಂತ ತಂಗಿ ಇದ್ದಿದ್ದರೂ ನಾನು ಅವಳನ್ನ ಇಷ್ಟು ಹಚ್ಚಿಕೊಂಡಿರುತ್ತಿರಲಿಲ್ಲವೇನೋ?
– ರಾಘವೇಂದ್ರ ಹೊನ್ನಜ್ಜಿ. ಎಂ.ಎಂ. ಕಾಲೇಜು, ಶಿರಸಿ