Advertisement

ಚನ್ನಕೇಶವನ ಪಾದಸ್ಪರ್ಶ ಮಾಡದ ಸೂರ್ಯದೇವ

06:11 PM Apr 23, 2022 | Team Udayavani |

ಬೇಲೂರು: ಪ್ರತಿ ವರ್ಷದಂತೆ ಈ ಬಾರಿ ಇಲ್ಲಿನ ವಿಶ್ವ ಪ್ರಸಿದ್ಧ ಶ್ರೀ ಚನ್ನಕೇಶವ ಸ್ವಾಮಿ ದೇಗುಲದಲ್ಲಿ ಸೂರ್ಯ ರಶ್ಮಿ ಪ್ರವೇಶೋತ್ಸವ ಶುಕ್ರವಾರ ನಡೆಯಿತು. ಸೂರ್ಯ ರಶ್ಮಿಯ ವಾರ್ಷಿಕ ವಿಸ್ಮಯ ವೀಕ್ಷಿಸಿಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ, ಸೂರ್ಯ ಮಾತ್ರ ಕೇಶವನ ಪಾದಸ್ಪರ್ಶ ಮಾಡದೆ ಇರುವುದು ಕಾದು ಕುಳಿತ ಭಕ್ತರಿಗೆ ನಿರಾಸೆ ಮೂಡಿಸಿತ್ತು.

Advertisement

ಚನ್ನಕೇಶವಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷ ನಡೆಯುವ ಸೂರ್ಯರಶ್ಮಿ ಪ್ರವೇಶೋತ್ಸವ ಕೂಡ ಪ್ರಮುಖವಾಗಿದೆ. ಕಾಲ ನಿರ್ಣಯದಂತೆ ಏ.22ರಂದು ದೇಗುಲಕ್ಕೆ ಸೂರ್ಯನ ಕಿರಣಗಳು ಪ್ರವೇಶ ಮಾಡುವ ಕಾರಣದಿಂದ ಇಲ್ಲಿನ ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿ ಭಟ್ಟರ್‌ ಮುಂಜಾನೆಯೇ ಸ್ವಾಮಿಗೆ ವಿವಿಧ ಪೂಜೆಯ ಜೊತೆ ಅಭಿಷೇಕ ನಡೆಸಿ, ಸೂರ್ಯ ಕಿರಣಗಳಿಗೆ ಮುಕ್ತಾವಕಾಶ ಕಲ್ಪಿಸಿದರೂ ಸೂರ್ಯ ಮಾತ್ರ ಚನ್ನಕೇಶವಸ್ವಾಮಿಯಲ್ಲಿ ಕೋಪಗೊಂಡಂತೆ
ರಾಜಗೋಪುರ ದ ಮೂಲಕ ಧ್ವಜಸ್ತಂಭ, ಗುರುಡಗಂಬ, ಬಲೀಪೀಠ ಪ್ರವೇಶದ್ವಾರ, ನವರಂಗ, ಸುಕನಾಸಿಯಿಂದ ನೇರ ಗರ್ಭಗುಡಿಯನ್ನು ಪ್ರವೇಶಿಸಿ, ಚನ್ನಕೇಶವಸ್ವಾಮಿಯ ಪೀಠದ ಕೇಳಭಾಗದಲ್ಲಿನ ಗುರುಡ ವಾಹನದ ಮೇಲೆ ಸ್ವಲ್ಪ ಮಟ್ಟಿಗೆ ತಾಮ್ರವರ್ಣ ದ ಬೆಳಕು ಚೆಲ್ಲಿ ಸೂರ್ಯದೇವ ಹಿಂದೆತಿರುಗಿದನು.

ವಾರ್ಷಿಕ ವಿಸ್ಮಯ: ಈ ಸಂದರ್ಭದಲ್ಲಿ ದೇಗುಲದ ಅರ್ಚಕರು ಆಮಿಸಿದ ಸರ್ವ ಭಕ್ತರಿಗೆ ಹಾಗೂ ದೇವಾಲಯದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಕ್ಷೀರತೀರ್ಥವನ್ನು ನೀಡಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದರು. ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿಭಟ್ಟರ್‌, ಸೂರ್ಯರಶ್ಮಿ ಕಿರಣಗಳು ಬೇಲೂರು ಚನ್ನಕೇಶವ ದೇಗುಲದ ಗರ್ಭಗುಡಿ ಮೂರ್ತಿ ಮೇಲೆ ಪ್ರತಿ ವರ್ಷದ ಉತ್ತರಾಯಣ ಮತ್ತು ದಕ್ಷಿಣಾಯನ ಸಂದರ್ಭದಲ್ಲಿ ಪ್ರವೇಶಿಸುವ ವೇಳೆ ಇಲ್ಲಿನ ಭಕ್ತರು ವಾರ್ಷಿಕ ವಿಸ್ಮಯವೆಂದು ಕರೆಯುತ್ತಾರೆ.

ಉತ್ತರಾಯಣ ಕಾಲದಲ್ಲಿ ಬೇಸಿಗೆ ಹಿನ್ನೆಲೆ ಸೂರ್ಯನ ಕಿರಣಗಳು ಗೋಚರಿಸುತ್ತವೆ. ಆದರೆ ದಕ್ಷಿಣಾಯನ ವೇಳೆ ಮಳೆಗಾಲದ ಸಂದರ್ಭದಲ್ಲಿ ಮೋಡ ಕವಿದ ನಿಟ್ಟಿನಲ್ಲಿ ಕಾಣುವುದಿಲ್ಲ. ಹೊಯ್ಸಳರ ದೇಗುಲಗಳು ಬಹುತೇಕ ಪೂರ್ವಾಭಿಮುಖವಾಗಿದ್ದು, ಸೌರಮಾನದ ಗಣನೆಗಳು ಹಾಗೂ ವಾಸ್ತು ನಿರ್ಮಾಣಗಳಲ್ಲಿನ ಕಾಲ ನಿರ್ಣಯಗಳಿಂದ ನಿಗದಿ ದಿನಾಂಕ ಪತ್ತೆ ಹಚ್ಚಿ ಕೇಶವನ ಭಕ್ತರಿಗೆ ಪ್ರತಿ ವರ್ಷ ಸೂರ್ಯರಶ್ಮಿ ಪ್ರವೇಶೋತ್ಸವಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ಸೂರ್ಯ ಕಿರಣ ಪ್ರಕಾಶಿಸಲಿಲ್ಲ: ಕಳೆದ ಎರಡು ವರ್ಷದಿಂದ ಕೋವಿಡ್‌ ಕಾರಣದಿಂದ ಭಕ್ತರಿಗೆ ಪ್ರವೇಶ ಇಲ್ಲದ ಹಿನ್ನೆಲೆ ಈ ಬಾರಿ ಸ್ವಾಮಿಯ ಮೇಲಿನ ಸೂರ್ಯರಶ್ಮಿ ವೀಕ್ಷಿಸಲು ನೂರಾರು ಭಕ್ತರು ದೇಗುಲಕ್ಕೆ ಬಂದಿದ್ದಾರೆ. ಸ್ವಲ್ಪ ಮಟ್ಟಿನ ಮೋಡ ಹಾಗೂ ಮಂಜಿನಿಂದ ಸೂರ್ಯನ ಕಿರಣಗಳು ಅಷ್ಟಾಗಿ ಕಂಡುಬಂದಿಲ್ಲ. ಕಳೆದ ಮೂರು ವರ್ಷದ ಹಿಂದೆ ಸೂರ್ಯ ರಶ್ಮಿಯಿಂದ ಇಡೀ ಕೇಶವನ ವಿಗ್ರಹ ಮೂರ್ತಿ ಚಿನ್ನದ ಬಣ್ಣದಿಂದ ಕಾಣಿಸಿದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚನ್ನಕೇಶವಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಪುರಸಭಾ ಸದಸ್ಯ ಶ್ರೀನಿವಾಸ್‌, ಸಮಿತಿ ಸದಸ್ಯರಾದ ರವಿಶಂಕರ್‌ ಹಾಗೂ ವಿಜಯಲಕ್ಷ್ಮಿ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದು ದೇವರ ಕೃಪೆಗೆ ಪಾತ್ರರಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next